BITCOIN and Karntanata HC 
ಸುದ್ದಿಗಳು

ಬಿಟ್‌ ಕಾಯಿನ್‌ ಪ್ರಕರಣ: ಡಿವೈಎಸ್‌ಪಿ ಪೂಜಾರ್‌ ವಿರುದ್ಧದ 'ಘೋಷಿತ ಆರೋಪಿ' ಆದೇಶ ವಜಾ ಮಾಡಿದ ಹೈಕೋರ್ಟ್‌

ತಪ್ಪಾದ ಪ್ರಕ್ರಿಯೆ ಅನುಸರಿಸಿರುವ ಹಿನ್ನೆಲೆಯಲ್ಲಿ ವಿಚಾರಣಾಧೀನ ನ್ಯಾಯಾಲಯ ಮಾಡಿರುವ 'ಘೋಷಿತ ಆರೋಪಿ' ಆದೇಶವನ್ನು ವಜಾ ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪಿಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡು ಹ್ಯಾಕಿಂಗ್, ಬಿಟ್ ಕಾಯಿನ್‌ಗಳ ವರ್ಗಾವಣೆ ಮತ್ತು ಪಾಸ್‌ವರ್ಡ್ ಬದಲಾವಣೆ ಮಾಡಿದ ಆರೋಪ ಎದುರಿಸುತ್ತಿರುವ ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್ ಕೆ. ಪೂಜಾರ್ ವಿರುದ್ಧದ ಘೋಷಿತ ಆರೋಪಿ ಆದೇಶವನ್ನು ಕರ್ನಾಟಕ ಹೈಕೋರ್ಟ್ ಗುರುವಾರ ರದ್ದುಪಡಿಸಿದೆ. ಅಲ್ಲದೇ, ಮೇ 9ರಂದು 8 ಗಂಟೆಗೆ ತನಿಖಾಧಿಕಾರಿಯ ಮುಂದೆ ಶ್ರೀಧರ್‌ ವಿಚಾರಣೆಗೆ ಹಾಜರಾಗಬೇಕು ಎಂದು ನಿರ್ದೇಶಿಸಿದೆ.

ತಮ್ಮ ವಿರುದ್ಧ ವಿಧಾನಸೌಧ ಠಾಣೆ, ಸೈಬರ್‌ ಕ್ರೈಮ್‌ ಠಾಣೆ ಎಫ್‌ಐಆರ್‌ಗಳನ್ನು ರದ್ದುಪಡಿಸಲು ಹಾಗೂ ವಿಚಾರಣಾಧೀನ ನ್ಯಾಯಾಲಯವು ಘೋಷಿತ ಆರೋಪಿ ಎಂದು ಆದೇಶಿಸಿರುವುದನ್ನು ವಜಾ ಮಾಡುವಂತೆ ಕೋರಿ ಡಿವೈಎಸ್‌ಪಿ ಶ್ರೀಧರ್ ಕೆ. ಪೂಜಾರ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಶ್ರೀಷಾನಂದ ಅವರ ರಜಾಕಾಲೀನ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು.

“ತಪ್ಪಾದ ಪ್ರಕ್ರಿಯೆ ಅನುಸರಿಸಿರುವ ಹಿನ್ನೆಲೆಯಲ್ಲಿ ವಿಚಾರಣಾಧೀನ ನ್ಯಾಯಾಲಯ ಮಾಡಿರುವ ಘೋಷಿತ ಆರೋಪಿ ಆದೇಶವನ್ನು ವಜಾ ಮಾಡಲಾಗಿದೆ. ಅರ್ಜಿದಾರರು ವ್ಯಾಪ್ತಿ ಹೊಂದಿದ ನ್ಯಾಯಾಲಯದ ಮುಂದೆ ಹಾಜರಾಗಲು ಮತ್ತು ತನಿಖಾ ಪ್ರಕ್ರಿಯೆಯಲ್ಲಿ ಭಾಗಿಯಾಗಿಸಲು ಸ್ವತಂತ್ರರಾಗಿದ್ದಾರೆ” ಎಂದಿದೆ.

“ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪಿಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡು ಹ್ಯಾಕಿಂಗ್, ಬಿಟ್ ಕಾಯಿನ್‌ಗಳ ವರ್ಗಾವಣೆ ಮತ್ತು ಪಾಸ್‌ವರ್ಡ್ ಬದಲಾವಣೆ ಮಾಡಿದ ಮತ್ತು ತನಿಖಾಧಿಕಾರಿಗಳ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರತ್ಯೇಕ ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಮೇ 8ರ ಬೆಳಿಗ್ಗೆ 9 ಗಂಟೆಗೆ ತನಿಖಾಧಿಕಾರಿಯ ಮುಂದೆ ಶ್ರೀಧರ್‌ ಪೂಜಾರ್‌ ಹಾಜರಾಗಬೇಕು. ತನಿಖಾಧಿಕಾರಿಯು ಪೂಜಾರ್‌ರನ್ನು ನ್ಯಾಯಾಂಗ ಬಂಧನಕ್ಕೆ ಪಡೆದು ಅಂದೇ ಸಂಜೆ 6 ಗಂಟೆ ಒಳಗೆ ಕಸ್ಟಡಿಗೆ ಪಡೆದು ತನಿಖೆ ಪೂರ್ಣಗೊಳಿಸಬೇಕು. ಶ್ರೀಧರ್‌ ಅವರು ತನಿಖಾ ಸಂಸ್ಥೆಗೆ ಸಂಪೂರ್ಣ ಸಹಕಾರ ನೀಡಬೇಕು. ಪ್ರಕರಣದ ತನಿಖೆ ನಡೆಸುವಾಗ ಪ್ರಾಸಿಕ್ಯೂಷನ್‌ ನ್ಯಾಯಾಂಗೇತರ ಕ್ರಮಕ್ಕೆ ಮುಂದಾಗಬಾರದು. ಕಸ್ಟಡಿ ತನಿಖೆ ಮುಗಿದ ಬಳಿಕ 2 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌ ಮತ್ತು ಇಬ್ಬರ ಭದ್ರತೆ ಪಡೆದು ಪೂಜಾರ್‌ ಅವರನ್ನು ಬಿಡುಗಡೆ ಮಾಡಬೇಕು. ತನಿಖಾಧಿಕಾರಿ ಸೂಚಿಸಿದಾಗ ಪೂಜಾರ್‌ ವಿಚಾರಣೆಗೆ ಹಾಜರಾಗಬೇಕು. ಸಾಕ್ಷಿ ತಿರುಚಬಾರದು. ಪೂಜಾರ್‌ ತನಿಖೆಗೆ ಸಹಕರಿಸುವುದಾಗಿ ಹೇಳಿರುವುದರಿಂದ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದರೆ ಪ್ರಾಸಿಕ್ಯೂಷನ್‌ ಅದಕ್ಕೆ ವಿರೋಧಿಸಬಾರದು. ಈ ಅರ್ಜಿಗಳನ್ನು ವಿಲೇವಾರಿ ಮಾಡಿರುವುದು ಪೂಜಾರ್‌ ಅಂತಿಮ ವರದಿ ಪ್ರಶ್ನಿಸುವುದಕ್ಕೆ ಅಡ್ಡಿಯಾಗುವುದಿಲ್ಲ” ಎಂದು ಹೇಳಿದೆ.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಅರುಣ್‌ ಶ್ಯಾಮ್‌ ವಾದಿಸಿದರು. ಸರ್ಕಾರದ ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ವಾದಿಸಿದರು.

ಪ್ರಕರಣದ ಹಿನ್ನೆಲೆ: ಡಾರ್ಕ್‌ನೆಟ್‌ ಮೂಲಕ ಮಾದಕ ವಸ್ತು ಖರೀದಿಸಿದ ಆರೋಪದ ಮೇಲೆ 2020ರ ನವೆಂಬರ್‌ನಲ್ಲಿ ಶ್ರೀಕಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಆಗ ಸಿಸಿಬಿಯಲ್ಲಿ ಪೂಜಾರ್‌ ತನಿಖಾಧಿಕಾರಿಯಾಗಿದ್ದರು. ಶ್ರೀಕಿ ಬಂಧನದೊಂದಿಗೆ ಕರ್ನಾಟಕದಲ್ಲಿ ಸೈಬರ್‌ ಅಪರಾಧಗಳು ಬೆಳಕಿಗೆ ಬಂದಿದ್ದವು. ಇದರಲ್ಲಿ 2019ರ ಜುಲೈ-ಆಗಸ್ಟ್‌ ಅವಧಿಯಲ್ಲಿ ಕರ್ನಾಟಕ ಸರ್ಕಾರದ ಇ-ಆಡಳಿತ ಘಟಕದ 11.5 ಕೋಟಿ ರೂಪಾಯಿ ದೋಚಿದ್ದ ಪ್ರಕರಣವು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ 10ನೇ ಆರೋಪಿಯಾದ ಶ್ರೀಕಿಯನ್ನು 14.11.2020 ರಿಂದ 17.11.2020 ಹಾಗೂ 12ನೇ ಆರೋಪಿ ರಾಹುಲ್‌ ಖಂಡೇಲವಾಲಾ ಅವರನ್ನು 14.11.2020 ರಿಂದ 31.11.2020ರವರೆಗೆ ಅಕ್ರಮವಾಗಿ ವಶದಲ್ಲಿಟ್ಟುಕೊಂಡು ಬಿಟ್‌ ಕಾಯಿನ್‌ ವರ್ಗಾವಣೆ, ಪಾಸ್‌ವರ್ಡ್‌ ಬದಲಾವಣೆ ಇತ್ಯಾದಿ ಕೃತ್ಯಕ್ಕೆ ಬಳಕೆ ಮಾಡಿದ ಆರೋಪ ಪೂಜಾರ್‌ ಮತ್ತಿತರರ ವಿರುದ್ದ ಇದೆ. ಈ ಸಂಬಂಧ ಸೈಬರ್‌ ಕ್ರೈಮ್‌ ಪೊಲೀಸರು ಐಪಿಸಿ ಸೆಕ್ಷನ್‌ಗಳಾದ 343, 344, 409, 426, 34, 36, 37,201, 204 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66, 84ಸಿ ಪ್ರಕರಣ ದಾಖಲಿಸಿದ್ದಾರೆ.

ಆನಂತರ, ಈ ಪ್ರಕರಣದಲ್ಲಿ ಪೂಜಾರ್‌ ಅವರನ್ನು ಬಂಧಿಸಲು ತೆರಳಿದ್ದಾಗ ತನಿಖಾಧಿಕಾರಿಗಳ ಮೇಲೆ ಕಾರು ಹರಿಸಲು ಮುಂದಾದ ಆರೋಪದ ಮೇಲೆ ಐಪಿಸಿ ಸೆಕ್ಷನ್‌ಗಳಾದ 506, 504, 307, 332, 353ರ ಅಡಿ ಪ್ರಕರಣ ದಾಖಲಿಸಲಾಗಿದೆ. ಅದಾಗ್ಯೂ, ಪೂಜಾರ್‌ ತನಿಖಾಧಿಕಾರಿಗಳಿಂದ ತಲೆಮರಿಸಿಕೊಂಡಿದ್ದರಿಂದ ಅವರ ವಿರುದ್ಧ ಘೋಷಿತ ಆರೋಪಿ ಆದೇಶವನ್ನು ವಿಚಾರಣಾಧೀನ ನ್ಯಾಯಾಲಯ ಹೊರಡಿಸಿತ್ತು.

Sridhar Pujar Vs State of Karnataka.pdf
Preview