ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಆರೋಪಿಗಳಾಗಿರುವ ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ ಮತ್ತು ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಸುನೀಲ್ ಮ್ಯಾಥ್ಯೂ, ಉದ್ಯೋಗಿಗಳಾದ ಎಸ್ ಕಿರಣ್ ಕುಮಾರ್ ಮತ್ತು ಸಮಂತ್ ಮಾವಿನಕೆರೆ ಅವರಿಗೆ ಕೆಲಸದ ಭಾಗವಾಗಿ ದೇಶದ ವಿವಿಧೆಡೆ ಪ್ರಯಾಣ ಕೈಗೊಳ್ಳಲು ಕರ್ನಾಟಕ ಹೈಕೋರ್ಟ್ ಶನಿವಾರ ಅನುಮತಿಸಿದೆ.
ನ್ಯಾಯಾಲಯವು ಜಾಮೀನು ಮಂಜೂರು ಮಾಡುವಾಗ ನ್ಯಾಯಾಲಯದ ವ್ಯಾಪ್ತಿ ತೊರೆಯದಂತೆ ನಿರ್ದೇಶಿಸಿರುವುದರಿಂದ ಕೆಲಸದ ಭಾಗವಾಗಿ ದೇಶದ ವಿವಿಧೆಡೆ ಪ್ರಯಾಣ ಕೈಗೊಳ್ಳುವುದು ಅಸಾಧ್ಯವಾಗಿದೆ. ಈ ಷರತ್ತಿನಲ್ಲಿ ಸಡಿಲಿಕೆ ಮಾಡಬೇಕು ಎಂದು ಕೋರಿದ್ದ ಮಧ್ಯಂತರ ಅರ್ಜಿಗಳನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ನಿಖಿಲ್ ಸೋಸಲೆ ಪರ ಹಿರಿಯ ವಕೀಲ ಡಿ ಆರ್ ರವಿಶಂಕರ್ ಅವರು “ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದೆ. ಅರ್ಜಿದಾರರು ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಸದ್ಯ ನಾಲ್ಕು ದಿನ ಕರ್ತವ್ಯದ ಭಾಗವಾಗಿ ಮುಂಬೈಗೆ ಪ್ರಯಾಣ ಕೈಗೊಳ್ಳಬೇಕಿದೆ. ಅದಕ್ಕೆ ಅನುಮತಿಸಬೇಕು” ಎಂದು ಕೋರಿದರು.
ಸುನೀಲ್ ಮ್ಯಾಥ್ಯೂ, ಕಿರಣ್ ಕುಮಾರ್ ಮತ್ತು ಸಮಂತ್ ಮಾವಿನಕೆರೆ ಪ್ರತಿನಿಧಿಸಿದ್ದ ವಕೀಲ ಸೂರಜ್ ಸಂಪತ್ ಅವರು “ತಮ್ಮ ಕಕ್ಷಿದಾರರು ಕರ್ತವ್ಯದ ಭಾಗವಾಗಿ ದೇಶಾದ್ಯಂತ ಓಡಾಡಬೇಕಿದೆ. ಹೀಗಾಗಿ, ಅವರಿಗೆ ಅವಕಾಶ ಮಾಡಿಕೊಡಬೇಕು” ಎಂದರು.
ಇದನ್ನು ಪರಿಗಣಿಸಿದ ನ್ಯಾಯಾಲಯವು “ಪ್ರಯಾಣ ಕೈಗೊಳ್ಳುವುದಕ್ಕೂ ಮುನ್ನ ಮತ್ತು ವಾಪಸಾದ ಬಳಿಕ ತನಿಖಾಧಿಕಾರಿಗೆ ಮಾಹಿತಿ ಒದಗಿಸಬೇಕು” ಎಂಬ ಷರತ್ತಿಗೆ ಒಳಪಟ್ಟು ಅರ್ಜಿದಾರರ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿತು. ಸರ್ಕಾರದ ಪರವಾಗಿ ವಿಶೇಷ ವಕೀಲ ಬಿ ಟಿ ವೆಂಕಟೇಶ್ ಹಾಜರಿದ್ದರು.
ಜೂನ್ 4ರಂದು ಆರ್‌ಸಿಬಿ ತಂಡವು ಐಪಿಎಲ್ ಟ್ರೋಫಿ ಜಯಿಸಿದ ಭಾಗವಾಗಿ ನಡೆದಿದ್ದ ವಿಜಯೋತ್ಸವದಲ್ಲಿ 11 ಅಭಿಮಾನಿಗಳು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದರು. ಇದರ ಬೆನ್ನಿಗೇ ಆರ್‌ಸಿಬಿಯ ನಿಖಿಲ್ ಸೋಸಲೆ ಮತ್ತು ಕಾರ್ಯಕ್ರಮ ಆಯೋಜನೆಯ ಜವಾಬ್ದಾರಿ ಹೊತ್ತಿದ್ದ ಡಿಎನ್‌ಎ ಎಂಟರ್‌ಟೈನ್ಸ್‌ಮೆಂಟ್ ಸುನೀಲ್ ಮ್ಯಾಥ್ಯೂ, ಕಿರಣ್ ಕುಮಾರ್ ಮತ್ತು ಸಮಂತ್ ಅವರು ಬಂಧನದ ಭೀತಿಯಲ್ಲಿ ತಲೆಮರೆಸಿಕೊಳ್ಳಲು ಯತ್ನಿಸಿದ್ದರು. ಈ ಮಾಹಿತಿಯ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಜೂನ್ 7ರಂದು ಅವರೆಲ್ಲರನ್ನೂ ಬಂಧಿಸಿದ್ದರು. ಆನಂತರ ಹೈಕೋರ್ಟ್ ಅವರಿಗೆ ಷರತ್ತು ಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.