ಬೆಸ್ಕಾಂ ಅಧಿಕಾರಿಗಳ ಸಂಚಾರಕ್ಕೆ ಹಾಗೂ ಸರ್ವಿಸ್ ಸ್ಟೇಷನ್‌ಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಸೇವೆಗೆ ಬಾಡಿಗೆ ವಾಹನಗಳನ್ನು ಪಡೆದುಕೊಳ್ಳಲು ಕರೆಯಲಾಗಿದ್ದ ಟೆಂಡರ್‌ಗಳನ್ನು ಸಕಾರಣವಿಲ್ಲದೆ ರದ್ದುಪಡಿಸಿರುವುದು ಮತ್ತು ಹಲವು ಬಾರಿ ಹೊಸದಾಗಿ ಟೆಂಡರ್‌ಗಳನ್ನು ಕರೆದಿರುವುದನ್ನು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಬೆಸ್ಕಾಂಗೆ ಕರ್ನಾಟಕ ಹೈಕೋರ್ಟ್ ಗುರುವಾರ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರಿನ ಆರ್ ಟಿ ನಗರದ ಮನೋರಾಯನಪಾಳ್ಯ ನಿವಾಸಿ ಅಶ್ವಥ್ ಕುಮಾರ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಾದ ಆಲಿಸಿದ ಪೀಠವು ರಾಜ್ಯ ಇಂಧನ ಇಲಾಖೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ಬೆಸ್ಕಾಂ ಚೀಫ್ ಜನರಲ್ ಮ್ಯಾನೇಜರ್, ಬೆಸ್ಕಾಂ ತಾಂತ್ರಿಕ ನಿರ್ದೇಶಕ ಎಚ್ ಜೆ ರಮೇಶ್ ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಏಪ್ರಿಲ್ 15ಕ್ಕೆ ಮುಂದೂಡಿತು.
ಬೆಸ್ಕಾಂ ಅಧಿಕಾರಿಗಳ ಸಂಚಾರಕ್ಕೆ ಎರಡು ವರ್ಷದ ಅವಧಿಗೆ 593 ವಾಹನಗಳನ್ನು ಬಾಡಿಗೆ ಸೇವೆ ಆಧಾರದಲ್ಲಿ ಪಡೆದುಕೊಳ್ಳಲು 52.28 ಕೋಟಿ ರೂಪಾಯಿ ಮೊತ್ತದ ಟೆಂಡರ್ ಹಾಗೂ ಬೆಸ್ಕಾಂ ವ್ಯಾಪ್ತಿಯ ಸರ್ವಿಸ್ ಸ್ಟೇಷನ್‌ಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಸೇವೆಗೆ 531 ವಾಹನಗಳನ್ನು ಬಾಡಿಗೆ ಸೇವೆ ಆಧಾರದಲ್ಲಿ ಪಡೆದುಕೊಳ್ಳಲು 63.08 ಕೋಟಿ ರೂಪಾಯಿ ಮೊತ್ತದ ಪ್ರತ್ಯೇಕ ಟೆಂಡರ್ ಅನ್ನು 2021-22ರಲ್ಲಿ ಕರೆಯಲಾಗಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಮುಂದುವರೆದು, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ತಾಂತ್ರಿಕ ನಿರ್ದೇಶಕರು ತಮ್ಮವರಿಗೆ ಅನುಕೂಲ ಮಾಡಿಕೊಡಲು 19 ಪ್ಯಾಕೇಜ್‌ಗಳಲ್ಲಿ ಟೆಂಡರ್ ಕರೆದಿದ್ದರು. ಈ ಉದ್ದೇಶ ಈಡೇರದಿದ್ದಾಗ, ಕರೆಯಲಾಗಿದ್ದ ಟೆಂಡರ್ ವಿನಾಕಾರಣ ರದ್ದುಪಡಿಸಿ 2025ರ ಜೂನ್‌ನಿಂದ ಡಿಸೆಂಬರ್‌ವರೆಗೆ ಐದು ಬಾರಿ ಟೆಂಡರ್ ಕರೆಯಲಾಗಿದೆ. ಹಲವು ಬಾರಿ ಟೆಂಡರ್ ಪ್ರಕ್ರಿಯೆಯಿಂದ ರಾಜ್ಯದ ಬೊಕ್ಕಸಕ್ಕೆ ಹೊರೆ ಆಗಲಿದೆ. ಆದ್ದರಿಂದ, ಟೆಂಡರ್ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.