ಚುನಾವಣಾ ಆಯೋಗದ ಡಿಜಿಟಲ್ ನಾಮಪತ್ರ ವ್ಯವಸ್ಥೆ ವಿಫಲತೆಯಿಂದಾಗಿ ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದು ವಿಳಂಬವಾಗಿರುವುದನ್ನು ಪರಿಗಣಿಸದೇ ಭೌತಿಕವಾಗಿ ನಾಮಪತ್ರ ಸಲ್ಲಿಸಿರುವುದನ್ನು ಪರಿಗಣಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿದ್ದ ಅರ್ಜಿಯೊಂದನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾಗೊಳಿಸಿದೆ.
ಬೆಂಗಳೂರಿನ ಇಂದಿರಾ ನಗರದ ಎ ಆಲಂ ಪಾಷಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠವು ವಜಾಗೊಳಿಸಿದೆ.
ನೋಟರಿ ಮಾಡಿಸಲ್ಪಟ್ಟಿರುವ ಫಾರ್ಮ್ 26 ಅಫಿಡವಿಟ್ ಒಳಗೊಂಡ ಭೌತಿಕ ನಾಮಪತ್ರವನ್ನು ಪರಿಗಣಿಸಲು ಭಾರತೀಯ ಚುನಾವಣಾ ಆಯೋಗ, ಮುಖ್ಯ ಚುನಾವಣಾಧಿಕಾರಿ ಮತ್ತು ದಾವಣಗೆರೆ ಚುನಾವಣಾಧಿಕಾರಿಗೆ ನಿರ್ದೇಶನ ಕೋರಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಚುನಾವಣಾ ಆಯೋಗದ ಸುವಿದಾ ಪೋರ್ಟಲ್ ಮೂಲಕ ನಾಮಪತ್ರ ಸಲ್ಲಿಸಿ, ಭದ್ರತಾ ಠೇವಣಿ ಪಾವತಿಸಲು ಸಾಧ್ಯವಾಗದೇ ಇರುವುದರಿಂದ ನಿಗದಿತ ಅವಧಿಯಲ್ಲಿ ಉಮೇದುವಾರಿಕೆ ಸಲ್ಲಿಕೆ ಸಾಧ್ಯವಾಗಿಲ್ಲ. ಆಯೋಗದ ಆಡಳಿತಾತ್ಮಕ ವೈಫಲ್ಯದಿಂದ ಸಮಸ್ಯೆ ತಲೆದೋರಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ತಮ್ಮ ನಾಮಪತ್ರ ಪರಿಗಣಿಸಲು ಚುನಾವಣಾಧಿಕಾರಿಗೆ ನಿರ್ದೇಶಿಸಬೇಕು ಎಂದು ಆಲಂ ಪಾಷಾ ಮಾಡಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.