Bengaluru International Film Festival & Karnataka HC 
ಸುದ್ದಿಗಳು

ಚಿತ್ರೋತ್ಸವಕ್ಕೆ ಚಲನಚಿತ್ರ ಪರಿಗಣನೆಯಲ್ಲಿ ಪಕ್ಷಪಾತ ಆರೋಪ: ಸರ್ಕಾರ, ಅಕಾಡೆಮಿಗೆ ಹೈಕೋರ್ಟ್‌ ತುರ್ತು ನೋಟಿಸ್‌

“ಈಗಾಗಲೇ ಸಿನಿಮೋತ್ಸವಕ್ಕೆ ಎಲ್ಲಾ ಸಿದ್ಧತೆಯಾಗಿದೆ. ಈ ಹಂತದಲ್ಲಿ ತಡೆಯಾಜ್ಞೆ ನೀಡಲಾಗದು. ಪ್ರತಿವಾದಿಗಳಿಗೆ ತುರ್ತು ನೋಟಿಸ್‌ ಜಾರಿ ಮಾಡಲಾಗುವುದು” ಎಂದು ಆದೇಶಿಸಿ, ವಿಚಾರಣೆಯನ್ನು ಫೆಬ್ರವರಿ 24ಕ್ಕೆ ಮುಂದೂಡಿದ ನ್ಯಾಯಾಲಯ.

Bar & Bench

ಮಾರ್ಚ್‌ 1ರಿಂದ ಆರಂಭವಾಗಲಿರುವ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (ಬಿಐಎಫ್‌ಎಫ್‌) ತಮ್ಮ ಚಲನಚಿತ್ರಗಳನ್ನು ಪರಿಗಣಿಸಿಲ್ಲ ಎಂದು ಆರೋಪಿಸಿ ಸಂವಿಧಾನ ಸಿನಿ ಕಂಬೈನ್ಸ್ ಸೇರಿದಂತೆ 9 ಸಿನಿಮಾ ನಿಮಾರ್ಪಕರು ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಕನ್ನಡ ಚಲನಚಿತ್ರ ಅಕಾಡೆಮಿಗೆ ಕರ್ನಾಟಕ ಹೈಕೋರ್ಟ್‌ ಬುಧವಾರ ತುರ್ತು ನೋಟಿಸ್ ಜಾರಿಗೊಳಿಸಿದೆ.

ತುಮಕೂರಿನ ಸಂವಿಧಾನ ಸಿಬಿ ಕಂಬೈನ್ಸ್‌ ಸೇರಿ ಒಂಭತ್ತು ಪ್ರತ್ಯೇಕ ಸಂಸ್ಥೆಗಳ ನಿರ್ಮಾಪಕರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಅನಂತ ರಾಮನಾಥ್‌ ಹೆಗ್ಡೆ ಅವರ ಏಕಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಜಿ ಆರ್‌ ಮೋಹನ್‌ ಅವರು “ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ಚಲನಚಿತ್ರಗಳನ್ನು (ಫೀಚರ್‌ ಫಿಲ್ಮ್‌) ಆಯ್ಕೆ ಮಾಡಲು ರಚಿಸಿದ್ದ ಸಮಿತಿಯು ಅರ್ಜಿದಾರರು ಸಲ್ಲಿಸಿರುವ ಚಿತ್ರಗಳನ್ನು ಕನಿಷ್ಠ ಪಕ್ಷ ವೀಕ್ಷಣೆ ಮಾಡಿಲ್ಲ. ಅಕಾಡೆಮಿಗೆ ಸಾಮಾನ್ಯ ಸಮಿತಿ ಸದಸ್ಯರನ್ನು ರಾಜ್ಯ ಸರ್ಕಾರವು ಫೆಬ್ರವರಿ 15ರಂದು ನೇಮಕ ಮಾಡಿದೆ. ಸದಸ್ಯರ ನೇಮಕಾತಿಗೂ ಮುನ್ನ ಸಾಕ್ಷ್ಯಚಿತ್ರಗಳನ್ನು ಆಯ್ಕೆ ಮಾಡಿರುವ ಅಧ್ಯಕ್ಷರ ನಡೆಯು ಪಕ್ಷಪಾತಿಯಾಗಿದ್ದು, ದುರುದ್ದೇಶಪೂರ್ವಕವಾಗಿದೆ. ಆದ್ದರಿಂದ, ಸಾಮಾನ್ಯ ಸಮಿತಿಯು ಚಲಚಿತ್ರಗಳನ್ನು ವೀಕ್ಷಿಸಲು ಹೊಸದಾಗಿ ಸಮಿತಿ ರಚಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಮಧ್ಯಂತರ ಪರಿಹಾರದ ಭಾಗವಾಗಿ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವವನ್ನು ಮುಂದೂಡಬೇಕು” ಎಂದು ಮನವಿ ಮಾಡಿದರು.

ಆಗ ಪೀಠವು “ಈಗಾಗಲೇ ಸಿನಿಮೋತ್ಸವಕ್ಕೆ ಎಲ್ಲಾ ಸಿದ್ಧತೆಯಾಗಿದೆ. ಈ ಹಂತದಲ್ಲಿ ತಡೆಯಾಜ್ಞೆ ನೀಡಲಾಗದು. ಪ್ರತಿವಾದಿಗಳಿಗೆ ತುರ್ತು ನೋಟಿಸ್‌ ಜಾರಿ ಮಾಡಲಾಗುವುದು” ಎಂದು ಆದೇಶಿಸಿ, ವಿಚಾರಣೆಯನ್ನು ಫೆಬ್ರವರಿ 24ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ಚಲಚಿತ್ರ ಅಕಾಡೆಮಿಯು ಸಿನಿಮೋತ್ಸವದಲ್ಲಿ ಭಾಗಿಯಾಗಲು ಕನ್ನಡ, ಭಾರತ ಮತ್ತು ಏಷ್ಯಾ ಚಿತ್ರ ವಿಭಾಗದಲ್ಲಿ ಪ್ರವೇಶಿಕೆಗೆ ಆಹ್ವಾನಿಸಿತ್ತು. ಇದರಲ್ಲಿ ಅರ್ಜಿದಾರರು ಒಟ್ಟು ಒಂಭತ್ತು ಸಾವಿರ ರೂಪಾಯಿ ಪಾವತಿಸಿ, ಎಲ್ಲಾ ವಿಭಾಗಗಳಿಗೂ ಅರ್ಜಿ ಹಾಕಿದ್ದರು. ಒಟ್ಟಾರೆ 134 ಸಿನಿಮಾಗಳ ಪೈಕಿ ಕನ್ನಡ, ಭಾರತ ಮತ್ತು ಏಷ್ಯಾ ಮೂರು ವಿಭಾಗದಲ್ಲಿ ತಲಾ 14 ಸಿನಿಮಾಗಳನ್ನು ಆಯ್ಜೆ ಮಾಡಲಾಗಿದೆ. ಈ ಪೈಕಿ ತಮ್ಮ ಸಿನಿಮಾಗಳನ್ನು ವಿಕ್ಷಿಸಿಯೇ ಇಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ಬೆಂಗಳೂರಿನ ಒರಾಯನ್‌ ಮಾಲ್‌ನಲ್ಲಿ ಸಿನಿಮೋತ್ಸವವು ಮಾರ್ಚ್‌ 1ರಿಂದ 8ರವರೆಗೆ ನಡೆಯಲಿದೆ.