ಬಹುಕೋಟಿ ಐ ಮಾನಿಟರಿ ಅಡ್ವೈಸರಿ (ಐಎಂಎ) ಹಗರಣದಲ್ಲಿನ ಪ್ರಮುಖ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಈಚೆಗೆ ಸಕ್ಷಮ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನ ಬನ್ನೇರುಘಟ್ಟದಲ್ಲಿನ ಅಪಾರ್ಟ್‌ಮೆಂಟ್ ಅನ್ನು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ರಕ್ಷಣೆ (ಕೆಪಿಐಡಿ) ಕಾಯಿದೆ ಅಡಿ ವಶಕ್ಕೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರದ ಮನವಿಗೆ ಮಾರ್ಚ್ 7ರಂದು ಸಮ್ಮತಿಸಿರುವ ವಿಶೇಷ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮೊಹಮ್ಮದ್ ಮನ್ಸೂರ್ ಖಾನ್ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅಲೋಕ್ ಅರಾಧೆ ಮತ್ತು ಎಸ್ ವಿಶ್ವಜಿತ್ ಶೆಟ್ಟಿ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಆಸ್ತಿಗಳನ್ನು ವಶಕ್ಕೆ ಪಡೆಯುವ ಪೈಕಿ ಬನ್ನೇರುಘಟ್ಟ ರಸ್ತೆಯಲ್ಲಿ ತಿಲಕ್ ನಗರದಲ್ಲಿರುವ 3,700 ಚದರ ಅಡಿ ವಸತಿ ಅಪಾರ್ಟ್‌ಮೆಂಟ್ ವಶಕ್ಕೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರ ಮನವಿ ಸಲ್ಲಿಸಿದೆ. ಆಸ್ತಿಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸದೇ ಅಥವಾ ಅವುಗಳ ಮೌಲ್ಯ ನಿರ್ಧರಿಸದೇ ಸಕ್ಷಮ ಪ್ರಾಧಿಕಾರ ಸಲ್ಲಿಸಿರುವ ಮನವಿಗೆ ವಿಶೇಷ ನ್ಯಾಯಾಲಯವು ಒಪ್ಪಿಗೆ ನೀಡಿದೆ. ಹೂಡಿಕೆಯನ್ನು ತಪ್ಪಾಗಿ ಭಾವಿಸಿ ಠೇವಣಿ ಎಂದು ವಿಶೇಷ ನ್ಯಾಯಾಲಯ ವ್ಯಾಖ್ಯಾನಿಸಿದೆ ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿದೆ.