ವಿದ್ಯಾರ್ಥಿನಿಯೊಬ್ಬರಿಂದ ₹ 50 ಲಕ್ಷ ಕಾಲೇಜು ಅಭಿವೃದ್ಧಿ ಶುಲ್ಕ ಸಂಗ್ರಹಿಸಿ ದುರುಪಯೋಗಪಡಿಸಿಕೊಂಡಿರುವ ಸಂಬಂಧ ವಂಚನೆ ಹಾಗೂ ನಂಬಿಕೆ ದ್ರೋಹ ಎಸಗಿದ ಆರೋಪದ ಮೇಲೆ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಾ.ಅಪ್ಪಾಜಿ ಗೌಡ ವಿರುದ್ಧದ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ.
ಮೊದಲನೇ ಆರೋಪಿಯಾಗಿರುವ ಅಪ್ಪಾಜಿ ಗೌಡ ತಮ್ಮ ವಿರುದ್ಧದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠ ವಜಾಗೊಳಿಸಿದೆ.
ಅರ್ಜಿದಾರ ಸೇರಿದಂತೆ ಪ್ರಕರಣದ ಇತರೆ ಆರೋಪಿಗಳು ರಾಜ್ಯ ಒಕ್ಕಲಿಗರ ಸಂಘದ ಮಾಜಿ ಪದಾಧಿಕಾರಿಗಳಾಗಿದ್ದಾರೆ. ವಿದ್ಯಾರ್ಥಿಯಿಂದ ಕಾಲೇಜು ಅಭಿವೃದ್ಧಿ ಶುಲ್ಕ ಸಂಗ್ರಹಿಸಿ, ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಕಾಲೇಜನ್ನು (ಕಿಮ್ಸ್) ನಡೆಸುತ್ತಿರುವ ಸಂಘಕ್ಕೆ ಪಾವತಿಸಿಲ್ಲ ಎಂಬುದು ಅವರ ಮೇಲಿನ ಆರೋಪವಾಗಿದೆ.
ದೂರು ಪರಿಶೀಲಿಸಿದಾಗ ಅರ್ಜಿದಾರರ ಮೇಲಿನ ಆರೋಪಗಳಲ್ಲಿ ಹುರುಳಿಲ್ಲ ಎಂದು ಮೇಲ್ನೋಟಕ್ಕೆ ಹೇಳಲು ಸಾಧ್ಯವಿಲ್ಲ. ಮೇಲಾಗಿ ವಿದ್ಯಾರ್ಥಿಯಿಂದ ಸಂಗ್ರಹಿಸಿದ ಹಣವನ್ನು ಬಳಸಿಕೊಳ್ಳುವ ಮೂಲಕ ನಂಬಿಕೆ ದ್ರೋಹ ಹಾಗೂ ವಂಚನೆ ಮಾಡಲಾಗಿದೆ ಎಂಬುದು ದೂರಿನಲ್ಲಿ ಸ್ಪಷ್ಟವಾಗಿ ಆರೋಪಿಸಲಾಗಿದೆ. ಪೊಲೀಸರು ಸಹ ಈಗಾಗಲೇ ತನಿಖೆ ಪೂರ್ಣಗೊಳಿಸಿ ಆರೋಪಪಟ್ಟಿ ಸಲ್ಲಿಸಿದ್ದು, ವಿಚಾರಣಾಧೀನ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಬೇಕಿದೆ. ಆದ್ದರಿಂದ, ಅರ್ಜಿದಾರ ಮೇಲಿನ ದೂರು ರದ್ದುಪಡಿಸಲು ಅರ್ಹವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಬೆಂಗಳೂರಿನ ವಿವಿ ಪುರಂ ಠಾಣೆಯಲ್ಲಿ ಒಕ್ಕಲಿಗರ ಸಂಘದ ಮುಖ್ಯ ಕಾರ್ಯಕಾರಿ ಅಧಿಕಾರಿಯಾಗಿದ್ದ ಡಾ.ಸಿದ್ದರಾಮಯ್ಯ ಎಂಬುವವರು 2021ರ ಅಕ್ಟೋಬರ್ 11ರಂದು ರಾಜ್ಯ ಒಕ್ಕಲಿಗರ ಸಂಘದ ಮಾಜಿ ಮುಖ್ಯಸ್ಥರು, ಅಧ್ಯಕ್ಷರ ವಿರುದ್ಧ ದೂರು ಸಲ್ಲಿಸಿದ್ದರು. ಸಂಘದ ಮಾಜಿ ಅಧ್ಯಕ್ಷರಾಗಿದ್ದ ಅಪ್ಪಾಜಿ ಗೌಡ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದರು.
ಒಕ್ಕಲಿಗರ ಸಂಘದ ಒಡೆತನದ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸಾಕ್ಷಿ ಎಂಬ ವಿದ್ಯಾರ್ಥಿನಿ ಎಂಬಿಬಿಎಸ್ ಕೋರ್ಸ್‌ಗೆ ದಾಖಲಾಗಿದ್ದರು. ಅವರಿಂದ ಆರೋಪಿಗಳು ಅಭಿವೃದ್ಧಿ ಶುಲ್ಕ ಎಂದು ₹50 ಲಕ್ಷ ಹಣ ಪಡೆದುಕೊಂಡು, ದುರುಪಯೋಗಪಡಿಸಿಕೊಂಡಿದ್ದರು. ನಂತರ ಅಭಿವೃದ್ಧಿ ಶುಲ್ಕ ಪಾವತಿಸಿಲ್ಲ ಎಂದು ಹೇಳಿ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಸಂಘ ಅನುಮತಿ ನೀಡಿರಲಿಲ್ಲ. ಇದರಿಂದ ವಿದ್ಯಾರ್ಥಿನಿ ಪರ ಅರ್ಜಿದಾರರು ಸಂಘವನ್ನು ಸಂಪರ್ಕಿಸಿ ಎನ್‌ಒಸಿ ನೀಡುವ ಮೂಲಕ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಲು ಕೋರಿದ್ದರು. ಜೊತೆಗೆ, ₹30 ಲಕ್ಷ ಮೊತ್ತಕ್ಕೆ ಚೆಕ್ ನೀಡಿದ್ದರು ಆದರೆ, ಖಾತೆಯಲ್ಲಿ ಹಣವಿಲ್ಲದ ಕಾರಣಕ್ಕೆ ಚೆಕ್ ಬೌನ್ಸ್ ಆಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ತನಿಖೆ ನಡೆಸಿದ್ದ ಪೊಲೀಸರು, ನಂಬಿಕೆ ದ್ರೋಹ ಹಾಗೂ ವಂಚನೆ ಆರೋಪ ಸಂಬಂಧ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿ 2022ರ ನವೆಂಬರ್ 9ರಂದು ಬೆಂಗಳೂರಿನ 3ನೇ ಎಸಿಎಂಎ ನ್ಯಾಯಾಲಯ ಆದೇಶಿಸಿತ್ತು. ಇದರಿಂದ ತಮ್ಮ ವಿರುದ್ಧದ ದೂರು ಹಾಗೂ ವಿಚಾರಣಾಧೀನ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಅಪ್ಪಾಜಿ ಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.