Justice Krishna S Dixit and Karnataka HC 
ಸುದ್ದಿಗಳು

ಮೊದಲ ಪತ್ನಿಯೊಂದಿಗಿನ ಸಂಬಂಧದಿಂದ ಜನಿಸಿದ ಮಗುವಿನ ಕಸ್ಟಡಿ ಬಯಸಿದ್ದ ಪತಿಗೆ ರೂ.50 ಸಾವಿರ ದಂಡ ವಿಧಿಸಿದ ಹೈಕೋರ್ಟ್‌

ಒಂದು ತಿಂಗಳ ಒಳಗಾಗಿ ಮೊದಲ ಪತ್ನಿಗೆ 50,000 ರೂಪಾಯಿಗಳನ್ನು ಪಾವತಿಸಬೇಕು. ಇಲ್ಲವಾದಲ್ಲಿ ಮಗುವನ್ನು ಭೇಟಿ ಮಾಡಲು ನೀಡಿರುವ ಹಕ್ಕನ್ನು ಅಮಾನತುಗೊಳಿಸಲಾಗುವುದು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

Bar & Bench

ಮೊದಲ ಪತ್ನಿಯ ಜೊತೆಗಿನ ವೈವಾಹಿಕ ಸಂಬಂಧದಿಂದ ಜನಿಸಿದ ಮಗುವಿನ ಕಸ್ಟಡಿ ಬಯಸಿದ್ದ ಪತಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ 50,000 ದಂಡ ವಿಧಿಸಿದೆ.

ಕೌಟುಂಬಿಕ ನ್ಯಾಯಾಲಯವು ತನ್ನ ಮನವಿ ವಜಾ ಮಾಡಿದ್ದನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್‌ ನೇತೃತ್ವದ ಏಕಸದಸ್ಯ ಪೀಠವು ತೀರ್ಪು ಪ್ರಕಟಿಸಿದೆ.

“ಪತಿ ದಾಖಲಿಸಿದ್ದ ಎಲ್ಲಾ ದೂರುಗಳನ್ನು ಎದುರಿಸುವುದರ ಜೊತೆಗೆ ಪತ್ನಿಯು ಏಕಾಂಗಿಯಾಗಿ ಮಗುವನ್ನು ಬೆಳೆಸುತ್ತಿದ್ದಾರೆ. ಪಕ್ಷಕಾರರು ಮತ್ತು ಮಗುವಿನ ಜೊತೆ ನ್ಯಾಯಾಲಯವು ಸುದೀರ್ಘವಾಗಿ ಸಮಾಲೋಚನೆ ನಡೆಸಿದ್ದು, ತಾಯಿಯು ಮಗುವನ್ನು ಚೆನ್ನಾಗಿ ಬೆಳೆಸುತ್ತಿದ್ದಾರೆ ಎಂಬುದನ್ನು ಅರಿತುಕೊಂಡಿದೆ. ಅಲ್ಲದೇ, ಮಗುವೂ ತಾಯಿಯ ಜೊತೆಯೇ ಇರಲು ಬಯಸಿದೆ” ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೆ, ಮೊದಲ ಮದುವೆ ಅಸ್ತಿತ್ವದಲ್ಲಿರುವಾಗಲೇ ಎರಡನೇ ಮದುವೆಯಾಗುವ ಮುಸ್ಲಿಂ ವ್ಯಕ್ತಿಯ ನಡೆಯು ಕ್ರೂರವಾದದ್ದು. ಇದನ್ನು ಆಧರಿಸಿ ಪತ್ನಿಯು ವರನ ಮನೆಯಿಂದ ದೂರ ಉಳಿಯಬಹುದಾಗಿದ್ದು ಆತನಿಂದ ವಿಚ್ಛೇದನವನ್ನೂ ಪಡೆಯಬಹುದು ಎಂದು ಇತ್ತೀಚೆಗೆ ವಿಭಾಗೀಯ ಪೀಠ ನೀಡಿದ್ದ ಆದೇಶವನ್ನು ನ್ಯಾಯಮೂರ್ತಿಗಳು ಉಲ್ಲೇಖಿಸಿದರು.

ಮುಂದುವರೆದು, ಒಂದು ತಿಂಗಳ ಒಳಗಾಗಿ ಮೊದಲ ಪತ್ನಿಗೆ 50,000 ರೂಪಾಯಿಗಳನ್ನು ಪಾವತಿಸಬೇಕು. ಇಲ್ಲವಾದಲ್ಲಿ ಮಗುವನ್ನು ಭೇಟಿ ಮಾಡಲು ನೀಡಿರುವ ಹಕ್ಕನ್ನು ಅಮಾನತುಗೊಳಿಸಲಾಗುವುದು ಎಂದು ಆದೇಶದಲ್ಲಿ ಪೀಠವು ಹೇಳಿತು.

2009ರ ಏಪ್ರಿಲ್‌ನಲ್ಲಿ ವಿವಾಹವಾಗಿದ್ದ ದಂಪತಿಯು ಅಮೆರಿಕಾದ ಅರಿಜೋನಾದಲ್ಲಿ ಕೆಲಕಾಲ ನೆಲೆಸಿದ್ದರು. 2013ರ ಆಗಸ್ಟ್‌ನಲ್ಲಿ ದಂಪತಿಗೆ ಗಂಡು ಮಗು ಜನಿಸಿತ್ತು. ಈ ಮಧ್ಯೆ, ಬಹುರಾಷ್ಟ್ರೀಯ ಕಂಪೆನಿಯ ಉದ್ಯೋಗಿಯಾಗಿದ್ದ ಪತಿಯು ಮತ್ತೊಬ್ಬ ಮಹಿಳೆಯನ್ನು ವಿವಾಹವಾಗಿದ್ದರು. 2016ರಲ್ಲಿ ವಿಚ್ಛೇದನ ಕೊಡಿಸುವಂತೆ ಪತಿಯು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಅರ್ಜಿದಾರ ಪತಿಯು ಎರಡನೇ ಪತ್ನಿಯ ಜೊತೆ ನೆಲೆಸಿದ್ದು, ಮಗು ಮೊದಲ ಪತ್ನಿಯ ಆಸರೆಯಲ್ಲಿ ಬೆಳೆಯುತ್ತಿದೆ. ಹೀಗಾಗಿ, ಮಗುವನ್ನು ತಂದೆ ಕಸ್ಟಡಿ ನೀಡಲು ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯವು ಮಗುವನ್ನು ಭೇಟಿ ಮಾಡಲು ಮಾತ್ರ ಅವಕಾಶ ಮಾಡಿಕೊಟ್ಟಿತ್ತು.

ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಅರ್ಜಿದಾರ ಪತಿಯು “ತಾನು ಆರ್ಥಿಕವಾಗಿ ಸದೃಢವಾಗಿದ್ದು, ಮಗುವನ್ನು ನೋಡಿಕೊಳ್ಳಲು ಸಮರ್ಥವಾಗಿದ್ದೇನೆ. ಅಲ್ಲದೇ, ಸಂಪೂರ್ಣವಾಗಿ ಕೌಟುಂಬಿಕ ವಾತಾವರಣ ನೀಡಲು ಸಿದ್ಧನಿದ್ದೇನೆ” ಎಂದು ವಾದಿಸಿದ್ದರು.