ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಿಂದ (ಕೆಎಸ್‌ಡಿಎಲ್) ತಿರಸ್ಕೃತಗೊಂಡಿರುವ ಕೆಲವು ಕಂಪೆನಿಗಳ ಕೆಮಿಕಲ್ಸ್ ಮಾದರಿಯ ಪರೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಭಾರತೀಯ ವಿಜ್ಞಾನ ಸಂಸ್ಥೆಗೆ (ಐಐಎಸ್‌ಸಿ) ಕರ್ನಾಟಕ ಹೈಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.
ರಾಸಾಯನಿಕಗಳ ಮಾದರಿ ತಿರಸ್ಕರಿಸಿದ್ದ ಕೆಎಸ್‌ಡಿಎಲ್ ಕ್ರಮ ಪ್ರಶ್ನಿಸಿ ಕೆಮಿಕಲ್ ಕಂಪೆನಿಗಳಾದ ಡೆಲಿಷಿಯಾ ಕೆಮಿಕಲ್ಸ್, ಕೆಮಿಕ್ಸಿಲ್ ಕಾರ್ಪೊರೇಷನ್ ಹಾಗೂ ಬನ್ನಾರಿ ಕನ್‌ಸ್ಟ್ರಕ್ಷನ್ಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ ಅವರು ಕೆಎಸ್‌ಡಿಎಲ್ ಸಾಬೂನು ಮತ್ತು ಮಾರ್ಜಕ ತಯಾರಿಕೆಗಾಗಿ ಕೆಮಿಕಲ್ ಆಯಿಲ್‌ನಂತಹ ಕಚ್ಚಾವಸ್ತುಗಳನ್ನು ಖಾಸಗಿ ಕಂಪನಿಗಳಿಂದ ಖರೀದಿಸುತ್ತದೆ. ಆದರೆ, ಅರ್ಜಿದಾರ ಕಂಪೆನಿಗಳು ಒದಗಿಸಿದ್ದ 15 ಕೆಮಿಕಲ್ ಮಾದರಿಗಳನ್ನು ಕೆಎಸ್‌ಡಿಎಲ್ ತಿರಸ್ಕರಿಸಿದೆ. ಬದಲಿಗೆ, ದುಬಾರಿ ಬೆಲೆಗೆ ಬೇರೆ ಕಂಪೆನಿಗೆ ಕೆಮಿಕಲ್ ಗುತ್ತಿಗೆ ನೀಡಲಾಗಿದೆ. ಈ ಕ್ರಮದ ಹಿಂದೆ ದುರುದ್ದೇಶವಿದೆ ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತಿದೆ. ಆದ್ದರಿಂದ, ಕೆಎಸ್‌ಡಿಎಲ್ ತಿರಸ್ಕರಿಸಿರುವ ಕೆಮಿಕಲ್‌ಗಳ ಮಾದರಿಯನ್ನು ಐಐಎಸ್‌ಸಿ ವಿಜ್ಞಾನಿಗಳಿಂದ ಪರೀಕ್ಷೆಗೊಳಪಡಿಸಲು ಆದೇಶಿಸಬೇಕು ಎಂದು ಪೀಠವನ್ನು ಕೋರಿದರು.
ಆ ಮನವಿ ಪುರಸ್ಕರಿಸಿದ ಪೀಠವು ಅರ್ಜಿದಾರರ ಕಂಪೆನಿಗಳು ಕೆಎಸ್‌ಡಿಎಲ್ ತಿರಸ್ಕರಿಸಿರುವ ಕೆಮಿಕಲ್ ಮಾದರಿಯನ್ನು ಐಐಎಸ್‌ಸಿಗೆ ಒದಗಿಸಬೇಕು. ಆ ಕೆಮಿಕಲ್‌ಗಳ ಮಾದರಿಯನ್ನು ಐಐಎಸ್‌ಸಿ ತಪಾಸಣೆ ನಡೆಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.
ಮಾಡಾಳು ವಿರುದ್ಧದ ದೂರುದಾರರಿಂದ ಅರ್ಜಿ: ಅರ್ಜಿದಾರ ಸಂಸ್ಥೆಯಲ್ಲೊಂದಾದ ಕೆಮಿಕ್ಸಿಲ್ ಕಾರ್ಪೊರೇಷನ್‌ನ ಶ್ರೇಯಸ್ ಕಶ್ಯಪ್ ಅವರೇ ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣ ಸಂಬಂಧ ಶಾಸಕ ಮಾಡಾಳು ವಿರೂಪಾಕ್ಷಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ. ಆ ದೂರು ನೀಡುವ ಮುನ್ನವೇ ಕಶ್ಯಪ್ ಅವರ ಕಂಪೆನಿಯ ಕೆಮಿಕಲ್ಸ್ ಮಾದರಿಯನ್ನು ಕೆಎಸ್‌ಡಿಎಲ್ ತಿರಸ್ಕರಿಸಿತ್ತು. ತಮ್ಮ ಕಂಪೆನಿಯ ಕೆಮಿಕಲ್ ಮಾದರಿ ತಿರಸ್ಕರಿಸಿ, ದುಬಾರಿ ಬೆಲೆಗೆ ಬೇರೆ ಕಂಪೆನಿಗಳಿಗೆ ಗುತ್ತಿಗೆ ನೀಡಲಾಗಿದೆ ಎಂದು ಆಕ್ಷೇಪಿಸಿ ಫೆಬ್ರವರಿ 14ರಂದು ಅರ್ಜಿದಾರ ಕಂಪೆನಿಗಳು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದವು. ಲಂಚ ಪ್ರಕರಣ ಸಂಬಂಧ ಮಾರ್ಚ್ 2ರಂದು ಮಾಡಾಳು ವಿರೂಪಾಕ್ಷಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.