ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ (ಎನ್‌ಎಲ್‌ಎಸ್‌ಐಯು) ಮೆಸ್ ಮತ್ತು ಸ್ವಚ್ಛತಾ ವಿಭಾಗದಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಸೇವೆಯ ವಜಾ ಆದೇಶಕ್ಕೆ ಶುಕ್ರವಾರ ಮಧ್ಯಂತರ ತಡೆಯಾಜ್ಞೆ ನೀಡಿರುವ ಕರ್ನಾಟಕ ಹೈಕೋರ್ಟ್ ಎನ್‌ಎಲ್‌ಎಸ್‌ಐಯು ಮತ್ತು ಭಾರತೀಯ ವಕೀಲರ ಪರಿಷತ್‌ಗೆ ನೋಟಿಸ್ ಜಾರಿ ಮಾಡಿದೆ.
ಎನ್‌ಎಲ್‌ಎಸ್‌ಐಯು 2022ರ ಜೂನ್ 6ರಂದು ಮಾಡಿರುವ ಆದೇಶ ಪ್ರಶ್ನಿಸಿ ಎಸ್ ರಾಧಾಕೃಷ್ಣ ಸೇರಿದಂತೆ 20 ಮಂದಿ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
2022ರ ಜೂನ್ 30ರಿಂದ ಮೆಸ್ ಮತ್ತು ಸ್ವಚ್ಛತಾ ವಿಭಾಗದ ನೌಕರರ ಸೇವೆಯನ್ನು ನವೀಕರಿಸುವುದಿಲ್ಲ ಎಂದು ಜೂನ್ 6ರಂದು ಎನ್‌ಎಲ್‌ಎಸ್‌ಐಯು ಆದೇಶದಲ್ಲಿ ತಿಳಿಸಿದೆ. ಈ ಆಕ್ಷೇಪಿತ ಆದೇಶಕ್ಕೆ ನ್ಯಾಯಾಲಯವು ಮಧ್ಯಂತರ ತಡೆ ನೀಡಿ ಆದೇಶ ಮಾಡಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರು ಎನ್‌ಎಲ್‌ಎಸ್‌ಐಯುನಲ್ಲಿ 15-18 ವರ್ಷಗಳಿಂದ ಕ್ಯಾಂಟೀನ್/ಮೆಸ್ ಹಾಗೂ ಸ್ವಚ್ಛತಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶ್ವವಿದ್ಯಾಲಯದ ಗುತ್ತಿಗೆದಾರ ಸಿಬ್ಬಂದಿಯ ಸೇವೆಯನ್ನು ಕಾಯಂಗೊಳಿಸುವ ಪ್ರಶ್ನೆಯನ್ನು ವಿಶ್ವವಿದ್ಯಾಲಯವು 2011ರ ಏಪ್ರಿಲ್ 28ರಂದು ಪರಿಗಣಿಸಿದ್ದು, ಈ ಸಂಬಂಧ 2011ರ ಮೇ 5ರಂದು ಆದೇಶ ಮಾಡಲಾಗಿದೆ. 2012ರ ಆಗಸ್ಟ್ 3ರಂದು ಅರ್ಜಿದಾರರ ಪ್ರೊಬೇಷನ್ ಘೋಷಣೆ ಮಾಡಲಾಗಿದೆ. ಆ ಬಳಿಕ 2016ರ ಜೂನ್ 27ರ ಆದೇಶದ ಪ್ರಕಾರ ಅರ್ಜಿದಾರರ ಸೇವೆಯನ್ನು ಐದು ವರ್ಷಗಳಿಗೆ ವಿಸ್ತರಿಸಲಾಗಿದೆ. ನೇಮಕಾತಿಯ ಸಂದರ್ಭದಲ್ಲಿ ಕಾಯಂ ಉದ್ಯೋಗಗಳಿಗೆ ನೀಡಲಾಗುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈಗ ಸಾಂಸ್ಥಿಕ ಪುನರಚನೆಯ ಪ್ರಕ್ರಿಯೆಯ ಭಾಗವಾಗಿ ಶೈಕ್ಷಣಿಕೇತರ ಸಿಬ್ಬಂದಿಯ ಕಾಯಂ ನೇಮಕಾತಿಗೆ ಅರ್ಜಿ ಆಹ್ವಾನಿಸಿದರೆ ಅರ್ಜಿದಾರರನ್ನು ಮುಂದುವರಿಸುವುದಿಲ್ಲ ಎಂದು ಜೂನ್ 6ರ ಆದೇಶದಲ್ಲಿ ವಿವರಿಸಲಾಗಿದೆ. ಅಲ್ಲದೇ, ಉದ್ಯೋಗಿಯು ಯಾವುದೇ ಕಾರಣವನ್ನು ನೀಡದೆ ಸ್ವಯಂ ಪ್ರತ್ಯೇಕಗೊಳ್ಳುವ ಅರ್ಜಿಯನ್ನು ಸಲ್ಲಿಸಿದರೆ ಅದನ್ನು ಒಪ್ಪುವುದು ಅಥವಾ ಬಿಡುವ ಹಕ್ಕು ವಿಶ್ವವಿದ್ಯಾಲಯದ ಬಳಿ ಇರಲಿದೆ ಎಂದು ಹೇಳಲಾಗಿದೆ. ಈ ಆದೇಶವನ್ನು ಪ್ರಶ್ನೆ ಮಾಡಲಾಗಿದೆ. ಅರ್ಜಿದಾರರನ್ನು ವಕೀಲೆ ವೈಶಾಲಿ ಹೆಗಡೆ ಅವರು ಪ್ರತಿನಿಧಿಸಿದ್ದರು.