Justice B M Shyam Prasad 
ಸುದ್ದಿಗಳು

ಗೋಕರ್ಣ ಗುಹೆಯಲ್ಲಿದ್ದ ರಷ್ಯಾದ ಮಹಿಳೆ, ಮಕ್ಕಳನ್ನು ತವರಿಗೆ ಸ್ಥಳಾಂತರಿಸಲು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ಅನುಮತಿ

ಮಗುವಿನ ವಂಶವಾಹಿ ವರದಿ ಆಧರಿಸಿ ರಷ್ಯಾದ ಸಂಬಂಧಿತ ವ್ಯಕ್ತಿಗೆ ಅರ್ಜಿದಾರರ ಮಾಹಿತಿ ನೀಡಲಾಗಿದೆ. ಇದರ ಬೆನ್ನಿಗೇ ರಷ್ಯಾ ಆಡಳಿವು ತುರ್ತು ಪ್ರವಾಸ ದಾಖಲೆಗಳನ್ನು ಒದಗಿಸಿದೆ ಎಂದು ತಿಳಿಸಿದ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್‌ ಜನರಲ್.‌

Bar & Bench

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಗುಹೆಯಲ್ಲಿ ನೆಲೆಸಿದ್ದ ರಷ್ಯಾದ ಮಹಿಳೆ ಮತ್ತು ಆಕೆಯ ಮಕ್ಕಳಿಗೆ ತಮ್ಮ ತವರಿಗೆ ಮರಳಲು ಅಗತ್ಯವಾದ ಪ್ರವಾಸ ದಾಖಲೆ ಒದಗಿಸಲು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಅನುಮತಿಸಿದೆ.

ಮಹಿಳೆಯ ಎರಡನೇ ಮಗುವಿಗೆ ಕಾರಣರಾದ ಡ್ರೋರ್ ಶ್ಲೋಮೋ ಗೋಲ್ಡ್‌ಸ್ಟೈನ್ಸ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್‌ಪ್ರಸಾದ್‌ ಅವರ ಏಕಸದಸ್ಯ ಪೀಠವು ವಿಲೇವಾರಿ ಮಾಡಿದೆ.

“ಯಾವುದೇ ಸೌಲಭ್ಯವಿಲ್ಲದ‌, ಯಾರೂ ಹೋಗಲು ಬಯಸದ ಗುಹೆಯಲ್ಲಿ ರಷ್ಯಾದ ಮಹಿಳೆ ಮತ್ತು ಅವರ ಮಕ್ಕಳು ನೆಲೆಸಿದ್ದಾರೆ. ಯಾತಕ್ಕಾಗಿ ಅಲ್ಲಿದ್ದಾರೆ ಎಂದು ಅವರು ವಿವರಿಸಲು ವಿಫಲರಾಗಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಅವರಿಗೆ ಸ್ಥಳೀಯಾಡಳಿತವು ಪುನರ್ವಸತಿ ಕಲ್ಪಿಸಿದೆ. ರಷ್ಯಾದ ಅನುಮತಿಯ ಮೇರೆಗೆ ಭಾರತಕ್ಕೆ ಬಂದಿರುವ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳು ವೀಸಾ ಅವಧಿ ಮುಗಿದ ಮೇಲೂ ಭಾರತದಲ್ಲಿ ನೆಲೆಸಿದ್ದಾರೆ. ಮಹಿಳೆ ಮತ್ತು ಮಕ್ಕಳು ತಮ್ಮ ದೇಶಕ್ಕೆ ತೆರಳಲು ಅಗತ್ಯ ದಾಖಲೆ ಒದಗಿಸುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದೆ” ಎಂದು ನ್ಯಾಯಾಲಯವು ಅರ್ಜಿ ವಿಲೇವಾರಿ ಮಾಡಿದೆ.

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ್‌ ಕಾಮತ್‌ ಅವರು “ಮಗುವಿನ ವಂಶವಾಹಿ ವರದಿ ಆಧರಿಸಿ ರಷ್ಯಾದ ಸಂಬಂಧಿತ ವ್ಯಕ್ತಿಗೆ ಅರ್ಜಿದಾರರ ಮಾಹಿತಿ ನೀಡಲಾಗಿತ್ತು. ಇದರ ಬೆನ್ನಿಗೇ ರಷ್ಯಾ ಆಡಳಿವು ತುರ್ತು ಪ್ರವಾಸ ದಾಖಲೆಗಳನ್ನು ಒದಗಿಸಿದೆ. ತುರ್ತು ಪ್ರವಾಸ ದಾಖಲೆಗಳ ಅವಧಿಯು ಸೆಪ್ಟೆಂಬರ್‌ 25ರಿಂದ ಅಕ್ಟೋಬರ್‌ 9ರವರೆಗೆ ಇರಲಿದೆ. ಹೀಗಾಗಿ, ಇಲ್ಲಿಂದ ತಾಯಿ ಮತ್ತು ಮಕ್ಕಳು ತಕ್ಷಣ ತೆರಳಲು ಅನುಮತಿಸಬೇಕು” ಎಂದು ಕೋರಿದರು.

ಮುಂದುವರಿದು, “ರಷ್ಯಾದ ಪಾಸ್‌ಪೋರ್ಟ್‌ ಬಳಸಿ ಭಾರತಕ್ಕೆ ಬಂದಿರುವ ಮಹಿಳೆಯು ಅದರ ಅವಧಿ ಮುಗಿದ ಮೇಲೂ ಇಲ್ಲೇ ನೆಲೆಸಿದ್ದಾರೆ. ಭಾರತದಿಂದ ತೆರಳಿ ಮತ್ತೆ ಆಕೆಯು ಸೀಮಿತ ಪ್ರವಾಸ ಅನುಮತಿಯ ಮೇಲೆ ಭಾರತಕ್ಕೆ ಬಂದಿದ್ದರು” ಎಂದು ಪೀಠಕ್ಕೆ ವಿವರಿಸಿದ್ದರು.

Dror Shlomo Goldstein Vs State of Karnataka.pdf
Preview