ವಿದ್ಯುತ್ ಬಳಕೆಗೆ ಸಂಬಂಧಿಸಿದಂತೆ ನೈಜ ಸಮಯದಲ್ಲಿ ಮಾಹಿತಿ ಒದಗಿಸುವ ಸ್ಮಾರ್ಟ್ ಮೀಟರ್‌ಗಳ ಬೆಲೆಯಲ್ಲಿನ ವ್ಯತ್ಯಾಸಕ್ಕೆ ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ (ಬೆಸ್ಕಾಂ) ಕರ್ನಾಟಕ ಹೈಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ.
ದಾವಣೆಗೆರೆಯ ರಾಜಶ್ರೀ ಎಲೆಕ್ಟ್ರಿಕಲ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಸ್ಮಾರ್ಟ್ ಮೀಟರ್‌ಗಳ ಮಾರಾಟ ಮತ್ತು ನಿರ್ವಹಣೆ ಟೆಂಡರ್ ನೀಡಿರುವುದನ್ನು ರದ್ದುಪಡಿಸುವಂತೆ ಕೋರಿ ಅಶ್ವರಾಮನುಜಾ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಆರ್ ಅಣವೇರಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಮಧುಸೂದನ್ ಅಡಿಗ ಅವರು “ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್ ನಿಗದಿತ ದರ ₹2,461 ಇದ್ದರೆ ಟೆಂಡರ್‌ನಲ್ಲಿ ₹4,235 ಹಾಗೂ ತ್ರೀಫೇಸ್ ಸ್ಮಾರ್ಟ್ ಮೀಟರ್‌ಗೆ ₹3,292 ದರ ಇದ್ದರೆ, ₹7,525ಗೆ ನಿಗದಿಪಡಿಸಲಾಗಿದೆ. ಸ್ಮಾರ್ಟ್ ಮೀಟರ್‌ಗಳ ಬೆಲೆಯನ್ನು ಶೇ. 170ರಷ್ಟು ಹೆಚ್ಚಿಸಲಾಗಿದೆ. ಸಾರ್ವಜನಿಕರಿಗೆ ಅನ್ಯಾಯವಾಗುತ್ತಿರುವುದರಿಂದ ಟೆಂಡರ್‌ಗೆ ತಡೆ ನೀಡಬೇಕು” ಎಂದು ಕೋರಿದರು.
ವಾದ ಆಲಿಸಿದ ಪೀಠವು ಟೆಂಡರ್‌ಗೆ ತಡೆ ನೀಡಲು ನಿರಾಕರಿಸಿ, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ, ಅರ್ಜಿ ವಿಚಾರಣೆ ಮುಂದೂಡಿತು.
ಮೊಬೈಲ್‌ನಲ್ಲಿ ಕರೆನ್ಸಿ ರಿಚಾರ್ಜ್ ಇದ್ದಂತೆ ಸ್ಮಾರ್ಟ್ ಮೀಟರ್‌ನಲ್ಲಿ ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಪಾವತಿ ವ್ಯವಸ್ಥೆ ಇರಲಿದೆ. ಪ್ರೀಪೇಯ್ಡ್ ಪಾವತಿ ವ್ಯವಸ್ಥೆ ಅಳವಡಿಸಿಕೊಳ್ಳುವವರು ಮೊದಲು ಸ್ಮಾರ್ಟ್ ಮೀಟರ್‌ಗೆ ಕರೆನ್ಸಿ ಹಾಕಿಸಿ ರೀಚಾರ್ಜ್ ಮಾಡಿಸಬೇಕು. ಕನಿಷ್ಠ ₹100 ಅಥವಾ ಒಂದು ವಾರದ ಸರಾಸರಿ ವಿದ್ಯುತ್ ಬಳಕೆಗೆ ಸಮನಾದ ಮೊತ್ತವನ್ನು ರಿಚಾರ್ಜ್ ಮಾಡಿಸಬೇಕು. ಗರಿಷ್ಠ ರೀಚಾರ್ಜ್‌ಗೆ ಯಾವುದೇ ಮಿತಿ ಇರುವುದಿಲ್ಲ. ವಿದ್ಯುತ್ ಬಳಕೆ ಮಾಡಿದಂತೆ ಹಣ ಕಡಿತಗೊಳ್ಳುತ್ತದೆ. ಇನ್ನೂ ₹50 ಬಾಕಿ ಇರುವಾಗ ಶುಲ್ಕ ಶೂನ್ಯವಾಗುವ ಸೂಚನೆ ಗ್ರಾಹಕರಿಗೆ ತಲುಪುತ್ತದೆ. ಸೂಚನೆಯ ಬಳಿಕ ರೀಚಾರ್ಜ್ ಮಾಡದಿದ್ದರೆ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ. ಪೋಸ್ಟ್ ಪೇಯ್ಡ್ ಪಾವತಿಯಲ್ಲಿ ಬಳಕೆ ಮಾಡಿದಷ್ಟು ವಿದ್ಯುತ್ ಬಿಲ್ ಪಾವತಿಸಬಹುದಾಗಿದೆ.
ಸ್ಮಾರ್ಟ್ ಮೀಟರ್‌ಗಳಲ್ಲಿ ಅಡ್ವಾನ್ಸ್ ಮೀಟರಿಂಗ್ ಇನ್‌ಫ್ರಾಸ್ಟ್ರಕ್ಷರ್ ತಂತ್ರಾಂಶ ಅಳವಡಿಸಲಾಗಿದ್ದು, ಶುಲ್ಕ ಪಾವತಿಸದಿದ್ದಾಗ ಅದೇ ತಂತ್ರಾಂಶದ ನೆರವಿನಿಂದ ವಿದ್ಯುತ್ ಕಡಿತ ಮಾಡಲಾಗುತ್ತದೆ.