Karnataka High Court 
ಸುದ್ದಿಗಳು

ಉದ್ಯಮಿಗೆ ಜೀವ ಬೆದರಿಕೆ ಪ್ರಕರಣ: ಭೂಗತ ಪಾತಕಿ ಬನ್ನಂಜೆ ರಾಜನ ಸಹಚರ ಶಶಿ ಪೂಜಾರಿಗೆ ಜಾಮೀನು

Siddesh M S

ಉಡುಪಿಯ ಉದ್ಯಮಿ ರತ್ನಾಕರ ಡಿ. ಶೆಟ್ಟಿಗೆ ಜೀವ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಕುಖ್ಯಾತ ರೌಡಿಶೀಟರ್‌ ಬನ್ನಂಜೆ ರಾಜನ ಸಹಚರ ಶಶಿ ಪೂಜಾರಿ ಅಲಿಯಾಸ್‌ ಶ್ಯಾಡೊ ಅಲಿಯಾಸ್‌ ಶಶಿಕುಮಾರ್‌ಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಜಾಮೀನು ಮಂಜೂರು ಮಾಡಿದೆ. ಈ ಪ್ರಕರಣದಲ್ಲಿ ಜಾಮೀನು ಪಡೆದ ನಾಲ್ಕನೇ ಆರೋಪಿ ಶಶಿಕುಮಾರ್‌ ಆಗಿದ್ದಾನೆ.

ಬೆಂಗಳೂರಿನ ಜೆ ಪಿ ನಗರದ ನಿವಾಸಿ ಶಶಿ ಪೂಜಾರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದ್ದು, ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

2019ರ ಮಾರ್ಚ್‌ 3ರಂದು ಉಡುಪಿಯ ಉದ್ಯಮಿ ರತ್ನಾಕರ ಶೆಟ್ಟಿ ನೀಡಿದ ದೂರಿನ ಮೇರೆಗೆ ಬನ್ನಂಜೆ ರಾಜ, ಶಶಿ ಪೂಜಾರಿ ಅಲಿಯಾಸ್‌ ಶಾಡೊ ಅಲಿಯಾಸ್‌ ಶಶಿಕುಮಾರ್‌, ಧನರಾಜ್‌ ವಿ. ಕೋಟ್ಯನ್‌ ಅಲಿಯಾಸ್‌ ಧನರಾಜ್‌ ಪೂಜಾರಿ ಅಲಿಯಾಸ್‌ ಧನರಾಜ್‌ ಅಲಿಯಾಸ್‌ ರಾಕ್‌, ರವಿಚಂದ್ರ ಪೂಜಾರಿ ಅಲಿಯಾಸ್‌ ವಿಕ್ಕಿ ಪೂಜಾರಿ, ಧನರಾಜ್‌ ಸಾಲಿಯಾನ್‌ ಅಲಿಯಾಸ್‌ ಧನು ಕೋಳ, ಉಲ್ಲಾಸ್‌ ಶೆಣೈ ಅಲಿಯಾಸ್‌ ಉಲ್ಲಾಸ್‌ ವಿರುದ್ಧ 2019ರಲ್ಲಿ ಉಡುಪಿ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 384, 387, 504, 506, 507,120(ಬಿ),109, 201 ಜೊತೆಗೆ 34 ಹಾಗೂ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ ಸೆಕ್ಷನ್‌ಗಳಾದ 3(i) (ii), 2(2), 3(4), 3(5) ಅಡಿ ಪ್ರಕರಣ ದಾಖಲಿಸಲಾಗಿದೆ. ಆನಂತರ ಪ್ರಕರಣವನ್ನು ಮೈಸೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.

ಬನ್ನಂಜೆ ರಾಜ ಸಂಘಟಿತ ಅಪರಾಧ ಸಿಂಡಿಕೇಟ್‌ನ ಕಿಂಗ್‌ಪಿನ್‌ ಆಗಿದ್ದು, ತನ್ನ ಸಹಚರರಾದ ಶಶಿ ಪೂಜಾರಿ, ಧನರಾಜ್‌ ಕೋಟ್ಯನ್‌, ರವಿಚಂದ್ರ ಪೂಜಾರಿ, ಧನರಾಜ್‌ ಮತ್ತು ಉಲ್ಲಾಸ್‌ ಶೆಣೈ ಮೂಲಕ ಶ್ರೀಮಂತ ಉದ್ಯಮಗಳಿಗೆ ಜೀವ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ್ದಾನೆ ಎಂದು ಪ್ರಾಸಿಕ್ಯೂಷನ್‌ ಆಕ್ಷೇಪಿಸಿತ್ತು.

ಕಳೆದ ಆಗಸ್ಟ್‌ 12ರಂದು ಬನ್ನಂಜೆ ರಾಜ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮೈಸೂರಿನ ಜಿಲ್ಲಾ ಸತ್ರ ನ್ಯಾಯಾಲಯವು ತಿರಸ್ಕರಿಸಿದೆ. ಅಂಕೋಲಾ ಉದ್ಯಮಿ ಆರ್‌ ಎನ್‌ ನಾಯಕ್‌ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಬನ್ನಂಜೆ ರಾಜ ಸದ್ಯ ಬೆಳಗಾವಿಯ ಹಿಂಡಲಗಾ ಜೈನಲ್ಲಿದ್ದಾನೆ.

ನಾಲ್ಕನೇ ಆರೋಪಿ ರವಿಚಂದ್ರ ಪೂಜಾರಿ ಅಲಿಯಾಸ್‌ ವಿಕ್ಕಿ ಪೂಜಾರಿ, ಐದನೇ ಆರೋಪಿ ಧನರಾಜ್‌ ಸಾಲಿಯಾನ್‌ ಅಲಿಯಾಸ್‌ ಧನು ಕೋಳ, ಆರನೇ ಆರೋಪಿ ಉಲ್ಲಾಸ್‌ ಶೆಣೈ ಅಲಿಯಾಸ್‌ ಉಲ್ಲಾಸ್‌ಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಜಾಮೀನು ಮಂಜೂರು ಮಾಡಿದೆ. ರವಿಚಂದ್ರ ಪೂಜಾರಿ ಮತ್ತು ಧನರಾಜ ಸಾಲಿಯಾನ್‌ಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದ್ದು, ಇದನ್ನು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.