ರಣಜಿ ಕ್ರಿಕೆಟ್ ಆಟಗಾರ ಕೆ ಸಿ ಕಾರಿಯಪ್ಪ ಅವರ ವೀಸಾಗೆ ಅಡ್ಡಿಯಾಗಿದ್ದ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣ ಪತ್ರವನ್ನು ವಿತರಿಸಿದ 60 ನಿಮಿಷಗಳಲ್ಲೇ ಅವರ ವೀಸಾ ಒದಗಿಸಲು ಮುಂದಾದ ಕೇಂದ್ರ ವಿದೇಶಾಂಗ ಸಚಿವಾಲಯ ಹಾಗೂ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯ ಕಾರ್ಯವೈಖರಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಬೆಂಗಳೂರಿನ ಕೆ ಸಿ ಕಾರಿಯಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ವಿದೇಶಾಂಗ ಸಚಿವಾಲಯದ ಪರ ಹಾಜರಾಗಿದ್ದ ಉಪ ಸಾಲಿಸಿಟರ್ ಜನರಲ್ ಎಚ್ ಶಾಂತಿಭೂಷಣ್ ಅವರು ಪೊಲೀಸ್ ಕ್ಲಿಯರೆನ್ಸ್ ವಿತರಿಸಿದರೆ 60 ವೀಸಾ ಒದಗಿಸಲಾಗುವುದು ಎಂದು ಪೀಠಕ್ಕೆ ಭರವಸೆ ನೀಡಿದ್ದರು. ಇದರನ್ವಯ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಕ್ಲಿಯರೆನ್ಸ್ ನೀಡಿದ್ದರು.
ಕ್ಲಿಯರೆನ್ಸ್ ದೊರೆತ 60 ನಿಮಿಷಗಳ ಅವಧಿಯಲ್ಲೇ ತಾವು ಕೊಟ್ಟ ಮಾತಿನಂತೆ ಶಾಂತಿಭೂಷಣ್, ಕಾರಿಯಪ್ಪ ಅವರಿಗೆ ವೀಸಾ ದೊರೆಯಲು ತಕ್ಷಣದ ಕ್ರಮ ಕೈಗೊಂಡಿದ್ದರು. ಇದಕ್ಕೆ ಪೀಠ ಆದೇಶದಲ್ಲೇ ಮೆಚ್ಚುಗೆ ವ್ಯಕ್ತಪಡಿಸಿ ಅರ್ಜಿ ವಿಲೇವಾರಿ ಮಾಡಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಂ ರಾಘವನ್ ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಯುವತಿಯೊಬ್ಬರು ಕೆ ಸಿ ಕಾರಿಯಪ್ಪ ವಿರುದ್ಧ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ, ಕಾರಿಯಪ್ಪ ಅವರ ವಿದೇಶ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿತ್ತು.
ಕ್ರಿಕೆಟ್ ಆಡಲು ಇಂಗ್ಲೆಂಡ್‌ಗೆ ಪ್ರಯಾಣಿಸಬೇಕಿದೆ. ಆದರೆ, ಪೊಲೀಸ್ ಕ್ಲಿಯರೆನ್ಸ್ ಸಿಗದೇ ಅಡ್ಡಿಯಾಗುತ್ತಿದೆ. ಆದ್ದರಿಂದ, ಪೊಲೀಸ್ ಕ್ಲಿಯರೆನ್ಸ್ ನೀಡಲು ನಿರ್ದೇಶಿಸಬೇಕು ಎಂದು ಕೋರಿ ಕಾರಿಯಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು.