Justice M Nagaprasanna and Karnataka HC 
ಸುದ್ದಿಗಳು

ಸುಳ್ಳು ಮಾಹಿತಿ ನೀಡಿ ವೈದ್ಯಕೀಯ ಪದವಿ: ಎನ್‌ಆರ್‌ಐ ಯುವತಿಗೆ ಶುಲ್ಕ ಪಾವತಿಸಿ ದೇಶ ತೊರೆಯಲು ಹೈಕೋರ್ಟ್‌ ಆದೇಶ

“ಅರ್ಜಿದಾರೆಯು ನಾಚಿಕೆಯಿಲ್ಲದೇ ಸುಳ್ಳು ಹೇಳಿ, ಅನೈತಿಕ ಮಾರ್ಗದ ಮೂಲಕ ತನ್ನ ಗುರಿ ಸಾಧಿಸಿದ್ದಾರೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

Bar & Bench

ಭಾರತೀಯೆ ಎಂದು ಸುಳ್ಳು ಮಾಹಿತಿ ನೀಡಿ ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪೂರ್ಣಗೊಳಿಸಿ, ಮತ್ತೆ ಅಮೆರಿಕಾಕ್ಕೆ ಹಿಂದಿರುಗಲು ಮುಂದಾಗಿದ್ದ ವೈದ್ಯೆ ನಡೆಯನ್ನು ತೀವ್ರವಾಗಿ ಟೀಕಿಸಿರುವ ಕರ್ನಾಟಕ ಹೈಕೋರ್ಟ್, ಅನಿವಾಸಿ ಭಾರತೀಯ (ಎನ್‌ಆರ್‌ಐ) ಅಥವಾ ಭಾರತದ ಸಾಗರೋತ್ತರ ನಾಗರಿಕ (ಒಸಿಐ) ಕೋಟಾದಡಿ ಭರಿಸುವ ಶುಲ್ಕ ವಸೂಲಿ ಮಾಡಿ ಅವರು ದೇಶಕ್ಕೆ ತೆರಳಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.

ಮೈಸೂರಿನ 24 ವರ್ಷದ ಡಾ. ಭಾನು ಸಿ. ರಾಮಚಂದ್ರನ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಮಾನ್ಯ ಮಾಡಿದೆ.

“ಅರ್ಜಿದಾರೆಯು ನಾಚಿಕೆಯಿಲ್ಲದೇ ಸುಳ್ಳು ಹೇಳಿ, ಅನೈತಿಕ ಮಾರ್ಗದ ಮೂಲಕ ತನ್ನ ಗುರಿ ಸಾಧಿಸಿದ್ದಾರೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಅರ್ಜಿದಾರೆ ಭಾರತದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ವೃತ್ತಿ ಜೀವನವನ್ನು ತಮ್ಮ ದೇಶದಲ್ಲಿ ಮುಂದುವರೆಸಲು ಮುಂದಾಗಿದ್ದಾರೆ. ಭಾರತೀಯಳು ಎಂದು ಸುಳ್ಳು ಹೇಳಿ, ಎಲ್ಲ ಸೌಲಭ್ಯಗಳನ್ನು ಪಡೆದು ನಿಯಮಬಾಹಿರವಾಗಿ ತಮ್ಮ ಗುರಿ ಸಾಧನೆ ಮಾಡಿದ್ದಾರೆ. ಈ ಬೆಳವಣಿಗೆ ಅತ್ಯಂತ ಖಂಡನೀಯ ಎಂದು ಪೀಠ ಆದೇಶದಲ್ಲಿ ಹೇಳಿದೆ.

ಅರ್ಜಿದಾರರ ಪರ ವಕೀಲರು, ಅರ್ಜಿದಾರೆಯು ಅಮೆರಿಕಾದಿಂದ ಭಾರತಕ್ಕೆ ಹಿಂದಿರುಗುವ ಸಂದರ್ಭದಲ್ಲಿ ಅಪ್ರಾಪ್ತರಾಗಿದ್ದರು. ಅವರ ತಾಯಿ ಒಬ್ಬಂಟಿಯಾಗಿದ್ದರು. ಹೀಗಾಗಿ, ಅರ್ಜಿದಾರರಿಗೆ ನಾಗರಿಕೆ ಕಾಯಿದೆ ಮತ್ತು ಪಾಸ್‌ಪೋರ್ಟ್ ಕುರಿತಂತೆ ಯಾವುದೇ ಮಾಹಿತಿ ಇರಲಿಲ್ಲ. ಇದೀಗ ವಿದ್ಯಾಭ್ಯಾಸ ಮುಗಿಸಿ ತಮ್ಮ ದೇಶಕ್ಕೆ ಹಿಂದಿರುಗುತ್ತಿದ್ದಾರೆ. ಇದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕೋರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸಹಾಯಕ ಸಾಲಿಸಿಟರ್‌ ಜನರಲ್ ಎಚ್ ಶಾಂತಿ ಭೂಷಣ್ ಅವರು ಅರ್ಜಿದಾರರ ಭಾರತಕ್ಕೆ ಬರುವುದಕ್ಕೆ ಪಡೆದಿದ್ದ ಪ್ರವಾಸಿ ವೀಸಾ ಅವಧಿ 2004ರಲ್ಲಿ ಮುಕ್ತಾಯವಾಗಿದೆ. ಹೀಗಾಗಿ, ಅರ್ಜಿದಾರೆ 2004ರಿಂದ ಈವರೆಗೂ ಅಕ್ರಮವಾಗಿ ನೆಲೆಸಿದ್ದಾರೆ. ಇದು ವಿದೇಶಿಯರ ಕಾಯಿದೆಗೆ ವಿರುದ್ಧ. ಸುಳ್ಳು ಮಾಹಿತಿ ನೀಡಿ ಅರ್ಜಿದಾರೆಯು ವೈದ್ಯಕೀಯ ಪದವಿ ಪೂರ್ಣಗೊಳಿಸಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ: ಅರ್ಜಿದಾರರು 1997ರ ಪೆಬ್ರವರಿ 5ರಂದು ಅಮೆರಿಕಾದಲ್ಲಿ ಭಾರತೀಯ ದಂಪತಿಗೆ ಜನಿಸಿದ್ದರು. ಪೋಷಕರು ಭಾರತೀಯ ರಾಯಭಾರ ಕಚೇರಿಯಲ್ಲಿ ಅಮೆರಿಕ ನಾಗರಿಕ ಎಂಬುದಾಗಿ ನೋಂದಣಿಯನ್ನೂ ಮಾಡಿಸಿದ್ದರು. ಬಳಿಕ ಅಮೆರಿಕ ಪಾಸ್‌ ಪೋರ್ಟ್‌ ಪಡೆದಿದ್ದರು. ಇದರ ಅವಧಿಯು 2004ರ ಸೆಪ್ಟಂಬರ್​ 13ರ ವರೆಗೂ ಇತ್ತು.  ಇದಕ್ಕೂ ಮುನ್ನ ಅಂದರೆ, ಅರ್ಜಿದಾರೆ 6 ವರ್ಷದವರಿದ್ದಾಗ 2003ರ ಜೂನ್​ 23 ರಂದು ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಆಗಮಿಸಿದ್ದರು.

ಬಳಿಗ ರಾಜ್ಯದಲ್ಲಿಯೇ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಪೂರ್ಣಗೊಳಿಸಿದ್ದರು. ಇದಾದ ಬಳಿಕ ಭಾರತೀಯ ನಿವಾಸಿ ಎಂದು ಅರ್ಜಿ ಹಾಕಿ ಸಾಮಾನ್ಯ ಪ್ರವೆಶ ಪರೀಕ್ಷೆ (ಸಿಇಟಿ) ಬರೆದಿದ್ದರು. ಇದರಿಂದ ಸರ್ಕಾರಿ ಕೋಟಾದಲ್ಲಿ ಮಂಡ್ಯದ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ವೈದ್ಯಕೀಯ ಪದವಿ ಪಡೆದಿದ್ದರು.

ವೈದ್ಯಕೀಯ ಪದವಿ ಪೂರ್ಣಗೊಂಡ ಬಳಿ ಹೊಸದಾಗಿ ಪಾಸ್‌ಪೋರ್ಟ್ ನೀಡುವಂತೆ ಅಮೆರಿಕಾ ರಾಯಭಾರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ್ದ ಅಮೆರಿಕಾ ಒಂದು ವರ್ಷದ ಅವಧಿಗೆ ಪಾಸ್‌ ಪೋರ್ಟ್‌ ನೀಡಿತ್ತು. 

ಬಳಿಕ ಭಾರತದಿಂದ ನಿರ್ಗಮಿಸಲು ಅನುಮತಿ ನೀಡುವಂತೆ ವಲಸೆ ವಿಭಾಗದ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ವಲಸೆ ಕಚೇರಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.