ಮಾಜಿ ಸಂಸದ ಡಿ ಕೆ ಸುರೇಶ್ ಸಹೋದರಿ ಎಂದು ಹೇಳಿಕೊಂಡು 3.25 ಕೋಟಿ ರೂಪಾಯಿ ಮತ್ತು 450 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿರುವ ಎರಡನೇ ಪ್ರಕರಣದಲ್ಲಿ ಬಂಧಿತ ಐಶ್ವರ್ಯಾ ಗೌಡ ಅಲಿಯಾಸ್ ನವ್ಯಶ್ರೀ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಈಚೆಗೆ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದಂಗಡಿಯ ಮಾಲೀಕರಿಗೆ ವಂಚಿಸಿದ ಪ್ರಕರಣದಲ್ಲಿ ಹೈಕೋರ್ಟ್ ಐಶ್ವರ್ಯಾ ಮತ್ತು ಆಕೆಯ ಪತಿ ಕೆ ಎನ್ ಹರೀಶ್ ಬಿಡುಗಡೆಗೆ ಆದೇಶಿಸಿತ್ತು.
ಬೆಂಗಳೂರಿನ ರಾಜರಾಜೇಶ್ವರಿ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಸಂಬಂಧ ಬಂಧಿಸಿರುವುದನ್ನು ಪ್ರಶ್ನಿಸಿ ಐಶ್ವರ್ಯಾ ಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್ ಚೌಟ ಅವರು “ಇಂಥದ್ದೇ ಆರೋಪ ಇರುವ ಬೇರೊಂದು ಪ್ರಕರಣದಲ್ಲಿ ಈಚೆಗೆ ಐಶ್ವರ್ಯಾ ಅವರ ಬಿಡುಗಡೆಗೆ ಹೈಕೋರ್ಟ್ ಆದೇಶಿಸಿದೆ. ರಾಜರಾಜೇಶ್ವರಿ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಸಂಬಂಧ ಐಶ್ವರ್ಯಾರನ್ನು ವಿಚಾರಣೆಗೆ ಕರೆದಿರುವ ಪೊಲೀಸರು ಏಕಾಏಕಿ ಬಂಧಿಸಿದ್ದಾರೆ. ಆಕೆಗೆ ಸಿಆರ್‌ಪಿಸಿ ಸೆಕ್ಷನ್ 41ಎ ಅಡಿ ನೋಟಿಸ್ ನೀಡಿಲ್ಲ. ಇದು ಸುಪ್ರೀಂ ಕೋರ್ಟ್ ತೀರ್ಪುಗಳಿಗೆ ವಿರುದ್ಧವಾದ ಕ್ರಮ. ಈ ಹಿಂದಿನ ಪ್ರಕರಣದಲ್ಲಿ ಮಾಡಿರುವ ಆದೇಶವನ್ನು ಇದಕ್ಕೆ ಅನ್ವಯಿಸಬಹುದು. ಪೊಲೀಸರು ತನಿಖೆ ಮುಂದುವರಿಸಲಿ” ಎಂದರು.
ಇದಕ್ಕೆ ಸರ್ಕಾರದ ವಕೀಲರು ಆಕ್ಷೇಪಿಸಿದರು. ಆಗ ಪೀಠವು “ಆಕೆ ಏಕೆ ಜೈಲಿನಲ್ಲಿರಬೇಕು? ಅಗತ್ಯವಿಲ್ಲ” ಎಂದು ಹೇಳಿತು.
ಅಂತೆಯೇ, “ಅರ್ಜಿದಾರೆ ಐಶ್ವರ್ಯಾಗೌಡ ಮನೆಯಲ್ಲಿ ಪೊಲೀಸರು ಕಾನೂನಿನ ಅನ್ವಯ ತನಿಖೆ, ಶೋಧ ಮತ್ತು ಜಫ್ತಿ ಮುಂದುವರಿಸಬಹುದಾಗಿದೆ. ಐಶ್ವರ್ಯಾ ಗೌಡ ಅವರು ತನಿಖೆಗೆ ಸಹಕರಿಸಬೇಕು ಮತ್ತು ಸಾಕ್ಷಿ ತಿರುಚುವುದು ಅಥವಾ ನಾಶಪಡಿಸಬಾರದು” ಎಂದು ಆದೇಶಿಸಿರುವ ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ದೂರುದಾರೆ ಶಿಲ್ಪಾಗೌಡ ಅವರಿಗೆ ನೋಟಿಸ್ ಜಾರಿ ಮಾಡಿದೆ. ವಿಚಾರಣೆಯನ್ನು ಫೆಬ್ರವರಿ 27ಕ್ಕೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ: ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಐಶ್ವರ್ಯಾ ಗೌಡ ವಿರುದ್ಧ ಶಿಲ್ಪಾಗೌಡ ದೂರು ದಾಖಲಿಸಿದ್ದರು. ದೂರಿನಲ್ಲಿ ಅವರು, "ನಮ್ಮ ಮನೆಯ ಪಕ್ಕದ ರಸ್ತೆಯ ನಿವಾಸಿಯಾಗಿರುವ ಐಶ್ವರ್ಯಾ ಗೌಡ ಎರಡು ವರ್ಷಗಳ ಹಿಂದೆ ಪರಿಚಯವಾಗಿದ್ದು, ಮಾಜಿ ಸಂಸದ ಡಿ ಕೆ ಸುರೇಶ್ ಸಹೋದರಿ ಎಂದು ಹೇಳಿಕೊಂಡಿದ್ದರು. ಚಿನ್ನದ ವ್ಯಾಪಾರ, ಚಿಟ್ ಫಂಡ್ ವ್ಯವಹಾರ, ವಿಲ್ಲಾ ನಿರ್ಮಾಣ, ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದು, ಹೂಡಿಕೆ ಮಾಡಿದರೆ ಅಧಿಕ ಲಾಭ ಪಡೆಯಬಹುದು ಎಂದು ಹೇಳಿಕೊಂಡಿದ್ದರು. ಆನಂತರ ತನ್ನ ಬಳಿ ಚಿನ್ನ ಖರೀದಿಸಿದರೆ ಮಾರುಕಟ್ಟೆ ದರಕ್ಕಿಂತ ಕಡಿಮೆ ದರಕ್ಕೆ ಕೊಡಿಸುವುದಾಗಿ ಹೇಳಿದ್ದರು. ಆಕೆಯ ಮಾತು ನಂಬಿ ಸಂಬಂಧಿಕರು ಹಾಗೂ ಸ್ನೇಹಿತರಿಂದ ಹಣ ಪಡೆದು ಸುಮಾರು ರೂ. 65 ಲಕ್ಷ ನಗದು ನೀಡಿದ್ದೆ. ರೂ. 2.60 ಕೋಟಿಯನ್ನು ಸಾಯಿದಾ ಬಾನು, ಧನು, ಶೀತಲ್, ಚೇತನ್, ಲಕ್ಷ್ಮಿ, ಪ್ರವೀಣ್, ಮಹೇಶ್, ಹರೀಶ್ ಹಾಗೂ ಇತರರ ಬ್ಯಾಂಕ್ ಖಾತೆಗಳಿಂದ ಐಶ್ವರ್ಯಾಗೆ ವರ್ಗಾಯಿಸಿದ್ದೆ. 2022ರ ಜನವರಿಯಿಂದ ಇಲ್ಲಿಯ ತನಕ ಐಶ್ವಾರ್ಯಾಗೆ ರೂ. 3.25 ಕೋಟಿ ಹಣ ನೀಡಿದ್ದೇನೆ” ಎಂದು ವಿವರಿಸಿದ್ದರು.
“2023ರಲ್ಲಿ ವ್ಯವಹಾರಕ್ಕೆ ತುರ್ತಾಗಿ ಹಣ ಬೇಕಿದೆ. ನಿನ್ನ ಚಿನ್ನ ನೀಡಿದರೆ ಅದನ್ನು ಗಿರವಿಗೆ ಇಟ್ಟು ವ್ಯವಹಾರಕ್ಕೆ ಬಳಸಿಕೊಂಡು ಆನಂತರ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದರು. ಅದರಂತೆ ಬೌನ್ಸರ್ ಗಜ ನಮ್ಮ ಮನೆಗೆ ಬಂದು ಚಿನ್ನಾಭರಣ ಪಡೆದು ಹೋಗಿದ್ದನು. ಇದಾದ ನಂತರ ಐಶ್ವರ್ಯಾ ನನ್ನ ಜೊತೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಹಣ ಮತ್ತು ಚಿನ್ನಾಭರಣ ಹಿಂದಿರುಗಿಸಿಲ್ಲ” ಎಂದು ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಶಿಲ್ಪಾ ಗೌಡ ಅವರು ದೂರು ನೀಡಿದ್ದರು.
ಇದರ ಅನ್ವಯ ಐಶ್ವರ್ಯಾ, ಹರೀಶ್ ಮತ್ತು ಬೌನ್ಸರ್ ಗಜ ಎಂಬವರ ವಿರುದ್ಧ ವಂಚನೆ, ಮೋಸ, ನಂಬಿಕೆ ದ್ರೋಹ ಮತ್ತು ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಇನ್ನು ಮಂಡ್ಯ ಜಿಲ್ಲೆಯ ಪೂರ್ವ ಪೊಲೀಸ್ ಠಾಣೆಯಲ್ಲಿಯೂ ಐಶ್ವರ್ಯಾ, ಆಕೆಯ ಪತಿ ಹರೀಶ್ ಮತ್ತು ಸಹೋದರ ಹಳ್ಳಿ ಮಂಜುನಾಥ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎನ್ನಲಾಗಿದೆ.