Mahesh Joshi & Karnataka HC 
ಸುದ್ದಿಗಳು

ಅಗತ್ಯವಿದ್ದರೆ ಕಸಾಪ ಅಧ್ಯಕ್ಷ ಮಹೇಶ್‌ ಜೋಶಿಗೆ ಭದ್ರತೆ ಒದಗಿಸಿ: ಹೈಕೋರ್ಟ್‌ ಮೌಖಿಕ ಸೂಚನೆ

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಶಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ.

Bar & Bench

ಜೀವ ಬೆದರಿಕೆ ಇದೆ ಎಂದು ಆತಂಕ ವ್ಯಕ್ತಪಡಿಸಿರುವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ್ಯ ಮಹೇಶ್ ಜೋಶಿ ಅವರಿಗೆ ಅಗತ್ಯವಿದ್ದರೆ ಸೂಕ್ತ ಭದ್ರತೆ ಒದಗಿಸಿ ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮೌಖಿಕ ನಿರ್ದೇಶನ ನೀಡಿದೆ.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಶಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಶನಿವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ “ಜೋಶಿ ಅವರಿಗೆ ಅಗತ್ಯವಿದ್ದರೆ ಸೂಕ್ತ ಭದ್ರತೆಯನ್ನು ಒದಗಿಸಿ” ಎಂದು ಪ್ರಾಸಿಕ್ಯೂಷನ್ ಪರ ಹಾಜರಿದ್ದ ರಾಹುಲ್ ಕಾರ್ಯಪ್ಪ ಅವರಿಗೆ ನಿರ್ದೇಶಿಸಿದ ಪೀಠ ಲಿಖಿತ ಆದೇಶವನ್ನು ಕಾಯ್ದಿರಿಸಿತು.

ಕಳೆದ ವರ್ಷ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿದ ಗಳಿಗೆಯಿಂದ ನನಗೆ ಜೀವ ಬೆದರಿಕೆಯ ಆಡಿಯೋ-ವಿಡಿಯೋ ಕರೆಗಳು ಬರುತ್ತಿವೆ. ಇದರಿಂದ ನನ್ನ ಜೀವಕ್ಕೆ ಅಪಾಯವಿದ್ದು, 24x7 ಭದ್ರತೆ ಒದಗಿಸುವ ಗನ್‌ಮೆನ್‌ ಜೊತೆಗೆ ಸೂಕ್ತ ಪೊಲೀಸ್‌ ರಕ್ಷಣೆ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಮಹೇಶ್ ಜೋಶಿ ಕೋರಿದ್ದರು.

ಜೋಶಿ ಪರ ಪದಾಂಕಿತ ಹಿರಿಯ ವಕೀಲ ಎಸ್‌ ಬಸವರಾಜು ವಾದ ಮಂಡಿಸಿದ್ದರು. ಹೈಕೋರ್ಟ್ ವಕೀಲ ಎಂ.ಉದಯ ಶಂಕರ್ ವಕಾಲತ್ತು ವಹಿಸಿದ್ದಾರೆ.

ಶುಕ್ರವಾರದ ವಿಚಾರಣೆಯಲ್ಲಿ ಮಹೇಶ್‌ ಜೋಶಿ ಪರ ಹಿರಿಯ ವಕೀಲ ಎಸ್‌ ಬಸವರಾಜು ಅವರು “20ಕ್ಕೂ ಹೆಚ್ಚು ಸಾಹಿತಿ/ಲೇಖಕರಿಗೆ ಬೆದರಿಕೆ ಹಿನ್ನೆಲೆಯಲ್ಲಿ ರಕ್ಷಣೆ ನೀಡಲಾಗಿದೆ. ಜೋಶಿ ಅವರಿಗೆ ರಕ್ಷಣೆ ಒದಗಿಸಲಾಗಿಲ್ಲ” ಎಂದಿದ್ದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಪ್ರತಿಮಾ ಹೊನ್ನಾಪುರ ಅವರು “ನ್ಯಾಯಾಲಯದ ಆದೇಶದಂತೆ ಬೆದರಿಕೆ ವಿಶ್ಲೇಷಣಾ ವರದಿ ಸಲ್ಲಿಸಲಾಗಿದೆ. ನ್ಯಾಯಾಲಯ ಮಾಡುವ ಆದೇಶಕ್ಕೆ ಸರ್ಕಾರ ಬದ್ಧವಾಗಿದೆ” ಎಂದರು.

ಆಗ ಪೀಠವು “ಬೆದರಿಕೆ ವಿಶ್ಲೇಷಣಾ ವರದಿಯಲ್ಲಿ ಕೆಲವು ಕಡೆ ಜೋಶಿ ಅವರಿಗೆ ಬೆದರಿಕೆ ಇದೆ ಎಂದು ಹೇಳಲಾಗಿದೆ. ಅದಾಗ್ಯೂ, ನಾಳೆ ಆದೇಶ ಮಾಡೋಣ” ಎಂದು ಶನಿವಾರಕ್ಕೆ ವಿಚಾರಣೆ ಮುಂದೂಡಿತ್ತು.