Mahesh Joshi, Karnataka HC 
ಸುದ್ದಿಗಳು

ಕನ್ನಡ ಸಾಹಿತ್ಯ ಪರಿಷತ್‌ನ ಆರ್ಥಿಕ ವಹಿವಾಟಿನ ತನಿಖೆಗೆ ತಡೆ ನೀಡಲು ನಿರಾಕರಿಸಿದ ಹೈಕೋರ್ಟ್‌

ಕಡತದಲ್ಲಿನ ಅಂಶಗಳನ್ನು ನೋಡಿದರೆ ತನಿಖೆಗೆ ಆದೇಶಿಸುವಾಗ ವಿವೇಚನೆ ಬಳಸಲಾಗಿದೆ. ಹೀಗಾಗಿ, ತನಿಖೆ ತಡೆ ನೀಡುವುದಕ್ಕೆ ಯಾವುದೇ ಆಧಾರವಿಲ್ಲ ಎಂದು ನ್ಯಾಯಾಲಯ ಹೇಳಿದ್ದು, ತನಿಖಾ ಪ್ರಕ್ರಿಯೆಯು ಪೀಠ ಹೊರಡಿಸುವ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದಿದೆ.

Bar & Bench

ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) 2023-24ನೇ ಸಾಲಿನ ಆರ್ಥಿಕ ವಹಿವಾಟಿನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಸ್ಪಷ್ಟವಾಗಿ ನಿರಾಕರಿಸಿದೆ. ಆದರೆ, ಕಾರ್ಯಕಾರಿ ಸಮಿತಿಯ ನಿರ್ಧಾರದ ಪ್ರಕಾರ ಬೆಂಗಳೂರು ಅಥವಾ ರಾಜ್ಯದ ಯಾವುದೇ ಸ್ಥಳದಲ್ಲಿ ವಾರ್ಷಿಕ ಸರ್ವ ಸದಸ್ಯರ ಸಭೆ ನಡೆಸುವ ಅಧಿಕಾರ ಕಸಾಪಗೆ ಇದೆ ಎಂದು ಘೋಷಿಸಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ 2023-24ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಭೆ ರದ್ದುಪಡಿಸಿದ್ದ ಬೆಂಗಳೂರು ನಗರ ಜಿಲ್ಲೆಯ ಎರಡನೇ ವಲಯದ ಸಹಕಾರ ಸಂಘಗಳ ಉಪನಿಬಂಧಕರು ಪರಿಷತ್ತಿನ ಪದಾಧಿಕಾರಿಗಳ ಕಾರ್ಯವೈಖರಿ, ಅನುದಾನ ಮತ್ತು ಖರ್ಚು-ವೆಚ್ಚಗಳ ಕುರಿತು ವಿಚಾರಣೆ ನಡೆಸಲು ತನಿಖಾಧಿಕಾರಿ ನೇಮಕ ಮಾಡಿ 2025ರ ಜೂನ್ 26 ಹಾಗೂ 30ರಂದು ಸಂಘಗಳ ನೋಂದಣಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ತಡೆ ಕೋರಿ ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಸಲ್ಲಿಸಿದ್ದ ಅರ್ಜಿಯ ಕೋರಿಕೆಯ ಸಂಬಂಧ ಕಾಯ್ದಿರಿಸಿದ್ದ ಮಧ್ಯಂತರ ಆದೇಶವನ್ನು ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ಪ್ರಕಟಿಸಿತು.

Justice S Sunil Dutt Yadav

ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯಿದೆ ಸೆಕ್ಷನ್‌ 25ರ ಅಡಿಯ ಪ್ರಸ್ತಾವಿತ ತನಿಖೆಗೆ ಸಂಬಂಧಿಸಿದಂತೆ ಸಹಕಾರ ಸಂಘಗಳ ಉಪನಿಬಂಧಕರು ನಿರ್ವಹಿಸಿರುವ ಕಡತವನ್ನು ನ್ಯಾಯಾಲಯದ ಮುಂದೆ ಇಡಲಾಗಿದೆ. ಕಡತದಲ್ಲಿನ ಅಂಶಗಳನ್ನು ನೋಡಿದರೆ ತನಿಖೆಗೆ ಆದೇಶಿಸುವಾಗ ವಿವೇಚನೆ ಬಳಸಲಾಗಿದೆ. ಹೀಗಾಗಿ, ತನಿಖೆ ತಡೆ ನೀಡುವುದಕ್ಕೆ ಯಾವುದೇ ಆಧಾರವಿಲ್ಲ ಎಂದು ನ್ಯಾಯಾಲಯ ಹೇಳಿದ್ದು, ತನಿಖಾ ಪ್ರಕ್ರಿಯೆಯು ಪೀಠ ಹೊರಡಿಸುವ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದೂ ಹೇಳಿದೆ.

ತನ್ನ ಸದಸ್ಯರು ಎತ್ತುವ ವಿಚಾರಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕಸಾಪವು ಸೂಕ್ತ ರೀತಿಯಲ್ಲಿ ವಿವೇಚನೆ ಬಳಸುವುದರ ಜೊತೆಗೆ ಕಸಾಪ ಬೈಲಾ ಪ್ರಕಾರ ಕ್ಲಾಸ್‌ 30(5) ಅಡಿ ಪದತ್ತವಾಗಿರುವ ಅಧಿಕಾರದ ಪ್ರಕಾರ ಪರಿಷತ್‌ನ ಕಾರ್ಯಕಾರಿ ಸಮಿತಿಯು ಬೆಂಗಳೂರು ಅಥವಾ ರಾಜ್ಯದ ಬೇರಾವುದೇ ಸ್ಥಳದಲ್ಲಿ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ನಡೆಸಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಮಧ್ಯಂತರ ಕೋರಿಕೆಯನ್ನು ಪರಿಗಣಿಸುವುದರ ಭಾಗವಾಗಿ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ನಿರ್ಣಾಯಕ ಎಂದು ಭಾವಿಸಬೇಕಿಲ್ಲ ಎಂದು ಬಿಡಿಸಿ ಹೇಳುವ ಅಗತ್ಯವಿಲ್ಲ ಎಂದೂ ನ್ಯಾಯಾಲಯ ಹೇಳಿದ್ದು, ಎರಡು ವಾರಗಳ ಕಾಲ ವಿಚಾರಣೆ ಮುಂದೂಡಿದೆ.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ದೂರುಗಳಿಗೆ ಪ್ರತಿಕ್ರಿಯಿಸಲು ಕಸಾಪಗೆ ಹಲವು ಅವಕಾಶ ನೀಡಿದ್ದರೂ ದೂರುಗಳನ್ನು ಕಾರ್ಯಕಾರಿ ಸಮಿತಿಯ ಮುಂದಿಟ್ಟು ಚರ್ಚಿಸಿದ ಬಳಿಕ ಪ್ರತಿಕ್ರಿಯಿಸಲಾಗುವುದು ಎಂದು ನುಣುಚಿಕೊಂಡಿದೆ. ಶಾಸನಬದ್ಧವಾಗಿ ಕಾಯಿದೆಯ ಸೆಕ್ಷನ್‌ 25ರ ಅನ್ವಯ ತನಿಖೆಗೆ ಆದೇಶಿಸಲಾಗಿದೆ. ತನಿಖೆ ನಡೆಸುವ ಅಧಿಕಾರ ಸಹಾಕರ ಸಂಘಗಳ ಉಪನಿಬಂಧಕರಿಗೆ ಇದ್ದು, ಅವರು ಸ್ವಯಂಪ್ರೇರಿತವಾಗಿ ತನಿಖೆಗೆ ಆದೇಶಿಸಿದ್ದಾರೆ" ಎಂದು ವಿವರಿಸಿದರು.

ಮುಂದುವರೆದು, "ಉಪನಿಬಂಧಕರು ತನಿಖೆಗೆ ಆದೇಶಿಸುವಾಗ ಕರ್ನಾಟಕ ಸೊಸೈಟಿಗಳ ನೋಂದಣಿ ನಿಯಮಗಳು ನಿಯಮ 8ರ ಅಡಿ ನಡೆಯಬೇಕಿದ್ದು, ಅದರ ಅನ್ವಯ ತನಿಖೆಗೆ ಪ್ರಸ್ತಾವಿಸಲಾಗಿದೆ. ಹಾಲಿ ಪ್ರಕರಣದಲ್ಲಿ ಎನ್‌ ಹನುಮೇಗೌಡ ಎಂಬವರು ನೀಡಿರುವ ದೂರಿಗೆ ಸಂಬಂಧಿಸಿದಂತೆ 25.04.2025ರಂದು ಕಸಾಪಗೆ ನೋಟಿಸ್‌ ನೀಡಲಾಗಿತ್ತು. ಆನಂತರ 12.05.2025 ಮತ್ತು 10.06.2005ರಂದು ಹಿಂದಿನ ದೂರು ಮತ್ತು ಇತರ ದೂರುಗಳಿಗೆ ಸಂಬಂಧಿಸಿದಂತೆ ಕಸಾಪ ಪ್ರತಿಕ್ರಿಯೆ ಕೇಳಲಾಗಿತ್ತು. ಆದರೆ, 20.05.2025ರಂದು ಕಸಾಪವು ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿದ ಬಳಿಕ ಉತ್ತರಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿತ್ತು. 29.06.2025ರಂದು ಕಾರ್ಯಕಾರಿ ಸಭೆ ನಡೆಯಲಿದ್ದು, ಅಲ್ಲಿ ಚರ್ಚಿಸಿ ಉತ್ತರಿಸಲಾಗುವುದು ಎಂದು 18.06.2025ರಂದು ಕಸಾಪ ಮತ್ತೊಂದು ಪ್ರತಿಕ್ರಿಯೆ ಸಲ್ಲಿಸಿತ್ತು. ಕಸಾಪ ಪ್ರತಿಕ್ರಿಯೆ ಪರಿಗಣಿಸಿದ ಬಳಿಕ ಸ್ವಯಂಪ್ರೇರಿತ ಅಧಿಕಾರವನ್ನು ಚಲಾಯಿಸುವ ನಿರ್ಧಾರವನ್ನು ಉಪನಿಬಂಧಕರು 30.06.2025ರಂದು ಕೈಗೊಂಡಿದ್ದು, ಅರ್ಜಿದಾರರ ಪ್ರತಿಕ್ರಿಯೆಗೆ ಬದಲಾಗಿ ತನಿಖೆಗೆ ಆದೇಶಿಸಲಾಗಿತ್ತು" ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಅಲ್ಲದೆ, " ಈ ನೆಲೆಯಲ್ಲಿ ನಿರ್ಧಾರ ಕೈಗೊಂಡಿರುವ ದಾಖಲೆಗಳನ್ನು ನ್ಯಾಯಾಲಯ ನೋಡಬೇಕಿದೆ. ತನಿಖೆ ನಡೆಸುವುದು ಸೂಕ್ತ ಎಂದು ಭಾವಿಸಿ, ಉಪನಿಬಂಧಕರು ತನಿಖೆಗೆ 17 ಅಂಶಗಳನ್ನು ಉಲ್ಲೇಖಿಸಿದ್ದು, ಸ್ವಯಂಪ್ರೇರಿತವಾಗಿ ತನಿಖೆಗೆ ಆದೇಶಿಸಿದ್ದಾರೆ” ಎಂದು ಸಮರ್ಥಿಸಿದರು.

ಕಸಾಪ ಮತ್ತು ಮಹೇಶ್‌ ಜೋಶಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್‌ ಅವರು “ಕಾರ್ಯಕಾರಿ ಸಮಿತಿಯು ನಿರ್ಧರಿಸಿದ ರಾಜ್ಯದ ಯಾವುದೇ ಸ್ಥಳದಲ್ಲಿ ವಾರ್ಷಿಕ ಸರ್ವ ಸದಸ್ಯರ ಸಭೆ ನಡೆಸುವ ಅಧಿಕಾರ ಪರಿಷತ್‌ಗೆ ಬೈಲಾದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಸಾಕಷ್ಟು ವಿವೇಚನೆ ನಡೆಸಿದ ಬಳಿಕ ಮಾತ್ರ ಸ್ವಯಂಪ್ರೇರಿತವಾಗಿ ತನಿಖೆ ನಡೆಸಬಹುದಾಗಿದ್ದು, ಹಣಕಾಸಿನ ಆಡಿಟ್‌ ಅನ್ನು ಸಾಮಾನ್ಯ ಸಭೆಯು ಒಪ್ಪಿದ ಬಳಿಕ ಮಾತ್ರ ಲೆಕ್ಕಪತ್ರಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಬಹುದಾಗಿದೆ. ಇಲ್ಲಿ ಸಹಕಾರ ಸಂಘಗಳ ಉಪನಿಬಂಧಕರು ಆವೇಗದಲ್ಲಿ ತನಿಖೆಗೆ ಆದೇಶಿಸಿದ್ದಾರೆ” ಎಂದು ಆಕ್ಷೇಪಿಸಿದ್ದರು.

ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 2025ರ ಜೂನ್ 29ರಂದು ಆಯೋಜಿಸಲು ಉದ್ದೇಶಿಸಲಾಗಿದ್ದ 2023-24ನೇ ಸಾಲಿನ ಕಸಾಪ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ರದ್ದುಪಡಿಸಿ ಜೂನ್‌ 27ರಂದು ಸಹಕಾರ ಸಂಘಗಳ ಉಪನಿಬಂಧಕರು ಆದೇಶಿಸಿದ್ದರು. ಹಾಗೆಯೇ, 2023-24ರಿಂದ ಇಲ್ಲಿವರೆಗೆ ಪರಿಷತ್ತು ಅನುಮೋದಿಸಿರುವ ತಿದ್ದುಪಡಿಗಳು, ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಪರಿಷತ್ತಿನ ಅಧ್ಯಕ್ಷರು ನಿಯಮಬಾಹಿರವಾಗಿ ನೀಡಿರುವ ನೋಟಿಸ್‌ಗಳು, 2023-24ನೇ ಸಾಲಿನಲ್ಲಿ ಪರಿತ್ತಿಗೆ ಸಂಗ್ರಹವಾಗಿರುವ ಆದಾಯವನ್ನು ದುರುಪಯೋಗ ಮಾಡಿಕೊಂಡಿರುವುದು, ಈ ಅವಧಿಯಲ್ಲಿನ ಖರೀದಿ ಮತ್ತು ಮಾರಾಟದಲ್ಲಿ ಆಗಿರುವ ಅವ್ಯವಹಾರ ಮತ್ತಿತರ ವಿಷಯಗಳ ತನಿಖೆಗೆ ಬೆಂಗಳೂರು ನಗರ ಜಿಲ್ಲಾ 2ನೇ ವಲಯದ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಹಕಾರ ಸಂಘಗಳ ನೋಂದಣಾಧಿಕಾರಿ 2025ರ ಜೂನ್ 30ರಂದು ಆದೇಶಿಸಿದ್ದರು. ಇವುಗಳನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

KASAPA Vs State of Karnataka.pdf
Preview