ex CM B S Yediyurappa and Karnataka HC 
ಸುದ್ದಿಗಳು

[ಪೋಕ್ಸೊ ಪ್ರಕರಣ] ಮಾಜಿ ಸಿಎಂ ಬಿಎಸ್‌ವೈಗೆ ನಿರೀಕ್ಷಣಾ ಜಾಮೀನು; ಸಂಜ್ಞೇ ಪರಿಗಣಿಸಿದ್ದ ಸಕ್ಷಮ ನ್ಯಾಯಾಲಯದ ಆದೇಶ ವಜಾ

ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌, ಅದರ ಸಂಬಂಧ ದಾಖಲಾಗಿದ್ದ ಆರೋಪ ಪಟ್ಟಿ ಹಾಗೂ ಸಂಜ್ಞೇ ಪರಿಗಣಿಸಿರುವುದನ್ನು ರದ್ದುಪಡಿಸುವಂತೆ ಬಿಎಸ್‌ವೈ ಕೋರಿದ್ದರು.

Siddesh M S

ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಸಕ್ಷಮ ನ್ಯಾಯಾಲಯ ಸಂಜ್ಞೇ ಪರಿಗಣಿಸಿರುವ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ವಜಾ ಮಾಡಿದ್ದು, ಇದೇ ಪ್ರಕರಣದಲ್ಲಿ ಬಿಎಸ್‌ವೈಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದರಿಂದ ಸದ್ಯಕ್ಕೆ ಬಿಎಸ್‌ವೈ ನಿರಾಳರಾಗಿದ್ದು, ಸದ್ಯಕ್ಕೆ ಬಂಧನದ ಭೀತಿ ಇಲ್ಲವಾಗಿದೆ. ವಿಚಾರಣಾ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮುಂದುವರಿಯಲಿದೆ.

ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌, ಆನಂತರ ಸಿಐಡಿ ಸಲ್ಲಿಸಿರುವ ಆರೋಪ ಪಟ್ಟಿ ಹಾಗೂ ಅದನ್ನು ಆಧರಿಸಿ ಸಕ್ಷಮ ನ್ಯಾಯಾಲಯ ಸಂಜ್ಞೇ ಪರಿಗಣಿಸಿರುವ ಆದೇಶವನ್ನು ವಜಾ ಮಾಡಬೇಕು ಮತ್ತು ಪ್ರಕರಣದಲ್ಲಿ ತನಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪ ಅವರು ಪ್ರತ್ಯೇಕ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು. ಅಲ್ಲದೇ, ಪೋಕ್ಸೊ ಪ್ರಕರಣದಲ್ಲಿ ಇತರೆ ಆರೋಪಿಗಳಾಗಿರುವ ವೈ ಎಂ ಅರುಣ, ರುದ್ರೇಶ ಮರಳಸಿದ್ದಯ್ಯ ಮತ್ತು ಜಿ ಮರಿಸ್ವಾಮಿ ಅವರೂ ಪ್ರತ್ಯೇಕವಾಗಿ ಪ್ರಕರಣ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯೂ ಸೇರಿ ಎಲ್ಲಾ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಇಂದು ಆದೇಶ ಪ್ರಕಟಿಸಿತು.

“ಪೋಕ್ಸೊ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಬಿಎಸ್‌ವೈ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಲಾಗಿದೆ” ಎಂದು ಪೀಠ ಆದೇಶಿಸಿತು.

ಆನಂತರ “ಎಫ್‌ಐಆರ್‌, ಸಿಐಡಿ ತನಿಖೆ ನಡೆಸಿ ಸಲ್ಲಿಸಿರುವ ಆರೋಪ ಪಟ್ಟಿ ಹಾಗೂ ಅದನ್ನು ಆಧರಿಸಿ ಸಕ್ಷಮ ನ್ಯಾಯಾಲಯ 4.7.2024ರಂದು ಸಂಜ್ಞೇ ಪರಿಗಣಿಸಿರುವ ಆದೇಶ ಪ್ರಶ್ನಿಸಿದ್ದ ಬಿಎಸ್‌ವೈ ಅರ್ಜಿಯನ್ನು ಭಾಗಶಃ ಪುರಸ್ಕರಿಸಲಾಗಿದೆ. ಸಕ್ಷಮ ನ್ಯಾಯಾಲಯವು ಸಂಜ್ಞೇ ಪರಿಗಣಿಸಿರುವ ಆದೇಶವನ್ನು ಯಡಿಯೂರಪ್ಪ ಅವರಿಗೆ ಸೀಮಿತವಾಗಿ ವಜಾ ಮಾಡಲಾಗಿದೆ. ಅಪರಾಧ, ತನಿಖೆ, ಅಂತಿಮ ವರದಿ ಎಲ್ಲವೂ ಹಾಗೆ ಉಳಿಯಲಿದೆ. ಈ ಆದೇಶದಲ್ಲಿ ಮಾಡಿರುವ ಅಭಿಪಾಯಗಳನ್ನು ಗಮನದಲ್ಲಿಟ್ಟುಕೊಂಡು ಅಂತಿಮ ವರದಿಗೆ ಸಂಬಂಧಿಸಿದಂತೆ ಆದೇಶ ಮಾಡಲು ಪ್ರಕರಣವನ್ನು ಮತ್ತೆ ಸಕ್ಷಮ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಸಂಜ್ಞೇ ಪರಿಗಣಿಸಿರುವ ಆದೇಶ ಹೊರತುಪಡಿಸಿ ಉಭಯ ಪಕ್ಷಕಾರರ ಪರ ಹಿರಿಯ ವಕೀಲರಾದ ಸಿ ವಿ ನಾಗೇಶ್‌ ಮತ್ತು ಪ್ರೊ. ರವಿವರ್ಮ ಕುಮಾರ್‌ ಅವರು ಎತ್ತಿರುವ ಯಾವುದೇ ವಾದಗಳಿಗೆ ಈ ನ್ಯಾಯಾಲಯವು ಉತ್ತರಿಸಿಲ್ಲ. ಎಲ್ಲಾ ವಾದಗಳನ್ನು ಮುಕ್ತವಾಗಿರಿಸಲಾಗಿದ್ದು, ಅರ್ಜಿದಾರರು ಸೂಕ್ತ ಸಂದರ್ಭದಲ್ಲಿ ಸೂಕ್ತ ವೇದಿಕೆಯಲ್ಲಿ ಪರಿಹಾರ ಪಡೆಯಬಹುದಾಗಿದೆ” ಎಂದು ನ್ಯಾಯಾಲಯ ಆದೇಶ ಮಾಡಿದೆ.

ಹೀಗಾಗಿ, ಪ್ರಕರಣದಲ್ಲಿ ಇತರೆ ಆರೋಪಿಗಳಾಗಿರುವ ವೈ ಎಂ ಅರುಣ, ರುದ್ರೇಶ ಮರಳಸಿದ್ದಯ್ಯ ಮತ್ತು ಜಿ ಮರಿಸ್ವಾಮಿ ಅವರ ವಿರುದ್ಧ ಸಂಜ್ಞೇ ಪರಿಗಣಿಸಿರುವ ಆದೇಶ ಮುಂದುವರಿಯಲಿದೆ.

ವಿಚಾರಣೆಯ ಸಂದರ್ಭದಲ್ಲಿ ಪ್ರಾಸಿಕ್ಯೂಷನ್‌ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ಬಿಎಸ್‌ವೈ ಮತ್ತು ದೂರುದಾರೆ (ಸಂತ್ರಸ್ತೆಯ ತಾಯಿ) ನಡುವಿನ ಸಂಭಾಷಣೆಯ ವಿಡಿಯೋ ಅಸಲಿಯಾಗಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಖಾತರಿಪಡಿಸಿದೆ. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದರ ಕುರಿತು ಸಂತ್ರಸ್ತೆಯ ತಾಯಿ ಪ್ರಶ್ನಿಸಿದಾಗ ಬಿಎಸ್‌ವೈ ಹಣ ನೀಡಿದ್ದಾರೆ” ಎಂದಿದ್ದರು.

“ದೂರುದಾರೆ ಸಾವನ್ನಪ್ಪುವವರೆಗೆ ಬಿಎಸ್‌ವೈ ಗೌಪ್ಯವಾಗಿದ್ದರು. ಜೂನ್‌ 12ರಂದು ಅರ್ಜಿ ಸಲ್ಲಿಸಲಾಗಿದ್ದು, ಆ ಬಳಿಕ ಒಂದು ತಿಂಗಳ ನಂತರ ಸ್ವಯಂ ಅಫಿಡವಿಟ್‌ ಹಾಕಲಾಗಿದೆ. ಅರ್ಜಿಯನ್ನು ಪರಿಶೀಲಿಸಿಲ್ಲವಾದ್ದರಿಂದ ಅದನ್ನು ವಜಾ ಮಾಡಬೇಕು. ದೂರುದಾರೆ ಸತ್ತ ಬಳಿಕ ಅಳೆದು ತೂಗಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ವಿಡಿಯೊದಲ್ಲಿನ ದೂರುದಾರೆ ಮತ್ತು ಬಿಎಸ್‌ವೈ ಧ್ವನಿ ಮಾದರಿ ಹೊಂದಾಣಿಕೆಯಾಗಿದೆ. ಮೊಬೈಲ್‌ ಅನ್ನು ಗುಜರಾತ್‌ನ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯಕ್ಕೆ ಕಳುಹಿಸಿ ಖಾತರಿಪಡಿಸಲಾಗಿದೆ” ಎಂದಿದ್ದರು.

“ದೂರುದಾರೆಗೆ 9,000 ರೂಪಾಯಿ ಪಾವತಿಸಿದ್ದೇನೆ ಎಂದು ಬಿಎಸ್‌ವೈ ಹೇಳಿದ್ದಾರೆ. ಪುತ್ರಿಗೆ ಲೈಂಗಿಕ ಕಿರುಕುಳ ನೀಡಿರುವುದನ್ನು ಸಂತ್ರಸ್ತೆಯ ತಾಯಿ ವಕೀಲ ಹಿರೇಮಠ ಅವರಿಗೆ ಫೋನ್‌ ಮಾಡಿ ತಿಳಿಸಿದ್ದಾರೆ. ಯಡಿಯೂರಪ್ಪ ಸಂತ್ರಸ್ತೆಯನ್ನು ಕರೆದೊಯ್ದ ರೂಮಿನ ಚಿತ್ರಣವನ್ನು ಸಂತ್ರಸ್ತೆ ನೀಡಿದ್ದು, ಅದನ್ನು ಬಿಎಸ್‌ವೈ ಖಾತರಿಪಡಿಸಿದ್ದಾರೆ. ಯಡಿಯೂರಪ್ಪ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರೆ ಇನ್ನಷ್ಟು ಮಾಹಿತಿ ಹೊರಗೆ ಬರುತ್ತಿತ್ತು” ಎಂದಿದ್ದರು.

ಯಡಿಯೂರಪ್ಪ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ತನ್ನ ಪುತ್ರಿಯೊಂದಿಗೆ (ಸಂತ್ರಸ್ತೆ) ಬಂದಿದ್ದ ದೂರುದಾರೆ (ಸಂತ್ರಸ್ತೆಯ ತಾಯಿ) ಅಹವಾಲು ಕೇಳಿ ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ಕರೆ ಮಾಡಿ, ಕ್ರಮಕೈಗೊಳ್ಳುವಂತೆ ಬಿಎಸ್‌ವೈ ಸೂಚಿಸಿದ್ದರು. ಒಂದೊಮ್ಮೆ ಬಿಎಸ್‌ವೈ ಸಂತ್ರಸ್ತೆಗೆ ಕಿರುಕುಳ ನೀಡಿದ್ದರೆ ಪೊಲೀಸ್‌ ಆಯುಕ್ತರ ಬಳಿಗೆ ತೆರಳಿದ್ದಾಗ ಅವರು ಈ ವಿಚಾರವನ್ನು ಏಕೆ ತಿಳಿಸಲಿಲ್ಲ? ಇದು ಅನುಮಾನ ಹುಟ್ಟಿಸುತ್ತದೆ” ಎಂದಿದ್ದರು.

“ಸತ್ಯ ಬಯಲು ಮಾಡಲು ತನಿಖೆ ನಡೆಸಲಾಗುತ್ತದೆ. ತನಿಖೆಯು ಪಕ್ಷಪಾತಿಯಾಗಿರಬಾರದು. ದೂರು ದಾಖಲಿಸುವುದಕ್ಕೂ ಮುನ್ನ ದೂರುದಾರೆ (ಸಂತ್ರಸ್ತೆಯ ತಾಯಿ; ಈಗ ಸಾವನ್ನಪ್ಪಿದ್ದಾರೆ) ಮತ್ತು ಸಂತ್ರಸ್ತೆಯು ಹಲವು ಬಾರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ” ಎಂದಿದ್ದರು.

ವಿಚಾರಣೆಯ ಒಂದು ಹಂತದಲ್ಲಿ ಪೀಠವು “ಸಂತ್ರಸ್ತೆಯ ತಾಯಿಯಾದ ದೂರುದಾರೆ ಹಾಗೂ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ನಡುವಿನ ಮೊಬೈಲ್‌ ರೆಕಾರ್ಡಿಂಗ್‌ ಸಂಭಾಷಣೆಯು ಆತಂಕಕಾರಿಯಾಗಿದೆ” ಎಂದಿತ್ತು.

ಅಲ್ಲದೇ, “ರೆಕಾರ್ಡಿಂಗ್‌ನಲ್ಲಿ ಧ್ವನಿ ಮತ್ತು ಬಿಎಸ್‌ವೈ ಅವರ ಧ್ವನಿ ಮಾದರಿ ಹೊಂದಾಣಿಕೆಯಾಗಿದೆ. ಒಂದೊಮ್ಮೆ ಧ್ವನಿ ಮಾದರಿ ಇತ್ಯಾದಿಯನ್ನು ನೀವು (ಬಿಎಸ್‌ವೈ) ಒಪ್ಪಿಕೊಳ್ಳುವುದಾದರೆ ದೂರುದಾರೆ ಹಾಕಿರುವ ಪ್ರಶ್ನೆಗಳು ಮತ್ತು ಅದಕ್ಕೆ ನೀವು ಉತ್ತರಿಸಿರುವುದನ್ನೂ ಒಪ್ಪಿಕೊಳ್ಳಬೇಕು” ಎಂದಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.