ಧರ್ಮಸ್ಥಳದಲ್ಲಿ ಶಂಕಾಸ್ಪದವಾಗಿ ಸಾವನ್ನಪ್ಪಿರುವ ನೂರಾರು ಮಂದಿಯ ಶವಗಳನ್ನು ಹೂಳಲಾಗಿದೆ ಎನ್ನಲಾದ ಪ್ರಕರಣದಲ್ಲಿ ಪಿತೂರಿ ನಡೆಸಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪದ ಮೇಲೆ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಒಂಭತ್ತು ತಿಂಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರಿಗೆ ಗಡಿಪಾರು ಮಾಡಿದ್ದ ಪುತ್ತೂರು ಉಪ ವಿಭಾಗಾಧಿಕಾರಿ ಆದೇಶವನ್ನು ಶನಿವಾರ ಕರ್ನಾಟಕ ಹೈಕೋರ್ಟ್ ಬದಿಗೆ ಸರಿಸಿದೆ. ಇದೇ ವೇಳೆ, ಗಡಿಪಾರು ವಿಚಾರವಾಗಿ ವಿವೇಚನೆ ಬಳಸಿ ಮೂರು ವಾರಗಳಲ್ಲಿ ಹೊಸದಾಗಿ ಸೂಕ್ತ ಆದೇಶ ಮಾಡುವಂತೆ ಉಪವಿಭಾಗಾಧಿಕಾರಿಗೆ ನ್ಯಾಯಾಲಯ ಆದೇಶಿಸಿದೆ.
ಉಪ ವಿಭಾಗಾಧಿಕಾರಿ ಆದೇಶ ಪ್ರಶ್ನಿಸಿ ಮಹೇಶ್ ತಿಮರೋಡಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಲೇವಾರಿ ಮಾಡಿದೆ.
“ಉಪವಿಭಾಗಾಧಿಕಾರಿಯು ಮಹೇಶ್ ತಿಮರೋಡಿಗೆ ನೀಡಿರುವ ಷೋಕಾಸ್ ನೋಟಿಸ್‌ನಲ್ಲಿ ಉಲ್ಲೇಖಿಸಿರುವ ಬಹುತೇಕ ಪ್ರಕರಣಗಳಲ್ಲಿ ತಿಮರೋಡಿ ಖುಲಾಸೆಯಾಗಿದ್ದಾರೆ. ಈ ವಿಚಾರವನ್ನು ಆಕ್ಷೇಪಣೆಯ ಮೂಲಕ ಉಪವಿಭಾಗಾಧಿಕಾರಿ ಗಮನಕ್ಕೆ ತರಲಾಗಿದೆ. ಇದನ್ನು ಪರಿಗಣಿಸದೇ ಉಪ ವಿಭಾಗಾಧಿಕಾರಿ ಗಡಿಪಾರು ಆದೇಶ ಮಾಡಿದ್ದಾರೆ. ಇದನ್ನು ರಿಟ್ ಅರ್ಜಿಯ ಮೂಲಕ ಪ್ರಶ್ನಿಸಲಾಗಿದೆ. ವಿವೇಚನೆ ಬಳಸಿ, ಸೂಕ್ತ ಆದೇಶ ಹೊರಡಿಸುವಂತೆ ಈ ಹಿಂದೆ ಸಕ್ಷಮ ನ್ಯಾಯಾಲಯ ಆದೇಶಿಸಿತ್ತು. ಅದಕ್ಕೆ ಅನುಗುಣವಾಗಿ, ತಿಮರೋಡಿಯ ಆಕ್ಷೇಪಣೆಯನ್ನು ಪರಿಗಣಿಸಿ, ವಿವೇಚನೆ ಬಳಸಿ, ಸೂಕ್ತ ಆದೇಶವನ್ನು ಹೊಸದಾಗಿ ಮೂರು ವಾರಗಳಲ್ಲಿ ಹೊರಡಿಸಬೇಕು” ಎಂದು ಉಪವಿಭಾಗಾಧಿಕಾರಿಗೆ ನಿರ್ದೇಶಿಸಿ ನ್ಯಾಯಾಲಯವು ಅರ್ಜಿಯನ್ನು ಇತ್ಯರ್ಥಪಡಿಸಿದೆ.
ತಿಮರೋಡಿ ಪರ ಹಿರಿಯ ವಕೀಲ ಸಾರಾನಾಥ್ ಪೂಜಾರಿ ಅವರು “ಪುತ್ತೂರಿನ ಉಪವಿಭಾಗಾಧಿಕಾರಿಯು ತಾವು ಸಲ್ಲಿಸಿರುವ ಆಕ್ಷೇಪಣೆಯನ್ನು ಪರಿಗಣಿಸದೇ ಗಡೀಪಾರು ಆದೇಶ ಮಾಡಿದ್ದಾರೆ. ಹೀಗಾಗಿ, ಆದೇಶವನ್ನು ವಜಾಗೊಳಿಸಬೇಕು. ಅಲ್ಲದೇ, ಮೊದಲಿಗೆ ಮಾಡಿದ್ದ ಗಡಿಪಾರು ಆದೇಶದಲ್ಲಿ ಲೋಪ ಗುರುತಿಸಿದ್ದ ಸಕ್ಷಮ ನ್ಯಾಯಾಲಯವು ಹೊಸದಾಗಿ ಆದೇಶ ಮಾಡುವಂತೆ ಉಪ ವಿಭಾಗಾಧಿಕಾರಿಗೆ ನಿರ್ದೇಶಿಸಿತ್ತು. 12.5.2025ರಿಂದ ಇಲ್ಲಿಯವರೆಗೆ ಯಾವುದೇ ಬೆದರಿಕೆ, ಅಪಾಯ ಅಥವಾ ಸಮಸ್ಯೆಗಳು ಮಹೇಶ್ ತಿಮರೋಡಿ ಕಡೆಯಿಂದ ಆಗಿಲ್ಲ. ಹೀಗಾಗಿ, ಮತ್ತೆ ಗಡಿಪಾರು ಮಾಡುವ ಆದೇಶ ಹೊರಡಿಸದಂತೆ ನಿರ್ಬಂಧಿಸಬೇಕು” ಎಂದು ಕೋರಿದರು. ಈ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ.
ಈ ಹಿಂದೆ ಗಡಿಪಾರು ಮಾಡಿದ್ದ ಆದೇಶವನ್ನು ಪ್ರಶ್ನಿಸಿ ತಿಮರೋಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು ಉಪವಿಭಾಗಾಧಿಕಾರಿಗೆ ಮರಳಿಸಿ, ವಾಸ್ತವಿಕ ಅಂಶಗಳನ್ನು ಪರಿಗಣಿಸಿ ಸೂಕ್ತ ಆದೇಶ ಮಾಡಲು ಆದೇಶಿಸಿತ್ತು. ಆನಂತರ ಉಪವಿಭಾಗಾಧಿಕಾರಿ ಮತ್ತೊಮ್ಮೆ ತಿಮರೋಡಿ ಗಡಿಪಾರು ಆದೇಶ ಹೊರಡಿಸಿದ್ದರು. ಇಂದು ನಡೆದ ವಿಚಾರಣೆಯ ವೇಳೆ ನ್ಯಾ. ನಾಗಪ್ರಸನ್ನ ಅವರು “ನಾನು ಇತರೆ ನ್ಯಾಯಮೂರ್ತಿಗಳ ಜೊತೆ ಇಲ್ಲಿ ಸ್ಪರ್ಧೆಯಲ್ಲಿಲ್ಲ. ಸಕ್ಷಮ ಪೀಠದ ತೀರ್ಪನ್ನು ಚಾಚೂ ತಪ್ಪದೇ ಪಾಲಿಸಲಾಗುವುದು” ಎಂದರು.