Byrati Basavaraj and Karnataka HC FB
ಸುದ್ದಿಗಳು

ಬಿಕ್ಲು ಶಿವ ಕೊಲೆ ಪ್ರಕರಣ: ಬೈರತಿ ಬಸವರಾಜ್‌ಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ತನಿಖಾಧಿಕಾರಿಗಳು ಅರ್ಜಿದಾರರನ್ನು ಬಂಧಿಸಿದರೆ ಅವರಿಂದ 5 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ಪಡೆದು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಆದೇಶಿಸಿದ ನ್ಯಾಯಾಲಯ.

Bar & Bench

ರೌಡಿಶೀಟರ್‌ ಶಿವಪ್ರಕಾಶ್‌ ಅಲಿಯಾಸ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿರುವ ಬಿ ಎ ಬಸವರಾಜ ಅಲಿಯಾಸ್ ಬೈರತಿ ಬಸವರಾಜ್ ಅವರು ಅರ್ಜಿ ಇತ್ಯರ್ಥವಾಗುವವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಿ ಬಸವರಾಜ ಅವರ ರಜಾಕಾಲೀನ ಏಕಸದಸ್ಯ ಪೀಠ ಪುರಸ್ಕರಿಸಿತು.

Justice G Basavaraja

ತನಿಖಾಧಿಕಾರಿಗಳು ಅರ್ಜಿದಾರರನ್ನು ಬಂಧಿಸಿದರೆ ಅವರಿಂದ 5 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ಪಡೆದು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಆದೇಶಿಸಿದೆ.

ಇದೇ ವೇಳೆ, ಅರ್ಜಿದಾರರು ತನಿಖೆಗೆ ಸಹಕರಿಸಬೇಕು, ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ತಿರುಚುವುದಾಗಲಿ ಅಥವಾ ಸಾಕ್ಷಿಗಳಿಗೆ ಬೆದರಿಕೆ ಹಾಕುವುದಾಗಲಿ ಮಾಡಬಾರದು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ಬೈರತಿ ಬಸವರಾಜ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಜುಲೈನಿಂದ ಡಿಸೆಂಬರ್‌ 19ರವರೆಗೂ ಬೈರತಿ ಬಸವರಾಜ್‌ಗೆ ಹೈಕೋರ್ಟ್‌ ರಕ್ಷಣೆ ಒದಗಿಸಿತ್ತು. ಎರಡು ಬಾರಿ ಬಸವರಾಜ್‌ ತನಿಖೆಗೆ ಹಾಜರಾಗಿದ್ದಾರೆ. ಬೈರತಿ ಹಾಗೂ ಇನ್ನೊಬ್ಬ ಆರೋಪಿಯನ್ನು ಬಿಟ್ಟು 18 ಮಂದಿಯ ವಿರುದ್ಧ ಪ್ರಾಸಿಕ್ಯೂಷನ್‌ ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕರಿಸಲಾಗುವುದು. ಹೀಗಾಗಿ, ರಕ್ಷಣೆ ಮುಂದುವರಿಸಬೇಕು” ಎಂದರು.

ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ವಕೀಲ ಕೆ ನಾಗೇಶ್‌ ಅವರು “ಪ್ರಕರಣದಲ್ಲಿ ಬಿ ಎನ್‌ ಜಗದೀಶ್‌ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸಲಾಗಿದೆ. ಅರ್ಜಿದಾರರು ಜಗದೀಶ್‌ ಅವರಿಗೆ ಅರ್ಜಿ ವಿಚಾರಣೆಯ ಬಗ್ಗೆ ಮಾಹಿತಿ ನೀಡದೇ ಇರುವುದರಿಂದ ಹಾಗೂ ಅವರು ವಿದೇಶದಲ್ಲಿರುವುದರಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಹೀಗಾಗಿ, ಡಿಸೆಂಬರ್‌ 30ರ ನಂತರ ವಿಚಾರಣೆ ನಡೆಸಬೇಕು” ಎಂದು ಕೋರಿದರು.

ಆಗ ಪೀಠವು “ಆರೋಪ ಪಟ್ಟಿಯಲ್ಲಿ ಬೈರತಿ ಮತ್ತು ಇನ್ನೊಬ್ಬ ಆರೋಪಿಯ ಪರವಾಗಿ ಉಲ್ಲೇಖಿಸಿ, ಹೆಚ್ಚಿನ ತನಿಖೆಗಾಗಿ ಮತ್ತು ಆರೋಪಿಗಳ ನಾಪತ್ತೆಯಾಗಿರುವುದರಿಂದ ತನಿಖೆ ಸಾಧ್ಯವಾಗಿಲ್ಲ ಎಂದು ಹೇಳಿದ್ದರೆ ಪರಿಗಣಿಸಬಹುದಾಗಿತ್ತು. ಈ ವಿಚಾರವನ್ನು ಏಕೆ ಆರೋಪ ಪಟ್ಟಿಯಲ್ಲಿ ಪ್ರಸ್ತಾಪಿಸಿಲ್ಲ” ಎಂದು ವಿಚಾರಣಾಧೀನ ನ್ಯಾಯಾಲಯದ ಆದೇಶ ಉಲ್ಲೇಖಿಸಿ ಹೇಳಿತು.