ಸುದ್ದಿಗಳು

ಡಿವೋರ್ಸಿ ಮ್ಯಾಟ್ರಿಮೋನಿಯಲ್‌ನಲ್ಲಿ ಪರಿಚಿತಳಿಗೆ ಹೊಸ ಜೀವನದ ನೆಪದಲ್ಲಿ ವಂಚನೆ: ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಚಿಕ್ಕಬಳ್ಳಾಪುರ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಸೀತಾರಾಮಪಾಳ್ಯದ ನಿವಾಸಿ ಇ ಸುರೇಶ್‌ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌.

Bar & Bench

ʼಡಿವೋರ್ಸಿ ಮ್ಯಾಟ್ರಿಮೋನಿಯಲ್‌ʼ ಮೂಲಕ ಪರಿಚಯವಾದ ವಿಚ್ಛೇದಿತಳಿಗೆ ಮದುವೆಯಾಗಿ ಹೊಸ ಜೀವನ ನೀಡುತ್ತೇನೆ ಎಂದು ಭರವಸೆ ನೀಡಿ, ನಂತರ ನಿವೇಶನ ನೋಂದಣಿ ನೆಪದಲ್ಲಿ ₹2.80 ಲಕ್ಷ ಪಡೆದು ವಂಚಿಸಿದ ವ್ಯಕ್ತಿ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ.

ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಸೀತಾರಾಮಪಾಳ್ಯದ ನಿವಾಸಿ ಇ ಸುರೇಶ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

Justice Mohammad Nawaz

ಪ್ರಕರಣದ ತನಿಖೆ ನಡೆಯುತ್ತಿದ್ದು, ತಾನು ಹಣ ಕಳುಹಿಸಿದ್ದ ಸುರೇಶ್‌ ಅವರ ಬ್ಯಾಂಕ್‌ ಖಾತೆಗಳ ವಿವರಗಳನ್ನು ದೂರುದಾರೆ ನೀಡಿದ್ದಾರೆ. ಸುರೇಶ್‌ ಖಾತೆಗೆ ದೂರುದಾರೆ ಹಣ ವರ್ಗಾಯಿಸಿದ್ದಾರೆ. ಮದುವೆಯಾಗುವುದಾಗಿ ಹೊಸ ಜೀವನ ನೀಡುತ್ತೇನೆ ಎಂದು ದೂರುದಾರೆಗೆ ಭರವಸೆ ನೀಡಿ, ನಂತರ ಆಕೆಯಿಂದ ನಿವೇಶನ ನೋಂದಣಿ ನೆಪದಲ್ಲಿ ಹಣ ಪಡೆದ ಬಳಿಕ ಹಣ ಮರು ಪಾವತಿಗೆ ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮದುವೆಯಾಗಲು ನಿರಾಕರಿಸಿದ್ದ ಆರೋಪ ಸುರೇಶ್‌ ಮೇಲಿದೆ. ತನಿಖೆ ನಡೆಯುತ್ತಿರುವ ಈ ಹಂತದಲ್ಲಿ ತನ್ನ ಮೇಲಿನ ಆರೋಪಗಳು ಸುಳ್ಳು ಎಂಬ ಸುರೇಶ್‌ ವಾದ ಒಪ್ಪಿ ಎಫ್‌ಐಆರ್‌ ರದ್ದುಪಡಿಸಲಾಗದು ಎಂದು ನ್ಯಾಯಾಲಯ ನಿರಾಕರಿಸಿದೆ.

ಅಲ್ಲದೆ, ಪಕ್ಷಕಾರರು ವಿವಾದವನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಬಯಸಿದರೆ ಆ ಕುರಿತು ಅರ್ಜಿ ಸಲ್ಲಿಸಬಹುದು ಎಂದೂ ನ್ಯಾಯಾಲಯ ತಿಳಿಸಿದೆ. ದೂರುದಾರೆಯ ಪರ ವಕೀಲೆ ಎಚ್ ಅನುಷಾ ದೇವಿ ವಾದಿಸಿದ್ದರು.

ಡಿವೋರ್ಸಿ ವೆಬ್‌ಸೈಟ್‌ ಮೂಲಕ 2024ರ ಅಕ್ಟೋಬರ್‌ 10ರಂದು ದೂರುದಾರೆ ಮತ್ತು ಸುರೇಶ್‌ ಪರಿಚಿತರಾದ ನಂತರ ಘಟನೆ ನಡೆಸಿದೆ. ದೂರುದಾರೆಯ ದೂರು ಆಧರಿಸಿ ಚಿಕ್ಕಬಳ್ಳಾಪುರ ಸಿಇಎನ್‌ ಠಾಣಾ ಪೊಲೀಸರು ಬಿಎನ್‌ಎಸ್‌ ಸೆಕ್ಷನ್‌ 318(4) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66(D) ಅಡಿದಾಖಲಿಸಿದ್ದ ಎಫ್‌ಐಆರ್‌ ರದ್ದು ಕೋರಿ ಸುರೇಶ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

E Suresh Vs State of Karnataka.pdf
Preview