Karnataka High Court and NDPS Act 
ಸುದ್ದಿಗಳು

ರೌಡಿ ಶೀಟರ್‌ ವಿರುದ್ಧದ ಮಾದಕ ವಸ್ತು ಮಾರಾಟ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಎನ್‌ಡಿಪಿಎಸ್‌ ಕಾಯಿದೆ ಸೆಕ್ಷನ್‌ 67ರ ಅಡಿ ಸಹ ಆರೋಪಿಯ ತಪ್ಪೊಪ್ಪಿಗೆ ಆಧರಿಸಿ ವಿಲ್ಸನ್‌ ಗಾರ್ಡನ್‌ ನಾಗನನ್ನು ಪ್ರಕರಣದಲ್ಲಿ ಎಳೆದು ತರಲಾಗಿದೆ. ಈ ನೆಲೆಯಲ್ಲಿ ಅರ್ಜಿಯು ಪುರಸ್ಕಾರಕ್ಕೆ ಅರ್ಹವಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.

Bar & Bench

"ಸಹ ಆರೋಪಿಯ ತಪ್ಪೊಪ್ಪಿಗೆ ಆಧರಿಸಿ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ಸಿಲುಕಿಸಲಾಗದು” ಎಂದಿರುವ ಕರ್ನಾಟಕ ಹೈಕೋರ್ಟ್‌, ರೌಡಿ ಶೀಟರ್‌ ನಾಗರಾಜ್‌ ಅಲಿಯಾಸ್‌ ವಿಲ್ಸನ್‌ ಗಾರ್ಡನ್‌ ನಾಗನ ವಿರುದ್ಧದ ಕ್ರಿಮಿನಲ್‌ ಪ್ರಕ್ರಿಯೆಯನ್ನು ಈಚೆಗೆ ರದ್ದುಪಡಿಸಿದೆ.

ತನ್ನ ವಿರುದ್ಧದ ಪ್ರಕರಣ ಮತ್ತು ಆರೋಪ ಪಟ್ಟಿ ವಜಾಗೊಳಿಸುವಂತೆ ಕೋರಿ ವಿಲ್ಸನ್‌ ಗಾರ್ಡನ್‌ ನಾಗ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

“ಎನ್‌ಡಿಪಿಎಸ್‌ ಕಾಯಿದೆ ಸೆಕ್ಷನ್‌ 52ಎ ಅಡಿ ಜಫ್ತಿ ಮಾಡಲಾದ ವಸ್ತುವನ್ನು ಆರೋಪಿಯ ಸಮ್ಮುಖದಲ್ಲಿ ಮಹಜರ್‌ ಮಾಡಬೇಕು. ಅದರರ್ಥ ಜಫ್ತಿ ಮಾಡಿದ ಸ್ಥಳದಲ್ಲೇ ಮಾಡಬೇಕು ಎಂದಲ್ಲ. ಹಾಲಿ ಪ್ರಕರಣದಲ್ಲಿ ಜಫ್ತಿ ಮಾಡಿದ ವಸ್ತುಗಳನ್ನು ಮಹಜರ್‌ ಮಾಡಿಲ್ಲ ಎಂಬುದು ಒಪ್ಪಿತ ವಿಚಾರ. ಇದನ್ನು ಮಹಜರ್‌ನಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ. ಇದು ಪ್ರಕರಣ ದಾಖಲಿಸಿದಾಗಿನಿಂದ ಆರೋಪ ಪಟ್ಟಿ ಸಲ್ಲಿಸುವವರೆಗಿನ ಇಡೀ ಪ್ರಕ್ರಿಯೆಯ ದಾರಿ ತಪ್ಪಿಸುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಮುಂದುವರಿದು, “ಎಫ್‌ ಖುರ್ಷಿದ್‌ ಖಾನ್‌ ವರ್ಸಸ್‌ ಗುಜರಾತ್‌ ರಾಜ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಎನ್‌ಡಿಪಿಎಸ್‌ ಕಾಯಿದೆ ಸೆಕ್ಷನ್‌ 67ರ ಅಡಿ ಆರೋಪಿಯ ತಪ್ಪೊಪ್ಪಿಗೆ ಹೇಳಿಕೆಯನ್ನು ಸಾಕ್ಷಿಯ ವೇಳೆ ಒಪ್ಪುವಂತಿಲ್ಲ ಎಂದು ಹೇಳಿದೆ. ಹಾಲಿ ಪ್ರಕರಣದಲ್ಲಿ ಕಾಯಿದೆ ಸೆಕ್ಷನ್‌ 67ರ ಅಡಿ ಸಹ ಆರೋಪಿಯ ತಪ್ಪೊಪ್ಪಿಗೆ ಆಧರಿಸಿ ವಿಲ್ಸನ್‌ ಗಾರ್ಡನ್‌ ನಾಗನನ್ನು ಪ್ರಕರಣದಲ್ಲಿ ಎಳೆದು ತರಲಾಗಿದೆ. ಈ ನೆಲೆಯಲ್ಲಿ ಅರ್ಜಿಯು ಪುರಸ್ಕಾರಕ್ಕೆ ಅರ್ಹವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ವಿಲ್ಸನ್‌ ಗಾರ್ಡನ್‌ ನಾಗ ಪ್ರತಿನಿಧಿದ್ದ ವಕೀಲರ ಮಧುಕರ್‌ ದೇಶಪಾಂಡೆ ಮತ್ತು ಎನ್‌ ಗೌರವ್‌ ಅವರು “ಮೊದಲ ಆರೋಪಿ ಅಪ್ಪಯ್ಯನ ಹೇಳಿಕೆ ಮಾತ್ರ ಆಧರಿಸಿ ತನ್ನನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿಸಲಾಗದು. ಎನ್‌ಡಿಪಿಎಸ್‌ ಕಾಯಿದೆ ಸೆಕ್ಷನ್‌ 67ರ ಅಡಿ ಅದನ್ನು ಸಾಕ್ಷಿಯಾಗಿ ಪರಿಗಣಿಸಲಾಗುವುದಿಲ್ಲ” ಎಂದು ವಾದಿಸಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಎನ್‌ಡಿಪಿಎಸ್‌ ಕಾಯಿದೆ ಸೆಕ್ಷನ್‌ 52ಎ ಅಡಿ ಅಗತ್ಯತೆ ಪಾಲಿಸದಿದ್ದರೂ ಅದು ಕಾನೂನುಬಾಹಿರ ಕ್ರಮ ಎನಿಸಿಕೊಳ್ಳುವುದಿಲ್ಲ” ಎಂದು ವಾದಿಸಿದ್ದರು.

ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್‌) ಕಾಯಿದೆ ಸೆಕ್ಷನ್‌ 21 ಮತ್ತು 22ರ ಅಡಿ ದಾಖಲಿಸಿದ್ದ ಪ್ರಕರಣದಲ್ಲಿ ನಾಗನನ್ನು ಎರಡನೇ ಆರೋಪಿಯನ್ನಾಗಿಸಲಾಗಿತ್ತು. 2021ರ ಸೆಪ್ಟೆಂಬರ್‌ 23ರಂದು ಮಾದಕವಸ್ತುಗಳ ನಿಯಂತ್ರಣ ಸಂಸ್ಥೆಯ (ಎನ್‌ಸಿಬಿ) ಅಧಿಕಾರಿಗಳು ಅಪ್ಪಯ್ಯ ಅಲಿಯಾಸ್‌ ರಾಜು ಎಂಬಾತನನ್ನು ಬೆಂಗಳೂರಿನ ಪಿಂಗರ್ ಫ್ಯಾಮಿಲಿ ಬಾರ್‌ ಅಂಡ್ ರೆಸ್ಟೋರೆಂಟ್‌ ಬಳಿ ವಶಕ್ಕೆ ಪಡೆದಿದ್ದರು. ಈ ಸಂದರ್ಭದಲ್ಲಿ ಆತನಿಂದ 12.2 ಗ್ರಾಂನಷ್ಟು ಎಂಡಿಎಂಎ ಜಫ್ತಿ ಮಾಡಲಾಗಿತ್ತು. ಆನಂತರ ಅಪ್ಪಯ್ಯನ ಹೇಳಿಕೆ ಆಧರಿಸಿ ವಿಲ್ಸನ್‌ ಗಾರ್ಡನ್‌ ನಾಗನನ್ನು ಪ್ರಕರಣದಲ್ಲಿ ಎರಡನೇ ಆರೋಪಿಯನ್ನಾಗಿ ಮಾಡಲಾಗಿತ್ತು.

Nagaraj Vs State of Karataka.pdf
Preview