Greater Bengaluru Authority & karnataka hc  
ಸುದ್ದಿಗಳು

ಡಿಜಿಟಲ್‌ ಜಾಹೀರಾತು ಫಲಕ ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆಗೆ ಆಕ್ಷೇಪ: ರಾಜ್ಯ ಸರ್ಕಾರ, ಜಿಬಿಎಗೆ ಹೈಕೋರ್ಟ್‌ ನೋಟಿಸ್‌

ಸ್ವಯಂ ಜಾಹೀರಾತುಗಳನ್ನು ಮೂರು ತಿಂಗಳ ಬಳಿಕ ನಿಗದಿಯ ಶುಲ್ಕ ಪಾವತಿಸಿ ವಾಣಿಜ್ಯ ಜಾಹೀರಾತುಗಳನ್ನಾಗಿ ಪರಿವರ್ತಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Bar & Bench

ರಾಜಧಾನಿ ಬೆಂಗಳೂರು ನಗರದಲ್ಲಿ ಅಕ್ರಮವಾಗಿ ಡಿಜಿಟಲ್‌ ಜಾಹೀರಾತು ಫಲಕಗಳು ನಾಯಿಕೊಡಗಳಂತೆ ತಲೆ ಎತ್ತುತ್ತಿವೆ. ಈ ರೀತಿಯ ಸ್ವಯಂ ಪ್ರದರ್ಶನಕ್ಕೆ ಹೊರಡಿಸುವ ಜಾಹೀರಾತುಗಳನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸಲು ಒಂದು ಬಾರಿಯ ಅವಕಾಶ ಕಲ್ಪಿಸಿರುವ  ನಿಯಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಕರ್ನಾಟಕ ಹೈಕೋರ್ಟ್ ಬುಧವಾರ ನೋಟಿಸ್‌ ಜಾರಿ ಮಾಡಿದೆ.

ಕೇಂದ್ರ ಸರ್ಕಾರದ ನಿವೃತ್ತ ನೌಕರ ಹಾಗೂ ಸಾಮಾಜಿಕ ಕಾರ್ಯಕರ್ತ ಕೆ ಲಕ್ಷ್ಮಣ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಬೆಂಗಳೂರಿನಲ್ಲಿ ಕೇವಲ ಆನ್‌-ಸೈಟ್ (ಯಾವುದೇ ಸಂಸ್ಥೆಯು ತನ್ನ ಸ್ವಂತ ಉತ್ಪಾದನೆಗಳ ವ್ಯಾಪಾರಿ ಸ್ಥಳದಲ್ಲಿನ ವ್ಯವಹಾರ ಗುರುತಿಸುವ) ಪ್ರಚಾರಕ್ಕಾಗಿ ಜಾಹೀರಾತು ನೀಡಬಹುದಾಗಿದೆ. ಆದರೆ, ವಾಣಿಜ್ಯ ವ್ಯವಹಾರಕ್ಕೆ ಪ್ರಚಾರ ನೀಡುವುದಕ್ಕೆ ಅವಕಾಶವಿಲ್ಲ. ಆದರೆ,  ಸ್ವಯಂ ಜಾಹೀರಾತುಗಳನ್ನು ಮೂರು ತಿಂಗಳ ಬಳಿಕ ನಿಗದಿಯ ಶುಲ್ಕ ಪಾವತಿಸಿ ವಾಣಿಜ್ಯ ಜಾಹೀರಾತುಗಳನ್ನಾಗಿ ಪರಿವರ್ತಿಸುವುದಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಗ್ರೇಟರ್‌ ಬೆಂಗಳೂರು ಪ್ರದೇಶಗಳಲ್ಲಿ(ಜಾಹೀರಾತು) ನಿಯಮ 2025ರ ನಿಯಮ 8(7)(6)ರ ಹಾಗೂ  ಈ ಸಂಬಂಧ 2026ರ ಫೆಬ್ರವರಿ 4ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

ಹೈಕೋರ್ಟ್‌ ಮಧ್ಯಪ್ರವೇಶದಿಂದಾಗಿ ನಗರದಲ್ಲಿ 2018ರ ಬಳಿಕ ನಗರದಲ್ಲಿ ವಾಣಿಜ್ಯ ಜಾಹೀರಾತುಗಳ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿತ್ತು. ನಗರದ ಸೌದರ್ಯ ಮತ್ತು ಸುರಕ್ಷತೆಯನ್ನು ಕಾಪಾಡುವ ಸಲುವಾಗಿ ಖಾಸಗಿ ಕಟ್ಟಡಗಳ ಮೇಲೆ  ವಾಣಿಜ್ಯ ಜಾಹೀರಾತು ಫಲಕಗಳನ್ನು ನಿರ್ಬಂಧ ವಿಧಿಸುವ ಸಂಬಂಧ  ಬಿಬಿಎಂಪಿಯು ಸರ್ವಾನುಮತದಿಂದ ನಿರ್ಣಯ ಕೈಗೊಂಡಿತ್ತು. ಹೊರಾಂಗಣ ಸಂದೇಶ ಮತ್ತು ಸಾರ್ವಜನಿಕ ಪ್ರದರ್ಶನ ಬೈಲಾವನ್ನು ರಚನೆ ಮಾಡುವುದಕ್ಕೆ ಕಾರಣವಾಗಿತ್ತು. ಆದರೆ, ಇದಾದ ಬಳಿಕ ನಗರದಲ್ಲಿ ಖಾಸಗಿ ಕಟ್ಟಡಗಳ ಮೇಲೆ ಡಿಜಿಟಲ್‌ ಫಲಕಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಅಲ್ಲದೆ, ನಗರದಲ್ಲಿ ವಾಣಿಜ್ಯ ಜಾಹೀರಾತುಗಳ ನಿರ್ಬಂಧದ ನಡುವೆಯೂ ಡಿಜಿಟಲ್‌ ಜಾಹೀರಾತು ಫಲಕಗಳಿಗೆ ಜಿಬಿಎ ಅನುಮತಿ ನೀಡುತ್ತಿದ್ದು, ಇದು ಬಿಬಿಎಂಪಿ ಕಾಯಿದೆ ಸೆಕ್ಷನ್‌ 150ರನ್ನು ಉಲ್ಲಂಘಿಸಲಾಗಿದೆ.

ಅಲ್ಲದೇ, ಡಿಜಿಟಲ್‌ ಜಾಹೀರಾತು ಫಲಕಗಳು ಅತ್ಯಂತ ಹೊಳಪನ್ನು ಹೊಂದಿರಲಿದ್ದು, ಅದು ಬದಲಾವಣೆಯಾಗಿರುತ್ತದೆ. ಇದರಿಂದ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ತೀವ್ರತರದ ತೊಂದರೆ ನೀಡಲಿದೆ. ಇದರಿಂದ ರಸ್ತೆ ಅಪಘಾತಗಳಿಗೂ ಕಾರಣವಾಗುವ ಸಾಧ್ಯತೆ ಇದೆ. ಜೊತೆಗೆ ದೃಶ್ಯ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದು, ಸಂವಿಧಾನದ 21ನೇ ವಿಧಿ ಅಡಿಯಲ್ಲಿ ಲಭ್ಯವಿರುವ ಸ್ವಚ್ಛ ಪರಿಸರ ಹಕ್ಕಿನ ಉಲ್ಲಂಘನೆಗೆ ಕಾರಣವಾಗಲಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.