Justice R Nataraj 
ಸುದ್ದಿಗಳು

ಬೆಂಗಳೂರಿನ ಮಹಾರಾಣಿ ಕ್ಲಸ್ಟರ್‌ ವಿವಿ ಪ್ರಭಾರ ಕುಲಪತಿ ಡಾ. ಬಿ ಕೆ ಮೀರಾ ನೇಮಕ ರದ್ದುಗೊಳಿಸಿದ ಹೈಕೋರ್ಟ್‌

ಮೀರಾ ಅವರ ನೇಮಕ ಪ್ರಶ್ನಿಸಿ, ಕುಲಪತಿ ಹುದ್ದೆ ಆಕಾಂಕ್ಷಿ ಹಾಗೂ ವಿಶ್ವವಿದ್ಯಾಲಯದ ಹ್ಯುಮ್ಯಾನಿಟೀಸ್‌ ಮತ್ತು ಲಿಬರಲ್‌ ಆರ್ಟ್ಸ್‌ನ ನಿರ್ದೇಶಕ ಡಾ. ಟಿ ಎಂ ಮಂಜುನಾಥ್‌ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ ಹೈಕೋರ್ಟ್‌.

Bar & Bench

ಬೆಂಗಳೂರಿನ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯನ್ನಾಗಿ ಡಾ. ಬಿ ಕೆ ಮೀರಾ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ರದ್ದುಗೊಳಿಸಿದೆ.

ಮೀರಾ ಅವರ ನೇಮಕ ಪ್ರಶ್ನಿಸಿ, ಕುಲಪತಿ ಹುದ್ದೆ ಆಕಾಂಕ್ಷಿ ಹಾಗೂ ವಿಶ್ವವಿದ್ಯಾಲಯದ ಹ್ಯುಮ್ಯಾನಿಟೀಸ್‌ ಮತ್ತು ಲಿಬರಲ್‌ ಆರ್ಟ್ಸ್‌ನ ನಿರ್ದೇಶಕ ಡಾ.ಟಿ ಎಂ ಮಂಜುನಾಥ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್‌ ನಟರಾಜ್‌ ಅವರ ಏಕಸದಸ್ಯ ಪೀಠ ಭಾಗಶಃ ಪುರಸ್ಕರಿಸಿದೆ.

“ಕುಲಪತಿ ನೇಮಕ ಮಾಡುವ ಅಧಿಕಾರ ಕುಲಾಧಿಪತಿಗೆ ಇದೆ. ಆದರೆ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯಿದೆ ಸೆಕ್ಷನ್‌ 16(2)ರ ಪ್ರಕಾರ ಉಪಕುಲಪತಿ ಹುದ್ದೆಗೆ ಡೀನ್‌/ನಿರ್ದೇಶಕರು ಹೊರತುಪಡಿಸಿದಂತೆ ಇತರೆಯವರನ್ನು ನೇಮಕ ಮಾಡಲಾಗದು. ಕುಲಪತಿ ಸ್ಥಾನಕ್ಕೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಕಳುಹಿಸಿರುವ ಪಟ್ಟಿಯನ್ನು ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಎಂದು ಸೀಮಿತಗೊಳಿಸಿರಲಿಲ್ಲ” ಎಂದು ಪೀಠ ಹೇಳಿದೆ.

“ಮಹಾರಾಣಿ ಕ್ಲಸ್ಟರ್‌ ವಿವಿ ಮಹಿಳಾ ವಿಶ್ವವಿದ್ಯಾಲಯವಾಗಿದ್ದು, ಅದಕ್ಕೆ ಅಕ್ಕಮಹಾದೇವಿ ಮಹಿಳಾ ವಿವಿಯಂತೆ ಮಹಿಳೆಯರನ್ನು ಮಾತ್ರ ಕುಲಪತಿಯನ್ನಾಗಿ ನೇಮಕ ಮಾಡಬೇಕೆಂಬುದಕ್ಕೆ ಯಾವುದೇ ದಾಖಲೆಗಳನ್ನು ಸರ್ಕಾರ ಸಲ್ಲಿಸಿಲ್ಲ. ಅರ್ಜಿದಾರರನ್ನು ಕುಲಪತಿ ಹುದ್ದೆಗೆ ಪರಿಗಣಿಸದಿರುವುದಕ್ಕೆ ಅದು ಕಾರಣ ಎಂದು ಅಧಿಸೂಚನೆಯಲ್ಲಿ ಎಲ್ಲೂ ಉಲ್ಲೇಖಿಸಿಲ್ಲ” ಎಂದು ನ್ಯಾಯಾಲಯ ತಿಳಿಸಿದೆ.

"ಪ್ರಶ್ನಿತ ಅಧಿಸೂಚನೆಯನ್ನು ಸಮರ್ಥಿಸಿಕೊಳ್ಳಲು ಯಾವುದೇ ಕಾರಣಗಳನ್ನು ನೀಡಿಲ್ಲ. ಕುಲಾಧಿಪತಿಗೆ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯಿದೆ ಸೆಕ್ಷನ್‌ 16(2)ರ ಪ್ರಕಾರ ಪ್ರಭಾರ ಕುಲಪತಿಯನ್ನು ನೇಮಿಸುವ ಸ್ವಾತಂತ್ರ್ಯವಿದೆ. ಹೀಗಾಗಿ, ಅರ್ಜಿದಾರರೂ ಸಹ ಹುದ್ದೆಗೆ ಅರ್ಹರಿದ್ದಾರೆ, ಹಿರಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಅವರನ್ನು ನೇಮಕ ಮಾಡದೇ ಇರುವುದಕ್ಕೆ ಯಾವುದೇ ವಿವರಣೆ ನೀಡಿಲ್ಲ. ಅರ್ಜಿದಾರರು ತಮ್ಮನ್ನೇ ಕುಲಪತಿಯನ್ನಾಗಿ ನೇಮಕ ಮಾಡುವಂತೆ ಕೋರಿದ್ದಾರೆ. ನ್ಯಾಯಾಲಯ ಆ ಆದೇಶವನ್ನು ಮಾಡಲಾಗದು. ಆದರೆ, ಕುಲಪತಿ ಕಾನೂನು ಪ್ರಕಾರ ಅವರನ್ನು ನೇಮಕ ಮಾಡುವ ಬಗ್ಗೆ ಪರಿಶೀಲನೆ ನಡೆಸಬಹುದು” ಎಂದು ಪೀಠ ಆದೇಶಿಸಿದೆ.

ಬೆಂಗಳೂರಿನ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಡಾ. ಸಿ ಉಷಾದೇವಿ 2025ರ ಮಾರ್ಚ್‌ 31ರಂದು ಸೇವೆಯಿಂದ ನಿವೃತ್ತರಾಗಿದ್ದರು. ಆ ಹುದ್ದೆಗೆ ಪ್ರಭಾರ ಕುಲಪತಿಯನ್ನಾಗಿ ಡಾ.ಬಿ ಕೆ ಮೀರಾ ಅವರನ್ನು ನೇಮಕ ಮಾಡಿ 2025ರ ಮಾರ್ಚ್‌ 28ರಂದು ಸರ್ಕಾರ ಆದೇಶ ಹೊರಡಿಸಿತ್ತು. ಅದನ್ನು ಕಾನೂನುಬಾಹಿರ ನೇಮಕಾತಿ, ನಿಯಮಗಳನ್ನು ಉಲ್ಲಂಘಿಸಲಾಗಿದೆ. ಸೇವಾ ಹಿರಿತನದಲ್ಲಿ ಹಿರಿಯ ನಿರ್ದೇಶಕರಾದ ತಾವೂ ಸಹ ಪ್ರಭಾರ ಕುಲಪತಿ ಹುದ್ದೆಗೆ ಅರ್ಹರಾಗಿದ್ದು ತಮ್ಮನ್ನು ಕಡಣಿಸಲಾಗಿದೆ ಎಂದು ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.

ಮೀರಾ ಅವರು ಪ್ರಾಣಿಶಾಸ್ತ್ರ ವಿಭಾಗದ ಹಿರಿಯ ಪ್ರೊಫೆಸರ್‌ ಆಗಿದ್ದು, ಅವರು ಹೆಣ್ಣು ಮಕ್ಕಳ ಭೌತಿಕ ಮತ್ತು ಶೈಕ್ಷಣಿಕ ಅಗತ್ಯತೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬಲ್ಲರು ಹಾಗೂ ಮಹಿಳಾ ವಿವಿ ಆಗಿರುವುದರಿಂದ ಮಹಿಳೆಯನ್ನೇ ವಿಸಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಕುಲಾಧಿಪತಿಗಳ ಕಚೇರಿ (ರಾಜ್ಯಪಾಲರು) ಮೀರಾ ಅವರ ನೇಮಕಾತಿಯನ್ನು ಸಮರ್ಥಿಸಿತ್ತು.

ಡಾ. ಮಂಜುನಾಥ್‌ ಪರವಾಗಿ ವಕೀಲೆ ವೈಶಾಲಿ ಹೆಗ್ಡೆ ವಾದಿಸಿದ್ದರು.

T M Manjunath Vs State of Karnataka.pdf
Preview