ಅಂತರ ರಾಜ್ಯ ಓಡಾಟಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಆಗಸ್ಟ್ 15ರಂದು ಕರ್ನಾಟಕ-ಕೇರಳ ಗಡಿಯನ್ನು ಮುಕ್ತಗೊಳಿಸಲಾಗಿದೆ ಎಂದು ರಾಜ್ಯ ಸರ್ಕಾರವು ಮಂಗಳವಾರ ಹೈಕೋರ್ಟ್‌ಗೆ ತಿಳಿಸಿತು.
ಜನರು ಮುಕ್ತವಾಗಿ ಸಂಚಾರ ನಡೆಸಲು ದಕ್ಷಿಣ ಕನ್ನಡ ಜಿಲ್ಲೆಯ ಸರಡ್ಕಾ ಚೆಕ್ ಪೋಸ್ಟ್ ತೆರೆಯುವಂತೆ ಕೇರಳ ಹಾಗೂ ಕರ್ನಾಟಕದ ಗಡಿ ಭಾಗದ ಗ್ರಾಮಸ್ಥರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಕೋರ್ಟ್‌ಗೆ ವಿವರಣೆ ಸಲ್ಲಿಸಿತು.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ಅಶೋಕ್ ಎಸ್ ಕಿಣಗಿ ನೇತೃತ್ವದ ನ್ಯಾಯಪೀಠವು ರಾಜ್ಯ ಸರ್ಕಾರ ವಿಧಿಸಿದ್ದ ನಿರ್ಬಂಧಗಳ ಬಗ್ಗೆ ಬೇಸರ ವ್ಯಕ್ತಪಡಿಸಿತು. ದೇಶಾದ್ಯಂತ ಜೂನ್ 29ರಂದು ಅನ್ ಲಾಕ್ -3 ಜಾರಿಗೊಳಿಸಿರುವಾಗ ನಿಯಮಾವಳಿಯ ಪೈಕಿ ಐದನೇ ನಿಬಂಧನೆ ಜಾರಿಯಲ್ಲಿದ್ದರೂ ಅಂತರ ರಾಜ್ಯ ಪ್ರಯಾಣಿಕರ ಮೇಲೆ ನಿರ್ಬಂಧ ವಿಧಿಸಬಹುದೇ ಎಂಬುದಕ್ಕೆ ಉತ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್ ಸೂಚಿಸಿತು.
ಅಂತರ ರಾಜ್ಯ ಪ್ರಯಾಣ ಕೈಗೊಳ್ಳುವವರನ್ನು ಕಡ್ಡಾಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುತ್ತಿರುವುದು ಮತ್ತು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾವಣಿ ಸೇರಿದಂತೆ ಹಲವು ಷರತ್ತುಗಳನ್ನು ಸೂಕ್ತ ರೀತಿಯಲ್ಲಿ ಅಳವಡಿಸಿರುವುದನ್ನು ಹೈಕೋರ್ಟ್ ಖಾತ್ರಿಪಡಿಸಿಕೊಂಡಿತು.
“ದೇಶಾದ್ಯಂತ ಲಾಕ್ ಡೌನ್-3 ನಿಯಮಾವಳಿಯ ಐದನೇ ನಿಬಂಧನೆ ಜಾರಿಯಲ್ಲಿರುವಾಗ ಆಗಸ್ಟ್ 15ರ ಆದೇಶದಂತೆ ರಾಜ್ಯ ಸರ್ಕಾರವು ನಿರ್ಬಂಧ ವಿಧಿಸಬಹುದೇ? ಈ ನಿರ್ಬಂಧಗಳ ಕಾನೂನು ವ್ಯಾಪ್ತಿಯನ್ನು ನಿರ್ಧರಿಸಲು ರಾಜ್ಯ ಸರ್ಕಾರವು ಆಗಸ್ಟ್ 27ರ ಒಳಗೆ ಅಫಿಡವಿಟ್ ಸಲ್ಲಿಸಬೇಕು”.ಕರ್ನಾಟಕ ಹೈಕೋರ್ಟ್
ಇದೇ ಸಂರ್ಭದಲ್ಲಿ ಆಗಸ್ಟ್ 15ರಂದು ಹೊರಡಿಸಿದ ಆದೇಶದ ಪ್ರತಿಯನ್ನು ಅನುವಾದಿಸಿ ಸಲ್ಲಿಸುವಂತೆ ದ್ವಿಸದಸ್ಯ ಪೀಠವು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು.
ಪಿಐಎಲ್ ವಿಚಾರಣೆಯ ವೇಳೆ ಹೈಕೋರ್ಟ್ ಹೀಗೆ ಹೇಳಿತು:
ಕೇಂದ್ರ ಸರ್ಕಾರದ ಆದೇಶಕ್ಕೆ ಪರ್ಯಾಯವಾಗಿ ನೀವು (ರಾಜ್ಯ ಸರ್ಕಾರ) ಇಂಥ ನಿರ್ಬಂಧಗಳನ್ನು ವಿಧಿಸಬಹುದೇ? ನಿರ್ಬಂಧ ವಿಧಿಸಲು ನಿಮಗೆ ಅಧಿಕಾರವೇನಿದೆ? ಅಂತರ ರಾಜ್ಯ ಪ್ರಯಾಣ ಕೈಗೊಳ್ಳಲು ಯಾವುದೇ ನಿರ್ಬಂಧವಿಲ್ಲ. ಈಗ ನೀವು ನಿರ್ಬಂಧಗಳಿವೆ ಎನ್ನುತ್ತೀರಿ. ಅಂಥ ನಿರ್ಬಂಧಗಳೇನಾದರೂ ಇದ್ದರೆ ಸಮರ್ಥನೆ ನೀಡಿ. ಆರೋಗ್ಯ ಸೇತು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವುದು ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಕಡ್ಡಾಯವಾಗಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸುವಂತೆ ನೀವು (ರಾಜ್ಯ ಸರ್ಕಾರ) ಸೂಚಿಸುತ್ತಿದ್ದೀರಿ. ಯಾವ ಕಾನೂನಿನ ಅಡಿ ನೀವು ಈ ನಿರ್ಧಾರ ಕೈಗೊಂಡಿದ್ದೀರಿ?ಕರ್ನಾಟಕ ಹೈಕೋರ್ಟ್
ಈಗ ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 30 ಮತ್ತು 31ರ ಅಡಿ ಕೇಂದ್ರ ಸರ್ಕಾರ ಹೊರಡಿಸಿರುವ ನಿರ್ದೇಶನಗಳಿಗೆ ಸಮ್ಮತವಾಗಿ ಯಾವುದೇ ನಿರ್ಬಂಧಗಳು ಜಾರಿಯಲ್ಲಿರಬೇಕು ಎಂದು ಅರ್ಜಿದಾರರ ಪರ ವಕೀಲರು ಪೀಠದ ಗಮನಕ್ಕೆ ತಂದರು. ನ್ಯಾಯಪೀಠವು ವಿಚಾರಣೆಯನ್ನು ಆಗಸ್ಟ್ 28ಕ್ಕೆ ಮುಂದೂಡಿದೆ.