ಮಾಹಿತಿ ಹಕ್ಕು ಕಾಯಿದೆಯಡಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಲೇವಾರಿಗೆ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಲ್ಲಿ ಮಾಜಿ ಮಾಹಿತಿ ಆಯುಕ್ತ ರವೀಂದ್ರ ಡಾಕಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ನಿರಾಕರಿಸಿದೆ.
ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ರವೀಂದ್ರ ಢಾಕಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ನಿರಾಕರಿಸಿದೆ.
“ಆರೋಪ ಸಾಬೀತುಪಡಿಸಲು ಧ್ವನಿ ರೆಕಾರ್ಡಿಂಗ್ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಪುರಾವೆಗಳಿವೆ. ತನಿಖೆ ನಡೆಸಬೇಕಾದ ಅಗತ್ಯವಿದೆ. ದೂರುದಾರರು ತಪ್ಪಾಗಿ ಹಣ ವರ್ಗಾವಣೆ ಮಾಡಿದ್ದು ತಕ್ಷಣ ಹಿಂದಿರುಗಿಸಿರುವುದಾಗಿ ತಿಳಿಸಿದ್ದಾರೆ. ಇದರ ಸಂಪೂರ್ಣ ತನಿಖೆಯಾಗಬೇಕಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಡಾಕಪ್ಪ ಪರ ವಕೀಲರ ಪಿ ಎನ್ ಹೆಗ್ಡೆ ಅವರು “ದೂರುದಾರರು ಆರೋಪಿಸಿರುವ ಮೊತ್ತವನ್ನು ಸಾಯಿ ಹರ್ಷ ಅವರ ಐಸಿಐಸಿಐ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು. ಹಣ ವರ್ಗಾವಣೆ ತಪ್ಪಾಗಿದೆ ಎಂದು ಗೊತ್ತಾಗಿ ಹಣವನ್ನು ಮೂರು ನಿಮಿಷಗಳಲ್ಲಿ ದೂರುದಾರರ ಬ್ಯಾಂಕ್ ಖಾತೆಗೆ ಮರಳಿಸಲಾಗಿದೆ. ಆರೋಪ ಸಂಬಂಧ ಧ್ವನಿ ಸಂಗ್ರಹವನ್ನು ಪಡೆದುಕೊಳ್ಳುವುದಕ್ಕೂ ಮುನ್ನ ಎಫ್‌ಐಆರ್ ದಾಖಲಿಸಿಲ್ಲ. ದೂರುದಾರರು ಪ್ರಕರಣ ದಾಖಲಿಸುವುದಕ್ಕೂ ಮುನ್ನ ಧ್ವನಿಯನ್ನು ಹಸ್ತಾಂತರಿಸಲು ವಿಫಲರಾಗಿದ್ದಾರೆ. ದೂರು ನೀಡಿರುವ ಸಂಬಂಧದ ಸತ್ಯಾಸತ್ಯತೆಯ ಸಂಬಂಧ ಸಾಕಷ್ಟು ಅನುಮಾನಗಳಿದ್ದು, ಪ್ರಕರಣ ರದ್ದುಗೊಳಿಸಬೇಕು” ಎಂದು ಕೋರಿದ್ದರು.
ಲೋಕಾಯುಕ್ತ ಪರ ವಕೀಲ ಗೌರೀಶ್ ಖಾಶಂಪುರ ಅವರು “ದೂರುದಾರ ಮತ್ತು ಅರ್ಜಿದಾರರ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದೆ. ಒಟ್ಟು 9 ನಿಮಿಷಗಳು ಮೊಬೈಲ್‌ನಲ್ಲಿ ಮಾತುಕತೆ ನಡೆಸಿದ್ದಾರೆ. ಈ ಪೈಕಿ ಒಂದು ಕರೆಯಲ್ಲಿ ಒಂದು ಲಕ್ಷ ರೂಪಾಯಿ ಸಂಬಂಧ ಚರ್ಚೆ ನಡೆಸಿದ್ದಾರೆ. ಆದ್ದರಿಂದ ಅರ್ಜಿ ವಜಾಗೊಳಿಸಿ ತನಿಖೆಗೆ ಅವಕಾಶ ನೀಡಬೇಕು” ಎಂದು ಕೋರಿದರು.
ಪ್ರಕರಣದ ಹಿನ್ನೆಲೆ: ದೂರುದಾರ ಸಾಯಿಬಣ್ಣ ಅವರು ಹಲವು ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಿದ್ದು, ಈ ಪೈಕಿ ಸಾಕಷ್ಟು ಮೇಲ್ಮನವಿಗಳಾಗಿ ಪರಿವರ್ತನೆಯಾಗಿದ್ದು, ಮಾಹಿತಿ ಆಯೋಗದ ಮುಂದಿದ್ದವು. 117 ಅರ್ಜಿಗಳನ್ನು ರಾಜ್ಯ ಮಾಹಿತಿ ಆಯುಕ್ತರು12.2.2025ರಂದು ತಿರಸ್ಕರಿಸಿದ್ದು, ಸಾಯಿಬಣ್ಣ ಅವರ ಹೆಸರನ್ನು ಬ್ಲಾಕ್‌ಲಿಸ್ಟ್‌ಗೆ ಸೇರ್ಪಡೆ ಮಾಡಲಾಗಿತ್ತು. ತಾನು ಸಲ್ಲಿಸಿದ್ದ 118 ಅರ್ಜಿಗಳನ್ನು ಡಾಕಪ್ಪ ವಜಾಗೊಳಿಸಿದ್ದಾರೆ ಎಂದು ದೂರುದಾರ ಸಾಯಿಬಣ್ಣ ದೂರಿದ್ದರು.
ಹೊಸ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಾಯಿಬಣ್ಣ ಅವರಿಗೆ ಡಾಕಪ್ಪ ನೋಟಿಸ್ ಜಾರಿಗೊಳಿಸಿದ್ದರು. ಈಚೆಗೆ ತಾನು ಸಲ್ಲಿಸಿದ್ದ ಮೇಲ್ಮನವಿಗಳನ್ನು ಢಾಕಪ್ಪ ವಜಾಗೊಳಿಸಿದ್ದಕ್ಕೆ ಸಂಬಂಧಿಸಿದಂತೆ ಅವರ ಬಳಿಯೇ ಸಾಯಿಬಣ್ಣ ಕಾನೂನು ಸಲಹೆ ಕೋರಿದ್ದರು. ಇದಕ್ಕಾಗಿ ಡಾಕಪ್ಪ ಅವರು ₹3 ಲಕ್ಷವನ್ನು ಲಂಚವಾಗಿ ನೀಡಬೇಕು ಅದನ್ನು ಸಾಯಿ ಹರ್ಷ ಅವರ ಐಸಿಐಸಿಐ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು ಎಂದು ಹೇಳಿದ್ದರು ಎಂದು ಆರೋಪಿಸಲಾಗಿತ್ತು.
25.3.2025ರಂದು ಢಾಕಪ್ಪ ಅವರ ಮುಂದೆ ಸಾಯಿಬಣ್ಣ ಹಾಜರಾಗಿದ್ದು, ಮೇಲ್ಮನವಿಯನ್ನು ಆದೇಶಕ್ಕೆ ಕಾಯ್ದಿರಿಸಲಾಗಿತ್ತು. ಅಲ್ಲದೇ, ಅಂದು ಸಂಜೆ ಭೇಟಿ ಮಾಡುವಂತೆ ಸಾಯಿಬಣ್ಣಗೆ ಡಾಕಪ್ಪ ಸೂಚಿಸಿದ್ದರು. ಇದರಿಂದ ಬಾದಿತರಾದ ಸಾಯಿಬಣ್ಣ ಅವರು ಲೋಕಾಯುಕ್ತಕ್ಕೆ 27.3.2025ರಂದು ದೂರು ನೀಡಿದ್ದರು.
ಇದರ ಭಾಗವಾಗಿ ಟ್ರ್ಯಾಪ್ ಸಿದ್ಧಪಡಿಸಿದ್ದ ಲೋಕಾಯುಕ್ತ ಪೊಲೀಸರು ಸಾಯಿಬಣ್ಣಗೆ ₹1 ಲಕ್ಷವನ್ನು ಸಾಯಿ ಹರ್ಷ ಅವರ ಐಸಿಐಸಿಐ ಖಾತೆಗೆ ವರ್ಗಾಯಿಸುವಂತೆ ಸೂಚಿಸಿದ್ದರು. ಇದನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ವರ್ಗಾಯಿಸಲಾಗಿತ್ತು. ತಪ್ಪಾಗಿ ಹಣ ವರ್ಗಾಯಿಸಿದ್ದು, ಮೂರೇ ನಿಮಿಷಗಳಲ್ಲಿ ಅದನ್ನು ಮರಳಿಸಲಾಗಿದೆ ಎಂದು ಡಾಕಪ್ಪ ಆಕ್ಷೇಪಿಸಿದ್ದರು.
ತನಿಖೆಯ ಸಂದರ್ಭದಲ್ಲಿ ಸಾಯಿಬಣ್ಣ ಮತ್ತು ಡಾಕಪ್ಪ ಅವರು ಮೊಬೈಲ್‌ನಲ್ಲಿ ಹಲವು ಬಾರಿ ಮಾತುಕತೆ ನಡೆಸಿರುವುದು ಪತ್ತೆಯಾಗಿದ್ದು, ಈ ಪೈಕಿ ಒಂದು ಕರೆಯಲ್ಲಿ ಡಾಕಪ್ಪ ಅವರು ₹1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪ್ರಾಸಿಕ್ಯೂಷನ್ ವಾದಿಸಿದೆ.