ಸುದ್ದಿಗಳು

[ಅಧಿಕಾರಿಗಳ ಸುಲಿಗೆ ಪ್ರಕರಣ] ಲೋಕಾಯುಕ್ತ ತನಿಖಾ ವರದಿ ಪರಿಶೀಲಿಸುವುದರಿಂದ ಪೂರ್ವಾಗ್ರಹ ಸಾಧ್ಯತೆ: ಹೈಕೋರ್ಟ್‌

“ಈ ರೀತಿಯಾದರೆ ಜನರಿಗೆ (ಲೋಕಾಯುಕ್ತದ ಮೇಲೆ) ನಂಬಿಕೆ ಹೋಗಿ ಬಿಡುತ್ತದೆ. ದೂರು ನೀಡಲು ನಿಮ್ಮ ಬಳಿ ಏಕೆ ಬರಬೇಕು ಎಂಬ ಒಕ್ಕಣೆಯ ದೂರುಗಳನ್ನು ಜನರಿಂದ ಸ್ವೀಕರಿಸುತ್ತಿದ್ದೇವೆ” ಎಂದು ಬೇಸರಿಸಿದ ಹಿರಿಯ ವಕೀಲ ಅಶೋಕ ಹಾರನಹಳ್ಳಿ.

Bar & Bench

“ಸರ್ಕಾರಿ ಅಧಿಕಾರಿಗಳ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದ ಲೋಕಾಯುಕ್ತ ತನಿಖಾ ವರದಿಯನ್ನು ಈ ಹಂತದಲ್ಲಿ ಪರಿಶೀಲಿಸುವುದರಿಂದ ಪೂರ್ವಾಗ್ರಹ ಉಂಟಾಗುವ ಸಾಧ್ಯತೆ ಇದೆ. ದೂರು ಮತ್ತು ಎಫ್‌ಐಆರ್‌ನಲ್ಲಿನ ಅಂಶಗಳನ್ನು ಆಧರಿಸಿ ನಿರ್ಧರಿಸಲಾಗುವುದು” ಎಂದು ಕರ್ನಾಟಕ ಹೈಕೋರ್ಟ್‌ ಸೋಮವಾರ ಮೌಖಿಕವಾಗಿ ಹೇಳಿದೆ. ಆ ಮೂಲಕ ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿ ಸಲ್ಲಿಸಲಾಗುವುದು ಎಂಬ ಲೋಕಾಯುಕ್ತದ ಮನವಿಯನ್ನು ಹೈಕೋರ್ಟ್‌ ಸೋಮವಾರ ತಿರಸ್ಕರಿಸಿತು.

ಸುಲಿಗೆ ಆರೋಪದ ಸಂಬಂಧ ದಾಖಲಾಗಿರುವ ಪ್ರಕರಣದ ತನಿಖೆಯಲ್ಲಿ ಭಾಗವಹಿಸುವಂತೆ ಸೂಚಿಸಿ ಲೋಕಾಯುಕ್ತ ಪೊಲೀಸ್‌ ಜಾರಿ ಮಾಡಿರುವ ನೋಟಿಸ್‌ ಪ್ರಶ್ನಿಸಿ ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಎಂ. ಜೋಶಿ ಹಾಗೂ ಭ್ರಷ್ಟಾಚಾರ ಪ್ರತಿಬಂಧ ಕಾಯಿದೆ ಸೆಕ್ಷನ್‌ 7A ಮತ್ತು 7(a) ಅಡಿ ತನ್ನ ವಿರುದ್ಧ ಲೋಕಾಯುಕ್ತ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ನಿಂಗಪ್ಪ ಜಿ ಅಲಿಯಾಸ್‌ ನಿಂಗಪ್ಪ ಸಾವಂತ್‌ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice S R Krishna Kumar

ಲೋಕಾಯುಕ್ತ ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟೇಶ ಅರಬಟ್ಟಿ ಅವರ ಜೊತೆ ಹಾಜರಾಗಿದ್ದ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರು “ತನಿಖೆ ನಡೆಯಲು ಅನುಮತಿಸಬೇಕು. ತನಿಖಾ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಭ್ರಷ್ಟಾಚಾರ ಪ್ರತಿಬಂಧ ಕಾಯಿದೆ ಸೆಕ್ಷನ್‌ 7(a) ನಿಂಗಪ್ಪಗೆ ಅನ್ವಯಿಸುತ್ತದೆ. ಅಧಿಕಾರಿಗಳ ಜೊತೆ ಸೇರಿಕೊಂಡು ನಿಂಗಪ್ಪ ಅಪರಾಧ ಎಸಗಿದ್ದಾರೆ” ಎಂದರು.

ಮುಂದುವರಿದು, “ಈ ರೀತಿಯಾದರೆ ಜನರಿಗೆ (ಲೋಕಾಯುಕ್ತದ ಮೇಲೆ) ನಂಬಿಕೆ ಹೋಗಿ ಬಿಡುತ್ತದೆ. ದೂರು ನೀಡಲು ನಿಮ್ಮ ಬಳಿ ಏಕೆ ಬರಬೇಕು ಎಂಬ ಒಕ್ಕಣೆಯ ದೂರುಗಳನ್ನು ಜನರಿಂದ ಸ್ವೀಕರಿಸುತ್ತಿದ್ದೇವೆ. ನಮ್ಮದೇ ಅಧಿಕಾರಿ ಭಾಗಿಯಾಗಿರುವ ಪ್ರಕರಣ ಇದಾಗಿದೆ. ಇದಕ್ಕೆ ದಾಖಲೆಗಳಿವೆ” ಎಂದರು.

ನಿಂಗಪ್ಪ ಪರ ವಕೀಲ ವೆಂಕಟೇಶ ದಳವಾಯಿ “ನಿಂಗಪ್ಪ ಖಾಸಗಿ ವ್ಯಕ್ತಿಯಾಗಿದ್ದು, ಅವರ ವಿರುದ್ಧ ಭ್ರಷ್ಟಾಚಾರ ಕಾಯಿದೆ ಸೆಕ್ಷನ್‌ 7A ಮತ್ತು 7(a) ಅಡಿ ಪ್ರಕರಣ ದಾಖಲಿಸಲಾಗದು. ಈಗ ತನಿಖೆ ಮುಂದುವರಿಸುವಂತೆ ಲೋಕಾಯುಕ್ತ ಪೊಲೀಸರು ಕೋರಲಾಗದು. ಲೋಕಾಯುಕ್ತ ಪೊಲೀಸರಿಗೆ ಸುಲಿಗೆ ಪ್ರಕರಣ ದಾಖಲಿಸುವ ವ್ಯಾಪ್ತಿ ಇಲ್ಲ. ತನ್ನ ಅನುಕೂಲಕ್ಕಾಗಿ ನಿಂಗಪ್ಪ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿದ್ದರೂ ಎಂಬ ಅಂಶ ಬಂದಾಗ ಮಾತ್ರ ನಿರ್ದಿಷ್ಟ ಸೆಕ್ಷನ್‌ ಅನ್ವಯಿಸಬಹುದು. ಈ ಸಂಬಂಧ ಮುಂದಿನ ವಿಚಾರಣೆಯಲ್ಲಿ ವಿಸ್ತೃತವಾಗಿ ವಾದಿಸಲಾಗುವುದು” ಎಂದರು.

ಶ್ರೀನಾಥ್‌ ಜೋಶಿ ಪರ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು “ಶ್ರೀನಾಥ್‌ ವಿರುದ್ಧದ ಪೊಲೀಸ್‌ ನೋಟಿಸ್‌ಗೆ ತಡೆ ಇದೆ. ಬೇರೆಯವರ ವಿರುದ್ಧ ಬೇಕಿದ್ದರೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಬಹುದು. ಗುರುವಾರದವರೆಗೆ ತನಿಖೆ ನಡೆಸಿದ್ದರೆ ಆಕಾಶ ಕಳಚಿ ಬೀಳುವುದಿಲ್ಲ” ಎಂದರು.

ವಾದ-ಪ್ರತಿವಾದ ಆಲಿಸಿದ ಪೀಠವು ದೂರು, ಎಫ್‌ಐಆರ್‌ ಹಾಗೂ ಆಕ್ಷೇಪಣೆಯನ್ನು ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದಾರೆ ಎಂದು ದಾಖಲಿಸಿ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

ಶ್ರೀನಾಥ್‌ ಜೋಶಿ ವಿರುದ್ಧದ ಪೊಲೀಸ್‌ ನೋಟಿಸ್‌ಗೆ ತಡೆ ನೀಡಿರುವ ಹೈಕೋರ್ಟ್‌ ನಿಂಗಪ್ಪಗೆ ಮಧ್ಯಂತರ ಜಾಮೀನು ನೀಡಿ, ಅವರ ವಿರುದ್ಧದ ಎಫ್‌ಐಆರ್‌ಗೆ ತಡೆ ನೀಡಿದೆ.

ಸರ್ಕಾರಿ ಅಧಿಕಾರಿಗಳ ವಿರುದ್ಧ ನಡೆಸಲಾಗುವ ದಾಳಿಗಳನ್ನು ಆಧರಿಸಿ ಸರ್ಕಾರಿ ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್ ಮಾಡುವುದು, ದಾಳಿಗಳ ಬಗ್ಗೆ ಮುಂಗಡವಾಗಿ ಮಾಹಿತಿಯನ್ನು ಸೋರಿಕೆ ಮಾಡುವುದನ್ನು ನಿಂಗಪ್ಪ ಮಾಡುತ್ತಿದ್ದರು. ಹೀಗೆ ಬೆದರಿಕೆ ಮತ್ತು ಮಾಹಿತಿ ಸೋರಿಕೆಯಿಂದ ಒಡ್ಡಿ ಅವರಿಂದ ಹಣ ಸಂಗ್ರಹಿಸುತ್ತಿದ್ದರು ಎಂದು ಆರೋಪಿಸಿ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಚಿತ್ರದುರ್ಗದಲ್ಲಿ ಶ್ರೀನಾಥ್‌ ಜೋಶಿ ಅವರು ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದಾಗ ನಿಂಗಪ್ಪ ಅವರು ಹೆಡ್‌ ಕಾನ್‌ಸ್ಟೆಬಲ್‌ ಆಗಿದ್ದರು. ಈ ಸಂಪರ್ಕ ಬಳಕೆ ಮಾಡಿಕೊಂಡು ಸುಲಿಗೆಯಲ್ಲಿ ಭಾಗಿಯಾಗಿದ್ದಾರೆ. ಇವರ ಜೊತೆ 30ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.