Karnataka HC, Darshan and Media channels 
ಸುದ್ದಿಗಳು

ಸುದ್ದಿ ವಾಹಿನಿಗಳ ವಿರುದ್ಧ ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ಕೋರಿಕೆ: ದರ್ಶನ್ ಅರ್ಜಿ ಭಾಗಶಃ ಪುರಸ್ಕಾರ

2024ರ ಜೂನ್‌ 9ರಂದು ಬೆಂಗಳೂರಿನ ರಾಜಕಾಲುವೆಯಲ್ಲಿ ರೇಣುಕಾಸ್ವಾಮಿ ಮೃತದೇಹ ಪತ್ತೆಯಾಗಿತ್ತು. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದ ಮೇಲೆ ನಟ ದರ್ಶನ್‌ ಮತ್ತು ಇತರರು ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆಸಿದ್ದರು.

Bar & Bench

ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುತ್ತಿರುವ ಮಾಧ್ಯಮಗಳ ವಿರುದ್ಧ ಕ್ರಮಕೈಗೊಳ್ಳಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ನಟ ದರ್ಶನ್‌ ಶ್ರೀನಿವಾಸ್‌ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ಭಾಗಶಃ ಪುರಸ್ಕರಿಸಿದೆ.

ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ, ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ಏಕಸದಸ್ಯ ಪೀಠ ಇಂದು ಪ್ರಕಟಿಸಿತು. “ಅರ್ಜಿಯನ್ನು ಭಾಗಶಃ ಪುರಸ್ಕರಿಸಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

Justice Sachin Shankar Magadum

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ್‌ ಕಾಮತ್‌ ಅವರು “ಈ ಹಿಂದೆ ಅರ್ಜಿ ಸಲ್ಲಿಸಿದ್ದ ದರ್ಶನ್‌ ಅವರು ೪೦ ಟಿವಿ ಚಾನಲ್‌ಗಳನ್ನು ಪ್ರತಿವಾದಿಗಳನ್ನಾಗಿಸಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣದ ಗೌಪ್ಯವಾದ ಆರೋಪ ಪಟ್ಟಿ ಮಾಹಿತಿಯನ್ನು ವರದಿ ಮಾಡದಂತೆ ಹೈಕೋರ್ಟ್‌ ನಿರ್ದೇಶಿಸಿತ್ತು. ಇದನ್ನು ಮಾಹಿತಿ ಮತ್ತು ಪ್ರಸಾರ ಇಲಾಖೆಯು ಮಾಧ್ಯಮಗಳಿಗೆ ತಿಳಿಸಿದೆ. ಈಗ ಮಾಧ್ಯಮಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದರ್ಶನ್‌ ಕೋರುತ್ತಿದ್ದಾರೆ. ನ್ಯಾಯಾಲಯದ ಆದೇಶವನ್ನು ಮಾಧ್ಯಮಗಳು ಪಾಲಿಸದಿದ್ದರೆ ದರ್ಶನ್‌ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬಹುದು. ದರ್ಶನ್‌ರನ್ನು ತಡೆಯುವವರು ಯಾರು? ಪೊಲೀಸರು ಪ್ರಕರಣ ದಾಖಲಿಸಲು ಅವಕಾಶವಿರುವಂತೆ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿಗೆ ಅವಕಾಶವಿಲ್ಲ” ಎಂದಿದ್ದರು.

ಮುಂದುವರಿದು, “ದರ್ಶನ್‌ ಆಕ್ಷೇಪವಿರುವುದು ಯೂಟ್ಯೂಬ್‌ ಮತ್ತು ಮೆಟಾ ವಿರುದ್ಧ. ಯೂಟ್ಯೂಬ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬಹುದು. ಶಾಸನಬದ್ಧವಾಗಿ ಪರಿಗಣಿತವಾದ ಯಾವುದೇ ಪ್ರಕ್ರಿಯೆಯನ್ನು ದರ್ಶನ್‌ ಬಳಕೆ ಮಾಡಿಲ್ಲ. ಯೂಟ್ಯೂಬ್‌, ಮೆಟಾವನ್ನು ಪಕ್ಷಕಾರರನ್ನಾಗಿಸಿಲ್ಲ. ಹಾಗೆ ಮಾಡಿದ್ದರೆ ನ್ಯಾಯಾಲಯವು ಆದೇಶವನ್ನು ಏಕೆ ಪಾಲಿಸಿಲ್ಲ ಎಂದು ಯೂಟ್ಯೂಬ್‌ ಅನ್ನು ಪ್ರಶ್ನಿಸಬಹುದಿತ್ತು” ಎಂದಿದ್ದರು.

ದರ್ಶನ್‌ ಪರ ವಕೀಲ ಪ್ರಥಮ್‌ ಅವರು “ಮಾಧ್ಯಮಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರದ ಬಳಿ ಅಧಿಕಾರವಿದೆ. ಎಕ್ಸ್‌ ಕಾರ್ಪ್‌ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ಕೇಂದ್ರದ ನಿಲುವನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ” ಎಂದಿದ್ದರು.

ಅಲ್ಲದೇ, “ರೇಣುಕಾಸ್ವಾಮಿ ತಾಯಿ ಪ್ರತಿಕೂಲ ಸಾಕ್ಷಿಯಾಗಿದ್ದ ವಿಚಾರವನ್ನು ಟಿವಿ ಚಾನಲ್‌ಗಳು ನಾಲ್ಕು ದಿನ ಪ್ಯಾನಲ್‌ ಚರ್ಚೆ ಮಾಡಿವೆ. ಪ್ರತಿ ಚಾನಲ್‌ನಲ್ಲಿ ೩೦ಕ್ಕೂ ಹೆಚ್ಚು ಗಂಟೆ ಇದು ಚರ್ಚೆಯ ವಿಷಯವಾಗಿದೆ. ಇಡೀ ಕೃತ್ಯವನ್ನು ಮರುಸೃಷ್ಟಿಸಲಾಗುತ್ತಿದೆ. ಒಂದು ಕೃತಕ ಬುದ್ದಿಮತ್ತೆ ಫೋಟೊ ಸಾಕಷ್ಟು ವೈರಲ್‌ ಆಗಿದ್ದು, ಅದು ನಿಜ ಎಂದು ಜನರು ಭಾವಿಸುವ ಸಾಧ್ಯತೆ ಇದೆ. ಸಹ ಆರೋಪಿಗಳ ಪರ ವಕೀಲರು ಪ್ಯಾನಲ್‌ ಚರ್ಚೆಯಲ್ಲಿ ಭಾಗಿಯಾಗಿ, ಮೆರಿಟ್‌ ಮೇಲೆ ಚರ್ಚೆ ಮಾಡುತ್ತಾರೆ. ನಿವೃತ್ತ ಪೊಲೀಸ್‌ ಅಧಿಕಾರಿಗಳು ಹೇಗೆ ತನಿಖೆ ಮಾಡಬೇಕು ಎಂದು ಹೇಳುತ್ತಾರೆ. ದರ್ಶನ್‌ಗೆ ಜಾಮೀನು ಸಿಗುವ ಸಾಧ್ಯತೆಯ ಬಗ್ಗೆ ಮಾತನಾಡುತ್ತಾರೆ. ನ್ಯಾಯಾಲಯ ಹೇಗೆ ವಿಚಾರಣೆ ನಡೆಸಬೇಕು ಎಂದು ಹೇಳುತ್ತಾರೆ” ಎಂದಿದ್ದರು.

2024ರ ಜೂನ್‌ 9ರಂದು ಬೆಂಗಳೂರಿನ ರಾಜಕಾಲುವೆಯಲ್ಲಿ ರೇಣುಕಾಸ್ವಾಮಿ ಮೃತದೇಹ ಪತ್ತೆಯಾಗಿತ್ತು. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದ ಮೇಲೆ ನಟ ದರ್ಶನ್‌ ಅವರು ಇತರರ ಜೊತೆ ಸೇರಿ ಪಟ್ಟಣಗೆರೆಯ ಶೆಡ್‌ಗೆ ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆಸಿದ್ದರು. ಆನಂತರ ಮೃತದೇಹವನ್ನು ರಾಜಕಾಲುವೆಗೆ ಎಸೆದಿದ್ದರು.

2024ರ ಅಕ್ಟೋಬರ್‌ 30ರಂದು ಕರ್ನಾಟಕ ಹೈಕೋರ್ಟ್‌ ದರ್ಶನ್‌ ಅವರಿಗೆ ವೈದ್ಯಕೀಯ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಡಿಸೆಂಬರ್‌ 13ರಂದು ಜಾಮೀನನ್ನು ಕಾಯಂಗೊಳಿಸಿತ್ತು. 2025ರ ಆಗಸ್ಟ್‌ 14ರಂದು ಸುಪ್ರೀಂ ಕೋರ್ಟ್‌ ದರ್ಶನ್‌ ಸೇರಿದಂತೆ ಐವರಿಗೆ ಮಂಜೂರಾಗಿದ್ದ ಜಾಮೀನು ರದ್ದುಪಡಿಸಿತ್ತು.