Police officer 
ಸುದ್ದಿಗಳು

ದೋಷಪೂರಿತ ಆರೋಪಪಟ್ಟಿ ಸಿದ್ಧಪಡಿಸಿದ್ದ ಇನ್‌ಸ್ಪೆಕ್ಟರ್ ವಿರುದ್ಧ ಇಲಾಖಾ ವಿಚಾರಣೆಗೆ ಹೈಕೋರ್ಟ್ ಆದೇಶ

ದೋಷಪೂರಿತ ಆರೋಪಪಟ್ಟಿ ಸಲ್ಲಿಸಿರುವ ತಪ್ಪಿತಸ್ಥ ಪೊಲೀಸ್ ಅಧಿಕಾರಿಯ ವಿರುದ್ಧದ ಇಲಾಖಾ ವಿಚಾರಣೆ ನಡೆಸಿ, ಮೂರು ತಿಂಗಳಲ್ಲಿ‌ ವರದಿ ಸಲ್ಲಿಸುವಂತೆ ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಿರುವ ಹೈಕೋರ್ಟ್‌.

Bar & Bench

ಪತಿಯ ಕಿರುಕುಳದಿಂದಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬರು ಪ್ರಾಣಾಪಾಯದಿಂದ ಪಾರಾಗಿ ಜೀವಂತವಾಗಿದ್ದರೂ,‌ ಪತಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧದಡಿ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದ ಬಾಣಸವಾಡಿ ಠಾಣೆಯ ಇನ್‌ಸ್ಪೆಕ್ಟರ್ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.

ಪತ್ನಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹಾಗೂ ಜೀವ ಬೆದರಿಕೆಯೊಡ್ಡಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಆರ್ ಎಸ್ ಪಾಳ್ಯದ ನಿಕ್ಸೋನ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

Justice M Nagaprasanna

ಪ್ರಕರಣದಲ್ಲಿ ದೋಷಪೂರಿತ ಆರೋಪಪಟ್ಟಿ ಸಲ್ಲಿಸಿರುವ ತಪ್ಪಿತಸ್ಥ ಪೊಲೀಸ್ ಅಧಿಕಾರಿಯ ವಿರುದ್ಧದ ಇಲಾಖಾ ವಿಚಾರಣೆ ನಡೆಸಿ, ಮೂರು ತಿಂಗಳಲ್ಲಿ‌ ವರದಿ ಸಲ್ಲಿಸುವಂತೆ ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಿದೆ.

ಪ್ರಕರಣದಲ್ಲಿ‌ ಕಳೆದ 2025ರ ಅಕ್ಟೋಬರ್ 20ರಂದು ಅರ್ಜಿದಾರ  ಹಾಗೂ ಆತನ ಪತ್ನಿ ನಡುವೆ ಜಗಳ ನಡೆದಿತ್ತು. ಮಾತಿನ ಭರದಲ್ಲಿ ಪತ್ನಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿ, ಮನೆಯ ಎರಡನೆಯ ಮಹಡಿಯಿಂದ ಕೆಳಗೆ ಜಿಗಿದಿದ್ದರು. ಪರಿಣಾಮ ಬೆನ್ನುಮೂಳೆ ಮತ್ತು ಕೈ ಮುರಿದಿತ್ತು. ನಂತರ ಸಂಪೂರ್ಣ ಚೇತರಿಸಿಕೊಂಡಿದ್ದರು. ಆತ್ಮಹತ್ಯೆಗೆ ಯತ್ನಿಸಿದ ಅರ್ಜಿದಾರರ ಪತ್ನಿ ಬದುಕಿರುವಾಗ ತನಿಖಾಧಿಕಾರಿಯು (ಇನ್‌ಸ್ಪೆಕ್ಟರ್) ಬಿಎನ್‌ಎಸ್ ಸೆಕ್ಷನ್ 108ರ ಆಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧದಲ್ಲಿ ಅರ್ಜಿದಾರನ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿರುವುದು ಮೂರ್ಖತನ ಎಂದು ಪೀಠ ತೀಕ್ಷ್ಣವಾಗಿ ನುಡಿದಿದೆ.

ಅಜಾಗರೂಕತೆಯಿಂದ ಅಥವಾ ಕಾನೂನು ಕ್ರಮ ಕೈಗೊಳ್ಳುವ ಆತುರದಲ್ಲಿ ಆರೋಪ‌ ಪಟ್ಟಿಯನ್ನು ತಪ್ಪಾಗಿ ಸಲ್ಲಿಸಲಾಗಿದೆ. ಇದರಿಂದ, ಆರು ತಿಂಗಳಿಗೂ ಅಧಿಕ ಕಾಲ ಅರ್ಜಿದಾರರನ್ನು ಬಂಧಿಸಿ ಇಡಲಾಗಿದೆ‌.‌ ಆತ ಜೈಲಿನ ಸರಳುಗಳ ಹಿಂದೆ ನರಳುವಂತಾಗಿದೆ. ಇದು ತನಿಖೆಯ ಅವಿವೇಕ ಮತ್ತು ವ್ಯಕ್ತಿಯೊಬ್ಬರ ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಅಸಡ್ಡೆ ಹೊಂದಿರುವುದನ್ನು ಪ್ರತಿಬಿಂಬಿಸುತ್ತದೆ. ತನಿಖಾಧಿಕಾರಿಯ ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯ ತೋರುವ ಈ ಪ್ರಕರಣ ನ್ಯಾಯಾಂಗದ ಮನಃಸ್ಸಾಕ್ಷಿಗೆ ಆಘಾತ ಉಂಟು ಮಾಡಿದೆ.‌‌ ಆದ್ದರಿಂದ, ಅರ್ಜಿದಾರರನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಬೇಕು‌. ಇನ್‌ಸ್ಪೆಕ್ಟರ್ ವಿರುದ್ಧ ಇಲಾಖಾ ವಿಚಾರಣೆ ನಡೆಸಿ,‌ ಅದರ ಆಧಾರದಲ್ಲಿ ಕೈಗೊಂಡ ಕ್ರಮದ ಬಗ್ಗೆ ಮೂರು ತಿಂಗಳಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಪೀಠ ಸರ್ಕಾರಕ್ಕೆ ನಿರ್ದೇಶಿಸಿದೆ.

ಇದೇ ವೇಳೆ, ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಂಡು, ಜತೆಯಾಗಿ ಜೀವನ ನಡೆಸಲಾಗುವುದು ಎಂದು ಅರ್ಜಿದಾರ ಪತಿ ಹಾಗೂ ದೂರುದಾರ ಪತ್ನಿ ತಿಳಿಸಿರುವುದನ್ನು ಮನ್ನಿಸಿರುವ ಪೀಠವು ಅರ್ಜಿದಾರನ ವಿರುದ್ಧ ಪ್ರಕರಣವನ್ನು ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಯುವಕ ಮತ್ತು ದೂರುದಾರೆ ಪರಸ್ಪರ ಪ್ರೀತಿಸಿ 2018ರ ಅಕ್ಟೋಬರ್‌ನಲ್ಲಿ ಮದುವೆಯಾಗಿದ್ದು ಒಂದು ವರ್ಷದ ಹೆಣ್ಣು ಮಗುವಿದೆ. ಕಳೆದ ವರ್ಷ ದಂಪತಿ ನಡುವೆ ಕ್ಷುಲ್ಲಕ‌ ಕಾರಣಕ್ಕೆ ಕೌಟುಂಬಿಕ ಜಗಳ ನಡೆದಿತ್ತು. ಮಾತಿನ ಭರದಲ್ಲಿ ಪತ್ನಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಮನೆಯ ಎರಡನೆಯ ಮಹಡಿಯಿಂದ ಕೆಳಗೆ ಜಿಗಿದಿದ್ದರು. ಘಟನೆಯಲ್ಲಿ ಪತ್ನಿ ಮೃತಪಟ್ಟಿರಲಿಲ್ಲ. ಗಾಯಗೊಂಡಿದ್ದ ಆಕೆ ಚಿಕಿತ್ಸೆ ಪಡೆದ ಬಳಿಕ ಪತಿಯ ವಿರುದ್ಧ ಪತ್ನಿ ಬಾಣಸವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು, ಭಾರತೀಯ ನ್ಯಾಯ ಸಂಹಿತೆ-2023ರ (ಬಿಎನ್ಎಸ್) ಸೆಕ್ಷನ್ 108, 62, 85 ಮತ್ತು 352ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ನಂತರ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

Nixon Vs State of Karnataka.pdf
Preview