Justice Suraj Govindraj 
ಸುದ್ದಿಗಳು

ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನೆ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಕಾಯಿದೆಯು ಖಾಸಗಿ ಆಸ್ಪತ್ರೆ, ವೈದ್ಯರ ಕಾರ್ಯನಿರ್ವಹಣೆಯಲ್ಲಿ ಮಧ್ಯಪ್ರವೇಶಿಸುವ ಅಧಿಕಾರವನ್ನು ಸರ್ಕಾರಕ್ಕೆ ನೀಡುತ್ತದೆ. ಇದನ್ನು ಆಧರಿಸಿ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ತೊಂದರೆ ನೀಡುವ ಸಾಧ್ಯತೆಯಿದೆ ಎಂದು ಆಕ್ಷೇಪಿಸಲಾಗಿದೆ.

Bar & Bench

ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರ ಕಾರ್ಯನಿರ್ವಹಣೆಯ ಮೇಲೆ ನಿಗಾ ಇಡಲು ಜಾರಿಗೆ ತಂದಿರುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯಿದೆ 2007ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಮಂಗಳವಾರ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಭಾರತೀಯ ವೈದ್ಯಕೀಯ ಪರಿಷತ್ತಿನ (ಐಎಂಎ) ಕಾನೂನು ಕೋಶದ ಅಧಿಕೃತ ಪ್ರತಿನಿಧಿ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಡಾ.ಕೆ ರವಿಪ್ರಕಾಶ್ ಅವರು ಕಾಯಿದೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ನಡೆಸಿತು.

ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಹಾಗೂ ಲೋಪಗಳನ್ನು ಅರ್ಜಿಯಲ್ಲಿ ಪ್ರಶ್ನಿಸಿರುವ ಹಿನ್ನೆಲೆಯಲ್ಲಿ ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ರಾಜ್ಯ ಸರ್ಕಾರ, ಆರೋಗ್ಯ ಇಲಾಖೆ, ಭಾರತೀಯ ವೈದ್ಯಕೀಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿತು. ಜೊತೆಗೆ, ಅರ್ಜಿಗೆ ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿ ವಿಚಾರಣೆಯನ್ನು ಜುಲೈ 24ಕ್ಕೆ ಮುಂದೂಡಿತು.

ಕಾಯಿದೆಯು ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರ ಕಾರ್ಯನಿವಹಣೆಯಲ್ಲಿ ಮಧ್ಯಪ್ರವೇಶಿಸುವ ಅಧಿಕಾರವನ್ನು ಸರ್ಕಾರಕ್ಕೆ ನೀಡುತ್ತದೆ. ಕಾಯಿದೆಯನ್ನು ಬಳಸಿಕೊಂಡು ಸರ್ಕಾರವು ಖಾಸಗಿ ಆಸ್ಪತ್ರೆ ಹಾಗೂ ವೈದ್ಯರಿಗೆ ತೊಂದರೆ ನೀಡುವ ಸಾಧ್ಯತೆಯಿದೆ. ಆದ್ದರಿಂದ, 2007ರ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಸ್ಥಾಪನಾ ಕಾಯಿದೆ ಹಾಗೂ ಅದಕ್ಕೆ ಕಾಲಕಾಲಕ್ಕೆ ತರಲಾಗಿರುವ ತಿದ್ದುಪಡಿಗಳನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.