ಗೂಗಲ್ ಸಂಸ್ಥೆಯು ಕರ್ನಾಟಕ ಹೈಕೋರ್ಟ್‌ನಲ್ಲಿ ದಾವೆ ಹೂಡಿರುವುದನ್ನು ಪ್ರಶ್ನಿಸಿ ಪ್ರತಿವಾದಿ ಅಲಯನ್ಸ್ ಆಫ್ ಡಿಜಿಟಲ್ ಇಂಡಿಯಾ ಫೌಂಡೇಶನ್ ಸಲ್ಲಿಸಿದ್ದ ಮಧ್ಯಕಾಲೀನ ಅರ್ಜಿಯನ್ನು (ಇಂಟರ್‌ಲೊಕ್ಯುಟರಿ ಅಪ್ಲಿಕೇಶನ್) ಶುಕ್ರವಾರ ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ಗೂಗಲ್ ಕರ್ನಾಟಕದ ಬದಲಿಗೆ ದೆಹಲಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಬೇಕಿತ್ತು ಎಂಬುದು ಎಡಿಐಎಫ್ ವಾದವಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಜಿ ಪಂಡಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ಮಧ್ಯಂತರ ತಡೆಯಾಜ್ಞೆ ಮುಂದುವರಿಸಲು ಆದೇಶ ಮಾಡಿದ್ದು, ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.
ಕಳೆದ ವಿಚಾರಣೆಯಲ್ಲಿ ಎಡಿಎಫ್‌ಐ ಪ್ರತಿನಿಧಿಸಿದ್ದ ವಕೀಲ ಅಭೀರ್ ರಾಯ್ ಅವರು “ಮೊದಲಿಗೆ ಮನವಿಯ ವ್ಯಾಪ್ತಿ ನಿರ್ಧರಿಸಬೇಕು” ಎಂದು ಕೋರಿದ್ದರು.
ಗೌಪ್ಯತಾ ವಲಯದೊಳಗೆ ಪ್ರತಿವಾದಿಗಳಾದ ಅಲಯನ್ಸ್ ಆಫ್ ಡಿಜಿಟಲ್ ಇಂಡಿಯಾ ಫೌಂಡೇಶನ್ ಅನ್ನು (ಎಡಿಐಎಫ್) ಸೇರಿಸಿಕೊಂಡು ಅವರ ಜೊತೆ ಗೌಪ್ಯ ಮಾಹಿತಿ ಹಂಚಿಕೊಳ್ಳುವಂತೆ ನಿರ್ದೇಶಿಸಿದ್ದ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಆದೇಶಕ್ಕೆ ಮೇ 10ರಂದು ಹೈಕೋರ್ಟ್ ತಡೆ ವಿಧಿಸಿತ್ತು.
ಗೌಪ್ಯ ಮಾಹಿತಿಯನ್ನು ಎಡಿಐಎಫ್ ಪಡೆಯಲು ಈಗ ಅನುಮತಿಸಲಾಗದು. ಸಿಸಿಐ ಮುಂದಿರುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಗೂಗಲ್ ಸಂಸ್ಥೆಯು ಕಾಲಾನುಕ್ರಮ (ಟೈಮ್‌ಲೈನ್) ಪಾಲಿಸಬೇಕು. ಇಲ್ಲಿನ ಯಾವುದೇ ಅಭಿಪ್ರಾಯವು ಅಂತಿಮ ಎಂದು ಪರಿಗಣಿಸಬೇಕಿಲ್ಲ. ಇದು ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಪೀಠವು ಆದೇಶದಲ್ಲಿ ಹೇಳಿತ್ತು.
2022ರ ಏಪ್ರಿಲ್ 18ರಂದು ಎಡಿಐಎಫ್‌ಗೆ ಗೌಪ್ಯ ಮಾಹಿತಿ ನೀಡಲು ಗೂಗಲ್‌ಗೆ ಸಿಸಿಐ ನಿರ್ದೇಶಿಸಿದೆ. ಇದಕ್ಕೆ ಕಾಯಿದೆಯಲ್ಲಿ ಅವಕಾಶವಿಲ್ಲ ಎಂದು ಅರ್ಜಿದಾರ ಗೂಗಲ್ ಹೇಳಿದೆ. ಆದೇಶ ಮಾಡುವಾಗ ಸಿಸಿಐ ನಿಯಮಗಳನ್ನು ಪಾಲಿಸಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದೂ ಪೀಠವು ಆದೇಶದಲ್ಲಿ ಉಲ್ಲೇಖಿಸಲಾಸಿತ್ತು.
ಅರ್ಜಿಯ ನಿರ್ವಹಣೆ ಕುರಿತು ವಾದ ಆಲಿಸಿ, ನಿರ್ಧಾರ ಮಾಡುವುದು ಸೂಕ್ತ ಎಂದು ಹಿರಿಯ ವಕೀಲರಾದ ಸಜ್ಜನ್ ಪೂವಯ್ಯ ಮತ್ತು ಹರೀಶ್ ನರಸಪ್ಪ ಅವರು ಕಳೆದ ವಿಚಾರಣೆಯಲ್ಲಿ ಪೀಠವನ್ನು ಕೋರಿದ್ದರು.