Karnataka High Court 
ಸುದ್ದಿಗಳು

ನಗರಸಭೆ ಸದಸ್ಯನ ಕೊಲೆ ಯತ್ನ ಆರೋಪಿ ಅಗ್ರಹಾರ ಮುರಳಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

Bar & Bench

ಚಿಂತಾಮಣಿ ನಗರಸಭೆ ಸದಸ್ಯ ಅಗ್ರಹಾರ ಮುರಳಿ ಕೊಲೆ ಯತ್ನ ಪ್ರಕರಣದ ಮೊದಲ ಆರೋಪಿ ಡಿ ನರೇನ್‌ ಕುಮಾರ್‌ಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿದ್ದ ನರೇನ್ ಕುಮಾರ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಟಿ ವೆಂಕಟೇಶ್ ನಾಯ್ಕ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಅರ್ಜಿದಾರ ಎರಡು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಸಲ್ಲಿಸಬೇಕು. ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ಸಾಕ್ಷ್ಯಾಧಾರ ತಿರುಚಲು ಪ್ರಯತ್ನಿಸಬಾರದು. ಅಧೀನ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕು. ಇದೇ ಮಾದರಿಯ ಅಪರಾಧದಲ್ಲಿ ಭಾಗಿಯಾಗಬಾರದು ಎಂದು ಪೀಠ ಜಾಮೀನು ಮಂಜೂರಾತಿಗೆ ಷರತ್ತು ವಿಧಿಸಿದೆ.

ಏನಿದು ಪ್ರಕರಣ: 2023ರ ಅಕ್ಟೋಬರ್‌ 13ರಂದು ಸಂಜೆ 6.15ರ ಸುಮಾರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಗಜಾನನ ಸರ್ಕಲ್ ಬಳಿ ಅಪರಿಚಿತರ ಗುಂಪೊಂದು ನಗರಸಭೆ ಸದಸ್ಯ ಅಗ್ರಹಾರ ಮುರಳಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿತ್ತು. ಸ್ಥಳೀಯರು ಮುರಳಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಪ್ರಕರಣ ಸಂಬಂಧ ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ನಾಲ್ಕನೇ ಆರೋಪಿ ಮತ್ತು ಅಗ್ರಹಾರ ಮುರಳಿ ಮಧ್ಯೆ ವೈಯಕ್ತಿಕ ದ್ವೇಷವಿತ್ತು. ಆತನ ಪ್ರಚೋದನೆ ಮೇರೆಗೆ ಅಗ್ರಹಾರ ಮುರಳಿ ಕೊಲೆಗೆ ಅರ್ಜಿದಾರ ಯತ್ನಿಸಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿತ್ತು. ಇದರಿಂದ ಪೊಲೀಸರು ಅರ್ಜಿದಾರನನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ನರೇನ್‌ ಕುಮಾರ್‌ ಜಾಮೀನು ಕೋರಿ ಹೈಕೋರ್ಟ್ ಮೇಟ್ಟಿಲೇರಿದ್ದ.

ಈಗಾಗಲೇ ತನಿಖೆ ಪೂರ್ಣಗೊಂಡಿದ್ದು, ತನಿಖಾಧಿಕಾರಿಗಳು ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿ ಚೇತರಿಸಿಕೊಂಡಿದ್ದಾರೆ ಎಂಬುದು ಸೇರಿದಂತೆ ಇನ್ನಿತರ ಕಾರಣ ಪರಿಗಣಿಸಿದ ಹೈಕೋರ್ಟ್‌, ಅರ್ಜಿದಾರನಿಗೆ ಜಾಮೀನು ನೀಡಿದೆ.