Karnataka High Court 
ಸುದ್ದಿಗಳು

ವಿಶ್ವವಿದ್ಯಾಲಯಗಳ ಹಾಜರಾತಿ ಮಿತಿ, ಮೂಲ ಅಂಕ ಪಟ್ಟಿ ತಡೆಗೆ ಆಕ್ಷೇಪ: ಅರ್ಜಿ ವಿಚಾರಣೆ ನಡೆಸಲು ಹೈಕೋರ್ಟ್‌ ನಕಾರ

ಶೈಕ್ಷಣಿಕ ನೀತಿ ನಿರ್ಣಯ ವಿಚಾರಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ. ಮುಖ್ಯವಾಗಿ ಈ ರೀತಿಯ ಸಾಮಾನ್ಯ ಆಕ್ಷೇಪಗಳನ್ನು ಮಾಡಿ ಸಲ್ಲಿಸಲಾದ ಅರ್ಜಿ ಪರಿಗಣಿಸಲು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್‌.

Bar & Bench

ಪರೀಕ್ಷೆಗೆ ಹಾಜರಾಗಲು ಅರ್ಹತೆ ಪಡೆದುಕೊಳ್ಳಬೇಕಾದರೆ ವಿಶ್ವವಿದ್ಯಾಲಯಗಳು ನಿಗದಿಪಡಿಸುವ ಹಾಜರಾತಿ ಮಿತಿಯ ಮಾನದಂಡಗಳು ಹಾಗೂ ಕೋರ್ಸ್ ಅರ್ಧಕ್ಕೆ ಮೊಟಕುಗೊಳಿಸಿದಾಗ ವಿದ್ಯಾರ್ಥಿಯ 10ನೇ ತರಗತಿ ಮತ್ತು ಪಿಯುಸಿ ಮೂಲ ಅಂಕಪಟ್ಟಿಗಳನ್ನು ತಡೆ ಹಿಡಿಯವುದನ್ನು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಗೆ ಗುರುವಾರ ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.

ಬೆಂಗಳೂರಿನ ರಾಷ್ಟ್ರೀಯ ಮಾನವ ಹಕ್ಕು ಮತ್ತ ಸಾಮಾಜಿಕ ನ್ಯಾಯ ವೇದಿಕೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು ಎಲ್ಲಾ ವಿಶ್ವವಿದ್ಯಾಲಯಗಳು ಯುಜಿಸಿ ಅಡಿಯಲ್ಲಿ ಬರುತ್ತವೆ. ಆದರೆ, ಕೆಲವು ವಿಶ್ವವಿದ್ಯಾಲಯಗಳು ಪರೀಕ್ಷೆಗೆ ಹಾಜರಾತಿ ಮಾನದಂಡ ನಿಗದಿಪಡಿಸಿವೆ. ಕೆಲವೆಡೆ ಶೂನ್ಯ ಹಾಜರಾತಿ ಇದ್ದರೂ ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ. ಮತ್ತೆ ಕೆಲ ವಿಶ್ವವಿದ್ಯಾಲಯಗಳಲ್ಲಿ ಶೇ.85ರಷ್ಟು ಹಾಜರಾತಿ ಇರಬೇಕು ಎಂದು ಹೇಳಲಾಗುತ್ತದೆ. ಅದೇ ರೀತಿ ಅರ್ಧಕ್ಕೆ ಕೋರ್ಸ್ ಮೊಟಕುಗೊಳಿಸಿ ಬೇರೆ ಕಾಲೇಜಿಗೆ ಸೇರಿದಾಗ ವಿದ್ಯಾರ್ಥಿಯ 10ನೇ ತರಗತಿ ಮತ್ತು ಪಿಯುಸಿ ಮೂಲ ಅಂಕಪಟ್ಟಿಗಳನ್ನು ತಡೆ ಹಿಡಿಯಲಾಗುತ್ತದೆ. ಇದನ್ನು ಸರಿಪಡಿಸಲು ಉನ್ನತಾಧಿಕಾರ ಸಮಿತಿ ರಚಿಸಲು ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದಾರೆ. ಆದರೆ, ಶೈಕ್ಷಣಿಕ ನೀತಿ ನಿರ್ಣಯ ವಿಚಾರಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಪೀಠವು ಹೇಳಿತು.

ಮುಂದುವರಿದು, ಮುಖ್ಯವಾಗಿ ಈ ರೀತಿಯ ಸಾಮಾನ್ಯ ಆಕ್ಷೇಪಗಳನ್ನು ಮಾಡಿ ಸಲ್ಲಿಸಲಾದ ಅರ್ಜಿ ಪರಿಗಣಿಸಲು ಸಾಧ್ಯವಿಲ್ಲ. ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳು ನ್ಯಾಯಾಲಯದ ಮುಂದೆ ಬಂದರೆ ಆಗ ಪರಿಗಣಿಸಬಹುದು ಎಂದು ಹೇಳಿ ಅರ್ಜಿಯನ್ನು ಪೀಠ ಇತ್ಯರ್ಥಪಡಿಸಿತು.