Karnataka HC and Anil Lad 
ಸುದ್ದಿಗಳು

ಗಣಿ ಉದ್ಯಮಿ ವಿರುದ್ಧ ಮಾಜಿ ಶಾಸಕ ಅನಿಲ್ ಲಾಡ್ ದಾಖಲಿಸಿದ್ದ ದೂರು ರದ್ದುಪಡಿಸಿದ ಹೈಕೋರ್ಟ್

ಗಣಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ತಮ್ಮಿಂದ ₹35 ಕೋಟಿ ಪಡೆದು ಹಿಂದಿರುಗಿಸದೆ ವಂಚಿಸಿದ್ದಾರೆ. ಹಣ ಹಿಂದಿರುಗಿಸಲು ಸೂಚಿಸಿದಾಗ ನನ್ನ ಕೊಲೆಗೆ ಸುಪಾರಿ ನೀಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಲಾಡ್ ದೂರಿನಲ್ಲಿ ಉಲ್ಲೇಖಿಸಿದ್ದರು.

Bar & Bench

ಗಣಿ ವ್ಯವಹಾರಕ್ಕೆ ಸಂಬಂಧಿಸಿದಂತೆ 35 ಕೋಟಿ ರೂಪಾಯಿ ಹಣ ಪಡೆದು ವಂಚಿಸಿದ ಹಾಗೂ ಭೂಗತ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ಜೀವ ಬೆದರಿಕೆ ಹಾಕಿದ ಆರೋಪ ಸಂಬಂಧ ಉದ್ಯಮಿ ಆರ್ ಶಿವಕುಮಾರ್ ವಿರುದ್ಧ ಮಾಜಿ ಶಾಸಕ ಅನಿಲ್ ಲಾಡ್ ಅವರು ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ದೂರನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.

ಅನಿಲ್ ಲಾಡ್ ದೂರು ಮತ್ತು ಅದನ್ನು ಆಧರಿಸಿ ತಮ್ಮ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಉದ್ಯಮಿ ಆರ್ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಅನಿಲ್ ಲಾಡ್ ಅವರು ಗಣಿ ಉದ್ಯಮಿ ಆರ್ ಶಿವಕುಮಾರ್ ವಿರುದ್ಧ 2018ರ ಡಿಸೆಂಬರ್ 6ರಂದು ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ನೀಡಿದ್ದರು. ಗಣಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ತಮ್ಮಿಂದ 35 ಕೋಟಿ ರೂಪಾಯಿ ಹಣ ಪಡೆದು ಹಿಂದಿರುಗಿಸದೆ ವಂಚಿಸಿದ್ದಾರೆ. ಹಣ ಹಿಂದಿರುಗಿಸಲು ಸೂಚಿಸಿದಾಗ ನನ್ನ ಕೊಲೆಗೆ ಸುಪಾರಿ ನೀಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಅನಿಲ್ ಲಾಡ್ ದೂರಿನಲ್ಲಿ ಉಲ್ಲೇಖಿಸಿದ್ದರು.

ಅಲ್ಲದೆ, 2018ರ ಡಿಸೆಂಬರ್ 5ರಂದು ರಾತ್ರಿ 8.24ಕ್ಕೆ ನನ್ನ ಮೊಬೈಲ್ಗೆ ಭೂಗತ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ಮೆಸೇಜ್ ಬಂದಿದೆ. ಶಿವಕುಮಾರ್ಗೆ ನೀಡಿರುವ ಹಣ ಮರೆತುಬಿಡು. ಇಲ್ಲವಾದರೆ ಗುಂಡಿಕ್ಕಿ ಕೊಲೆ ಮಾಡಲಾಗುವುದು. ಇದು ನಿನಗೆ ಎಚ್ಚರಿಕೆ; ಭೂಗತದೊರೆ ರವಿ ಪೂಜಾರಿ ಎಂಬುದಾಗಿ ಸಂದೇಶದಲ್ಲಿ ತಿಳಿಸಲಾಗಿತ್ತು ಎಂದು ದೂರಿನಲ್ಲಿ ಅನಿಲ್ ಲಾಡ್ ವಿವರಿಸಿದ್ದರು. ಈ ದೂರು ಆಧರಿಸಿ ಪೊಲೀಸರು ಶಿವಕುಮಾರ್ ವಿರುದ್ಧ ಜೀವ ಬೆದರಿಕೆ ಆರೋಪ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿ ಎಫ್ಐಆರ್ ದಾಖಲಿಸಿದ್ದರು. ಇದನ್ನು ದೂರು ರದ್ದುಪಡಿಸಲು ಕೋರಿ ಶಿವಕುಮಾರ್ ಕರ್ನಾಟಕ ಹೈಕೋರ್ಟ್‌ಗೆ 2019ರಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರ ಹಿರಿಯ ವಕೀಲ ಪಿ ಪಿ ಹೆಗ್ಡೆ ಅವರು “ಅರ್ಜಿದಾರರು ಅನಿಲ್ ಲಾಡ್ಗೆ ಜೀವ ಬೆದರಿಕೆ ಹಾಕಿಲ್ಲ. ಅವರು ಸುಳ್ಳು ದೂರು ದಾಖಲಿಸಿದ್ದಾರೆ. ಪ್ರಕರಣವು ಸಂಪೂರ್ಣ ಸಿವಿಲ್ ಸ್ವರೂಪದ್ದಾಗಿದೆ. ಎಫ್ಐಆರ್ ದಾಖಲಿಸಲು ಪೊಲೀಸರಿಗೆ ಅಧಿಕಾರವಿಲ್ಲ. ಜತೆಗೆ, ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿ ಎಫ್ಐಆರ್ ದಾಖಲಿಸಿದ್ದು, ಪ್ರಕರಣದಲ್ಲಿ ಈ ಕಾಯಿದೆ ಅನ್ವಯ ಆಗುವುದಿಲ್ಲ. ಆದ್ದರಿಂದ ಅರ್ಜಿದಾರರ ವಿರುದ್ಧದ ದೂರು ರದ್ದುಪಡಿಸುವಂತೆ ಕೋರಿದ್ದರು. ಈ ವಾದ ಪುರಸ್ಕರಿಸಿದ ನ್ಯಾಯಾಲಯವು ಅರ್ಜಿದಾರರ ವಿರುದ್ಧದ ದೂರು ರದ್ದುಪಡಿಸಿ ಆದೇಶಿಸಿದೆ.