ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ಗುರುವಾರ ರದ್ದುಪಡಿಸಿದೆ.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿತು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ ಅವರು “ರಾಹುಲ್‌ಗಾಂಧಿ ವಿದೇಶದಲ್ಲಿ ಕೆಲವು ಹೇಳಿಕೆಗಳನ್ನು ನೀಡಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಆದರೆ, ಪ್ರಕರಣ ಸಂಬಂಧ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ ಆರೋಪದ ಸಂಬಂಧಿತವಾದ ಯಾವುದೇ ಅಂಶಗಳು ಇಲ್ಲ. ನಮ್ಮ ಕಕ್ಷಿದಾರರ ಹೇಳಿಕೆಗೆ ಸಂಬಂಧಿಸಿದಂತೆ ಅಸಮಾಧಾನವಾಗಿದ್ದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಬಹುದು. ಅದನ್ನು ಸಮರ್ಥನೆ ಮಾಡಿಕೊಳ್ಳಲಾಗುವುದು” ಎಂದು ವಾದಿಸಿದ್ದರು
ದೂರುದಾರರಾದ ಕಾಂಗ್ರೆಸ್ ಮುಖಂಡ ಮನೋಹರ್ ಪರ ವಕೀಲ ಸಂಕೇತ್ ಏಣಗಿ ಅವರು “ಆರೋಪಕ್ಕೆ ಸಂಬಂಧಿಸಿದಂತೆ ಎಲ್ಲ ಅಂಶಗಳನ್ನು ಎಫ್‌ಐಆರ್‌ನಲ್ಲಿ ವಿವರಿಸಿಲ್ಲ. ಆದರೆ, ಅರ್ಜಿದಾರರ ಹೇಳಿಕೆಗಳು ಮಹಿಳೆಯ ಘನತೆಗೆ ಧಕ್ಕೆ ಉಂಟು ಮಾಡುವಂಥವಾಗಿವೆ. ಸೋನಿಯಾ ಗಾಂಧಿ ಅವರ ಕುರಿತು ಮಾತನಾಡಿದ್ದಾರೆ. ರಾಹುಲ್ ಗಾಂಧಿ ಕ್ರಿಶ್ಚಿಯನ್, ಮೊಘಲರಿಗೆ ಹುಟ್ಟಿದ್ದಾರೆಯೇ ಇಲ್ಲವೇ ಬ್ರಾಹ್ಮಣರಿಗೆ ಹುಟ್ಟಿದ್ದಾರೆಯೇ ಎಂಬುದಾಗಿ ಪ್ರಶ್ನಿಸಿದ್ದಾರೆ. ಈ ಹೇಳಿಕೆ ಮಹಿಳೆಯ ಘನತೆಗೆ ಧಕ್ಕೆ ಉಂಟು ಮಾಡುವಂಥದ್ದು. ಯತ್ನಾಳ್ ಸಾಮಾನ್ಯ ವ್ಯಕ್ತಿಯಲ್ಲ. ಸುಶಿಕ್ಷತರಾಗಿದ್ದು, ಸಂಸದರು, ಶಾಸಕರು ಕೇಂದ್ರ ಸಚಿವರೂ ಆಗಿದ್ದರು. ಈ ರೀತಿಯ ಹೇಳಿಕೆ ನೀಡಿರುವುದರಿದ ತನಿಖೆ ನಡೆಯಬೇಕು” ಎಂದು ಆಕ್ಷೇಪಿಸಿದ್ದರು.
ಆಗ ದಳವಾಯಿ ಅವರು “ಯತ್ನಾಳ್ ಮಹಿಳೆಯ ನಡತೆ ಬಗ್ಗೆ ಏನನ್ನಾದರೂ ಹೇಳಿದ್ದಾರೆಯೇ? ಇದರಲ್ಲಿ ಧಾರ್ಮಿಕ ಭಾವನೆಗಳ್ನು ಪ್ರಚೋದಿಸುವ ಪ್ರಶ್ನೆ ಎಲ್ಲಿದೆ? ಒಬ್ಬ ರಾಜಕಾರಣಿಯಾಗಿ ದೇಶದ ಹೊರಭಾಗದಲ್ಲಿ ಭಾರತದ ವಿರುದ್ಧ ಅಸಂಬಂಧ ಹೇಳಿಕೆ ನೀಡಿದ್ದಾರೆ. ಇದಕ್ಕೆ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ ಅಷ್ಟೆ” ಎಂದಿದ್ದರು.
ಪ್ರಕರಣದ ಹಿನ್ನೆಲೆ: ವಿದೇಶದಲ್ಲಿ ಭಾರತದ ರಾಜಕೀಯ ಸ್ಥಿತಿಗತಿ ಕುರಿತು ರಾಹುಲ್ ಗಾಂಧಿ ಚರ್ಚಿಸಿದ್ದರು. ಇದಕ್ಕೆ ಯತ್ನಾಳ್ ಪ್ರತಿಕ್ರಿಯಿಸಿದ್ದರು. ಕಾಂಗ್ರೆಸ್ ಕಾರ್ಯಕರ್ತ ಎಸ್ ಮೋಹನ್ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಿಸಿದ್ದ ದೂರಿನಲ್ಲಿ "ಯತ್ನಾಳ್ ಅವರು ರಾಹುಲ್ ಗಾಂಧಿ ಯಾವ ಜಾತಿಗೆ ಹುಟ್ಟಿದ್ದಾನೆ? ಸಾಬ್ರುಗೆ ಹುಟ್ಟಿದನೋ, ಕ್ರಿಶ್ಚಿಯನ್‌ಗೆ ಹುಟ್ಟಿದನೋ; ಬ್ರಾಹ್ಮಣ ಹಿಂದೂ, ಅವರ ಅಪ್ಪ ಬೇರೆ, ಅವರ ಅಮ್ಮ ಬೇರೆ, ಅವ್ವ ಇಟಲಿ, ಮರಿಮೊಮ್ಮಗ ಕಂಟ್ರಿ ಕಂಟ್ರಿ ಪಿಸ್ತೂಲು ಇದ್ದಾಗೆ ಎಂದು ಹೇಳಿದ್ದಾರೆ" ಎಂದು ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 192 (ಗಲಭೆ ನಡೆಸುವುದಕ್ಕಾಗಿ ಉದ್ದೇಶಪೂರ್ವಕವಾಗಿ ಪ್ರಚೋದನೆ), 196 (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಆಧಾರದಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷ ಹರಡುವುದು) 353(2) ಸಾರ್ವಜನಿಕ ಕಿಡಿಗೇಡಿತನಕ್ಕೆ ಅವಕಾಶವಾಗುವಂತಹ ಹೇಳಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.