Karnataka HC and Students 
ಸುದ್ದಿಗಳು

ಖಾಸಗಿ ಶಾಲೆಗಳ ಬೋಧನಾ ಶುಲ್ಕ ಶೇ.30 ಕಡಿತ ಮಾಡಿದ್ದ ಸರ್ಕಾರದ ಆದೇಶ ರದ್ದು; ಶೇ.15 ರಿಯಾಯಿತಿಗೆ ಹೈಕೋರ್ಟ್‌ ಅಸ್ತು

2019-20ನೇ ಸಾಲಿನಲ್ಲಿ ಸಂಗ್ರಹಿಸಲಾಗಿದ್ದ ಶುಲ್ಕದ ಮೊತ್ತದಲ್ಲಿ ಶೇ 15 ವಿನಾಯಿತಿ ನೀಡಿ 2020-21ನೇ ಸಾಲಿನ ಶುಲ್ಕ ಸಂಗ್ರಹಿಸಲು ಖಾಸಗಿ ಶಾಲೆಗಳಿಗೆ ಅವಕಾಶ ಕಲ್ಪಿಸಿರುವ ಪೀಠವು ಅರ್ಜಿಗಳನ್ನು ವಿಲೇವಾರಿ ಮಾಡಿದೆ.

Bar & Bench

ಕಳೆದ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಶಾಲೆಗಳ ಬೋಧನಾ ಶುಲ್ಕದಲ್ಲಿ (ಟ್ಯೂಷನ್ ಫೀ) ಶೇ. 30 ಕಡಿತಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ರದ್ದುಪಡಿಸಿದೆ.

ಸುಪ್ರೀಂಕೋರ್ಟ್ ತೀರ್ಪಿನ ಅನುಸಾರ 2020-21ನೇ ಶೈಕ್ಷಣಿಕ ವರ್ಷಕ್ಕೆ ಶೇ.15ರಷ್ಟು ಶುಲ್ಕ ರಿಯಾಯಿತಿ ನೀಡುವಂತೆ ಖಾಸಗಿ ಶಾಲೆಗಳಿಗೆ ನ್ಯಾಯಮೂರ್ತಿ ಆರ್‌ ದೇವದಾಸ್‌ ನೇತೃತ್ವದ ಏಕಸದಸ್ಯ ಪೀಠ ಆದೇಶ ಮಾಡಿದೆ. 2019-20ನೇ ಸಾಲಿನಲ್ಲಿ ಸಂಗ್ರಹಿಸಲಾಗಿದ್ದ ಶುಲ್ಕದ ಮೊತ್ತದಲ್ಲಿ ಶೇ.15 ವಿನಾಯಿತಿ ನೀಡಿ 2020-21ನೇ ಸಾಲಿನ ಶುಲ್ಕ ಸಂಗ್ರಹಿಸಲು ಖಾಸಗಿ ಶಾಲೆಗಳಿಗೆ ಅವಕಾಶ ಕಲ್ಪಿಸಿರುವ ಪೀಠವು ಅರ್ಜಿಗಳನ್ನು ವಿಲೇವಾರಿ ಮಾಡಿದೆ.

ಕೋವಿಡ್ ಹಿನ್ನೆಲೆಯಲ್ಲಿ ಶೇ. 30 ಬೋಧನಾ ಶುಲ್ಕ ಕಡಿತಗೊಳಿಸಿ 2021ರ ಜನವರಿ 29ರಂದು ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಂಸ್ಥೆಗಳ ಸಂಘಟನೆ (ಕ್ಯಾಮ್ಸ್) ಹಾಗೂ ಇತರ ಖಾಸಗಿ ಶಿಕ್ಷಣ ಸಂಸ್ಥೆಗಳು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಾಲಯವು ತೀರ್ಪು ಕಾಯ್ದಿರಿಸಿತ್ತು.

ಸುಪ್ರೀಂ ಕೋರ್ಟ್‌ ತೀರ್ಪು ಆಧರಿಸಿ ಆದೇಶ

ಇಂಡಿಯನ್ ಸ್ಕೂಲ್ ಆಫ್‌ ಜೋಧಪುರ ಹಾಗೂ ರಾಜಾಸ್ಥಾನ ಸರ್ಕಾರದ ನಡುವಿನ ಪ್ರಕರಣದಲ್ಲಿ 2021ರ ಮೇ 3ರಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, 2020-21ನೇ ಸಾಲಿನ ಶುಲ್ಕದಲ್ಲಿ ಶೇ 15 ರಿಯಾಯಿತಿ ನೀಡಿ, ಬಾಕಿ ಶುಲ್ಕ ಸಂಗ್ರಹಿಸಲು ಖಾಸಗಿ ಶಾಲೆಗಳಿಗೆ ಅನುಮತಿಸಿತ್ತು. ಜತೆಗೆ, ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನು ಯಾವುದೇ ಕಾರಣಕ್ಕೂ ಆನ್‌ಲೈನ್ ಅಥವಾ ಭೌತಿಕ ತರಗತಿಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸಬಾರದು ಹಾಗೂ ಅವರ ಪರೀಕ್ಷಾ ಫಲಿತಾಂಶಗಳನ್ನು ತಡೆಹಿಡಿಯಬಾರದು. ಯಾವುದೇ ವಿದ್ಯಾರ್ಥಿ ಅಥವಾ ಪಾಲಕರು ಶುಲ್ಕ ಪಾವತಿಸಲು ಕಷ್ಟವಾಗುತ್ತಿರುವ ಬಗ್ಗೆ ಮನವಿ ಸಲ್ಲಿಸಿದರೆ ಅವುಗಳನ್ನು ಪ್ರತ್ಯೇಕವಾಗಿ ಅನುಕಂಪದ ಆಧಾರದಲ್ಲಿ ಪರಿಗಣಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಖಾಸಗಿ ಶಾಲೆಗಳಿಗೆ ಸೂಚಿಸಿತ್ತು. ಇದನ್ನು ಆಧರಿಸಿ 2020-21ನೇ ಸಾಲಿಗೆ ರಾಜ್ಯದ ಖಾಸಗಿ ಶಾಲೆಗಳ ಬೋಧನಾ ಶುಲ್ಕದಲ್ಲಿ ಶೇ.15 ವಿನಾಯಿತಿ ನೀಡಿದೆ.

ಅರ್ಜಿದಾರರ ವಾದವೇನು?

ಕಳೆದ ಸಾಲಿನಲ್ಲಿ ಖಾಸಗಿ ಶಾಲೆಗಳ ಬೋಧನಾ ಶುಲ್ಕವನ್ನು ಶೇ.30 ಕಡಿತಗೊಳಿಸಿ ಸರ್ಕಾರ 2021ರ ಜ.29ರಂದು ಆದೇಶಿಸಿತ್ತು. ಜತೆಗೆ, ಶೇ.70 ಬೋಧನಾ ಶುಲ್ಕ ಹೊರತುಪಡಿಸಿ ಬೇರೆ ಯಾವುದೇ ಶುಲ್ಕ ಪಡೆಯುವಂತಿಲ್ಲ ಎಂದು ಆದೇಶದಲ್ಲಿ ಸೂಚಿಸಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಅರ್ಜಿದಾರರು, ಸರ್ಕಾರದ ಆದೇಶದಿಂದ ಶಾಲೆಗಳಲ್ಲಿ ಶುಲ್ಕ ಸಂಗ್ರಹ ಪ್ರಮಾಣ ಕಡಿಮೆಯಾಗಲಿದೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವೇತನ ಪಾವತಿಸಲು ಸಾಧ್ಯವಾಗುವುದಿಲ್ಲ. ಶಾಲೆಗಳ ಸಮರ್ಪಕ ಕಾರ್ಯನಿರ್ವಹಣೆ ಸಾಧ್ಯವಾಗುವುದಿಲ್ಲ. ಮೇಲಾಗಿ ಶುಲ್ಕ ಕಡಿತಗೊಳಿಸಿದ ಆದೇಶ ಶಿಕ್ಷಣ ಕಾಯಿದೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಖಾಸಗಿ ಶಾಲೆಗಳ ಮೇಲೆ ಸರ್ಕಾರ ಬಲವಂತದ ಕ್ರಮ ಕೈಗೊಳ್ಳಬಾರದು. ಖಾಸಗಿ ಶಾಲೆಗಳೂ ಸಹ ಶುಲ್ಕ ಪಡೆಯುವಾಗ ಪ್ರತಿಯೊಬ್ಬ ಪಾಲಕರ ಅಹವಾಲು ಪರಿಗಣಿಸಬೇಕೆಂದು ಮಧ್ಯಂತರ ಆದೇಶ ನೀಡಿತ್ತು. ಅದಾದ ನಂತರವೂ ಕೆಲ ಖಾಸಗಿ ಶಾಲೆಗಳು ಸಂಪೂರ್ಣ ಶುಲ್ಕ ಪಾವತಿಸುವಂತೆ ಒತ್ತಡ ಹೇರುತ್ತಿವೆ ಎಂಬ ಆರೋಪ ಹಿನ್ನೆಲೆಯಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಸರ್ಕಾರ, ಶುಲ್ಕ ನಿಗದಿ ವಿವಾದ ಬಗೆಹರಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚನೆಗೆ ಮನವಿ ಮಾಡಿತ್ತು.

ಶುಲ್ಕ ನಿಗದಿಪಡಿಸಲು ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಈ ಬಗ್ಗೆ ಸುಪ್ರೀಂಕೋರ್ಟ್ ಸಹ ಆದೇಶ ನೀಡಿದೆ. ಆದ್ದರಿಂದ, ಸರ್ಕಾರ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದು ವಾದಿಸಿದ್ದ ಖಾಸಗಿ ಶಾಲೆಗಳು, 2020-21ನೇ ಸಾಲಿನ ಬೋಧನಾ ಶುಲ್ಕದಲ್ಲಿ ಶೇ.15 ವಿನಾಯಿತಿ ನೀಡುವುದಾಗಿ ಹೈಕೋರ್ಟ್ ಮುಂದೆ ಸ್ವಯಂ ಹೇಳಿಕೆ ನೀಡಿದ್ದವು.