Chief Justice Vibhu Bhakhru & Justice CM Poonacha 
ಸುದ್ದಿಗಳು

ವಾರ್ಡ್‌ ಹೆಸರು ಬದಲು ಕೋರಿದ್ದ ಅರ್ಜಿದಾರರಿಗೆ ₹5,000 ದಂಡ ವಿಧಿಸಿದ ಹೈಕೋರ್ಟ್‌; ನ್ಯಾಯಾಂಗದ ಸಮಯ ಪೋಲು ಎಂದು ಕಿಡಿ

“ಹೆಸರು ಬದಲಿಸಿರುವುದರಲ್ಲಿ ಸಾರ್ವಜನಿಕ ಹಿತಾಸಕ್ತಿ ಏನಿದೆ? ಎಷ್ಟು ದಂಡ ಪಾವತಿಸುತ್ತೀರಿ ಹೇಳಿ? ಇದಕ್ಕಾಗಿ ನ್ಯಾಯಾಂಗದ ಸಮಯವನ್ನೇಕೆ ವ್ಯರ್ಥ ಮಾಡುತ್ತೀರಿ?” ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ.

Bar & Bench

ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆಯ 43ನೇ ವಾರ್ಡ್‌ಗೆ ಬೀರೇಶ್ವರನಗರ ಬದಲು ಚುಂಚಘಟ್ಟ ಎಂದು ಮರು ನಾಮಕರಣ ಮಾಡುವಂತೆ ಕೋರಿದ್ದ ಅರ್ಜಿದಾರರಿಗೆ ಕರ್ನಾಟಕ ಹೈಕೋರ್ಟ್‌ ಬುಧವಾರ ₹5,000 ದಂಡ ವಿಧಿಸಿದ್ದು, ಈ ಮೊತ್ತವನ್ನು ಎರಡು ವಾರಗಳಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಬೇಕು ಎಂದು ನಿರ್ದೇಶಿಸಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರವು ವಾರ್ಡ್‌ಗಳನ್ನು ಗುರುತಿಸುವಾಗ ಐತಿಹಾಸಿಕ ಪ್ರಸಿದ್ಧವಾದ ಚುಂಚಘಟ್ಟವನ್ನು 150 ಜನ ವಸತಿ ಹೊಂದಿರುವ ಬೀರೇಶ್ವರ ನಗರಕ್ಕೆ ಸೇರಿಸಿ, ಅದೇ ಹೆಸರು ಮುಂದುವರಿಸುತ್ತಿದೆ. ಇದರಿಂದ ಚುಂಚಘಟ್ಟಕ್ಕೆ ಐತಿಹಾಸಿಕ ಹಿನ್ನೆಲೆಗೆ ಹಾನಿಯಾಗುತ್ತಿದೆ ಎಂದು ಆಕ್ಷೇಪಿಸಿ ರಾಜನಕುಂಟೆಯ ರೇಣುಕಾ ಯಲ್ಲಮ್ಮನ ದೇವಸ್ಥಾನ ಟ್ರಸ್ಟ್‌ ಮತ್ತು ಇತರೆ 20 ಮಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ನಡೆಸಿತು.

ಪೀಠ “ಹೆಸರು ಬದಲಿಸಿರುವುದರಲ್ಲಿ ಸಾರ್ವಜನಿಕ ಹಿತಾಸಕ್ತಿ ಏನಿದೆ? ಎಷ್ಟು ದಂಡ ಪಾವತಿಸುತ್ತೀರಿ ಹೇಳಿ? ಇದಕ್ಕಾಗಿ ನ್ಯಾಯಾಂಗದ ಸಮಯವನ್ನೇಕೆ ವ್ಯರ್ಥ ಮಾಡುತ್ತೀರಿ?” ಎಂದಿತು.

ಇದಕ್ಕೆ ಅರ್ಜಿದಾರರ ಪರ ವಕೀಲೆ “ಎಲ್ಲಾ ಕಂದಾಯ ದಾಖಲೆಗಳಲ್ಲಿ ಚುಂಚಘಟ್ಟ ಎಂದೇ ಇದೆ. ಇದನ್ನು ಈಗ ಬದಲಿಸಲಾಗುತ್ತಿದೆ” ಎಂದರು.

ಇದಕ್ಕೆ ಒಪ್ಪದ ಪೀಠವು ನಿರ್ದಿಷ್ಟ ವಾರ್ಡ್‌ಗೆ ಹೆಸರು ಇಡುವುದಕ್ಕೆ ಸಂಬಂಧಿಸಿದಂತೆ ಯಾರು ಯಾವುದೇ ಅಭಿಪ್ರಾಯ ಹೊಂದಬಹುದು. ಇದಕ್ಕಾಗಿ ನ್ಯಾಯಾಂಗ ಸಮಯ ಪೋಲು ಮಾಡುವುದು ಅಸಮರ್ಥನೀಯ ಎಂದಿದ್ದು, ಅರ್ಜಿದಾರರಿಗೆ ₹5,000 ದಂಡ ವಿಧಿಸಿ ಪಿಐಎಲ್‌ ವಜಾಗೊಳಿಸಿತು. ಅಲ್ಲದೇ, ಎರಡು ವಾರಗಳಲ್ಲಿ ದಂಡದ ಮೊತ್ತವನ್ನು ಕೆಎಸ್‌ಎಲ್‌ಎಸ್‌ಎಗೆ ಪಾವತಿಸುವಂತೆ ನಿರ್ದೇಶಿಸಿತು.