KSBC 
ಸುದ್ದಿಗಳು

ವಕೀಲರ ಹಣ ದುರ್ಬಳಕೆ ತನಿಖೆಗೆ ಬಿಸಿಐ ರಚಿಸಿದ್ದ ಮೂವರ ಸಮಿತಿ ಆದೇಶ ರದ್ದುಪಡಿಸಿದ ಹೈಕೋರ್ಟ್‌

Bar & Bench

ಮೈಸೂರಿನಲ್ಲಿ ಕಳೆದ ವರ್ಷ ನಡೆದಿದ್ದ ವಕೀಲರ ಸಮ್ಮೇಳನದ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಸ್ವೀಕರಿಸಿದ್ದ ದೂರಿನ ತನಿಖೆಗಾಗಿ ಮೂವರು ಸದಸ್ಯರ ಸಮಿತಿ ರಚಿಸಿ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಮಾಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ವಜಾ ಮಾಡಿದೆ.

ಹಿರಿಯ ವಕೀಲ ಎಸ್‌ ಬಸವರಾಜು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಇಂದು ಪ್ರಕಟಿಸಿದ್ದು, ಅರ್ಜಿ ಪುರಸ್ಕರಿಸಿದೆ.

Senior Advocate Basavaraju S

ಕೆಎಸ್‌ಬಿಸಿ ಮಾಜಿ ಅಧ್ಯಕ್ಷ ಆನಂದ್‌ ಕುಮಾರ್‌ ಮಗದುಮ್‌ ಅವರು ಏಪ್ರಿಲ್‌ 5ರಂದು ನೀಡಿದ ದೂರನ್ನು ಆಧರಿಸಿ ಬಿಸಿಐ ಹಿರಿಯ ವಕೀಲ ಅಪೂರ್ಬ ಕುಮಾರ್‌ ಶರ್ಮಾ ನೇತೃತ್ವದಲ್ಲಿ ಮೂವರ ಸಮಿತಿ ರಚಿಸಿದ್ದು, ಆರೋಪದ ತನಿಖೆ ಮಾಡುವಂತೆ ಆದೇಶಿಸಿತ್ತು. ಅಮಿತ್‌ ವೇದ್‌ ಮತ್ತು ಭಕ್ತ ಭೂಷಣ್‌ ಬರೀಕ್‌ ಸಮಿತಿಯ ಮತ್ತಿಬ್ಬರು ಸದಸ್ಯರಾಗಿದ್ದರು.

ಪ್ರಕರಣದ ಹಿನ್ನೆಲೆ: ಹಣ ದುರ್ಬಳಕೆ ಆರೋಪಗಳಿಗೆ ಸಂಬಂಧಿಸಿದಂತೆ ರಾಜ್ಯ ವಕೀಲರ ಪರಿಷತ್‌ನ ಮಾಜಿ ಅಧ್ಯಕ್ಷರೂ ಆದ ಧಾರವಾಡದ ಆನಂದ ಕುಮಾರ್ ಮಗದುಮ್‌ ಅವರು ಭಾರತೀಯ ವಕೀಲರ ಪರಿಷತ್‌ಗೆ (ಬಿಸಿಐ) ಸಲ್ಲಿಸಿದ್ದ ಮನವಿಯ ಮೇರೆಗೆ ಬಿಸಿಐ ಮೂವರು ಸದಸ್ಯರ ಸಮಿತಿ ನೇಮಕ ಮಾಡಿತ್ತು.

ಬಿಸಿಐ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರೂ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಅಪೂರ್ವ ಕುಮಾರ್ ಶರ್ಮಾ ಅವರ ನೇತೃತ್ವದ ಈ ಸಮಿತಿಯು ರಾಜ್ಯ ವಕೀಲರ ಪರಿಷತ್‌ಗೆ ಪತ್ರ ಕಳುಹಿಸಿದ್ದು, ಆರೋಪಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಒಪ್ಪಿಸುವಂತೆ ರಾಜ್ಯ ಪರಿಷತ್‌ನ ಕಾರ್ಯದರ್ಶಿಗೆ ನಿರ್ದೇಶಿಸಿತ್ತು. ರಾಜ್ಯ ವಕೀಲರ ಪರಿಷತ್‌ ಘನತೆವೆತ್ತ ಸಾಂವಿಧಾನಿಕ ಸಂಸ್ಥೆಯಾಗಿದ್ದು, ವಿಚಾರಣೆ ಮುಗಿಯುವ ತನಕ ಪರಿಷತ್‌ ಸದಸ್ಯರು ಯಾರೂ ಈ ಕುರಿತು ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚಿಸದಂತೆ ಬಿಸಿಐ ತಾಕೀತು ಮಾಡಿತ್ತು.