ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂಸತ್ರಸ್ತೆಯನ್ನು ಅಪಹರಣ ಮಾಡಿದ ಆರೋಪ ಸಂಬಂಧ ಕೆ ಆರ್ ನಗರದ ಮೂವರು ಆರೋಪಿಗಳ ವಿರುದ್ಧದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಅಪಹರಿಸಿದ ಆರೋಪಕ್ಕೆ ಸಂಬಂಧಿಸಿದ ತಮ್ಮ ವಿರುದ್ಧದ ವಿಚಾರಣಾಧೀನ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಕೆ ಆರ್ ನಗರದ ಆರೋಪಿಗಳಾದ ಸುಜಯ್, ಎಚ್ ಎನ್ ಮಧು ಮತ್ತು ಎಚ್ ಡಿ ಮನುಗೌಡ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.
ಅರ್ಜಿದಾರರ ವಿರುದ್ಧ ತನಿಖಾಧಿಕಾರಿಗಳು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಅದರಲ್ಲಿ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಈ ಮೂವರು ಆರೋಪಿಗಳು ವಹಿಸಿರುವ ಪ್ರತಿಯೊಂದು ಪಾತ್ರದ ಬಗ್ಗೆ ವಿವರವಾಗಿ ಹೇಳಲಾಗಿದೆ. ಹೀಗಾಗಿ, ಅದರ ಬಗ್ಗೆ ವಿಚಾರಣಾ ನ್ಯಾಯಾಲಯವೇ ಪೂರ್ಣ ಪ್ರಮಾಣದಲ್ಲಿ ವಿಚಾರಣೆ ನಡೆಸಿ ಅರ್ಜಿದಾರರು ಅಪರಾಧ ಎಸಗಿದ್ದಾರೋ ಅಥವಾ ಇಲ್ಲವೋ ಎಂಬುದನ್ನು ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಹೊರತು ಹೈಕೋರ್ಟ್ ನಿರ್ಧಾರ ಕೈಗೊಳ್ಳಲಾಗುವುದಿಲ್ಲ. ಆದ್ದರಿಂದ, ಅರ್ಜಿಯನ್ನು ತಿರಸ್ಕರಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರ ಪರ ವಕೀಲರು “ಅರ್ಜಿದಾರರು ಪ್ರಕರಣದ 3, 4 ಮತ್ತು 5ನೇ ಆರೋಪಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಆದರೆ, ಅವರ ವಿರುದ್ಧದ ಆರೋಪಗಳನ್ನು ದೃಢಪಡಿಸುವ ಯಾವೊಂದು ದಾಖಲೆಯೂ ಇಲ್ಲವಾಗಿದೆ. ಸಂತ್ರಸ್ತೆಯು ವಿಚಾರಣಾ ನ್ಯಾಯಾಲಯದ ಮುಂದೆ ನೀಡಿದ ಪ್ರಮಾಣೀಕೃತ ಹೇಳಿಕೆಯಲ್ಲೂ ಈ ಮೂವರು ಆರೋಪಿಗಳ ವಿರುದ್ಧ ಯಾವುದೇ ಆರೋಪ ಮಾಡಿಲ್ಲ. ಆರೋಪಗಳನ್ನು ಕೈಬಿಡಲು ಕೋರಿ ಆರೋಪಿಗಳು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ವೇಳೆ ಅಪಹರಣ ಮಾಡುವ ಸಮಾನ ಉದ್ದೇಶ ಹೊಂದಿದ್ದರು ಎಂಬುದಾಗಿ ಹೇಳುವ ಸಾಕ್ಷ್ಯಾಧಾರ ಇಲ್ಲ ಎಂದು ವಿಚಾರಣಾ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸಂತ್ರಸ್ತೆಯನ್ನು ತನ್ನ ಹಳ್ಳಿಯಿಂದ ಸಾಲಿಗ್ರಾಮದ 8ನೇ ಆರೋಪಿಯ ಮನೆಗೆ ಕಾರಿನಲ್ಲಿ ಕರೆದುತಂದು ಡ್ರಾಪ್ ಮಾಡಿದ್ದು ಬಿಟ್ಟರೆ ಅಪಹರಣ ಮಾಡಿದ ಬಗ್ಗೆ ಯಾವೊಂದು ಆರೋಪ ಅರ್ಜಿದಾರರ ಮೇಲಿಲ್ಲ. ಅಪಹರಣಕ್ಕೆ ಪಿತೂರಿ ನಡೆಸಿದ ಹಾಗೂ ಎರಡನೇ ಆರೋಪಿಯೊಂದಿಗೆ ಸಂಭಾಷಣೆ ನಡೆಸಿದ ಬಗ್ಗೆಯೂ ಸಾಕ್ಷ್ಯಾಧಾರಗಳಿಲ್ಲ. ಆದ್ದರಿಂದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿದರು.
ಪ್ರಕರಣದ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಎನ್ ಜಗದೀಶ್ ಅವರು, ಆರೋಪಿಗಳು ಪ್ರಕರಣದ ಇತರೆ ಆರೋಪಿಗಳೊಂದಿಗೆ ಫೋನ್ ಮೂಲಕ ಸಂಭಾಷೆ ನಡೆಸಿದ ಬಗ್ಗೆ ದಾಖಲೆಗಳಿವೆ. ಆರೋಪ ಪಟ್ಟಿಯಲ್ಲಿ ಪ್ರಕರಣದಲ್ಲಿ ಅರ್ಜಿದಾರರು ವಹಿಸಿದ ಪ್ರತಿಯೊಂದು ಪಾತ್ರದ ಬಗ್ಗೆ ಸಪೂರ್ಣ ವಿವರಣೆ ಹಾಗೂ ದಾಖಲೆಗಳಿವೆ. ಆದ್ದರಿಂದ, ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದರು.
ಅಪಹರಣ ಪ್ರಕರಣ ಸಂಬಂಧ 2024ರ ಮೇ 2ರಂದು ದೂರು ದಾಖಲಾಗಿತ್ತು. ನಂತರ ಪ್ರಕರಣದ ತನಿಖೆ ನಡೆಸಿದ್ದ ತನಿಖಾಧಿಕಾರಿಗಳು ಎಲ್ಲಾ ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಆರೋಪಗಳನ್ನು ಕೈ ಬಿಡಲು ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾಧೀನ ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದ ತಮ್ಮ ವಿರುದ್ಧದ ವಿಚಾರಣಾ ನ್ಯಾಯಾಲಯದ ವಿಚಾರಣೆ ಪಡಿಸಬೇಕು ಎಂದು ಕೋರಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು.