ವೃದ್ಧೆ ತಾಯಿಯ ಜೀವನ ನಿರ್ವಹಣೆಗಾಗಿ ಮಾಸಿಕ ₹10 ಸಾವಿರ ಪಾವತಿಸುವಂತೆ ಮೈಸೂರು ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ರದ್ದು ಕೋರಿದ್ದ ಆಕೆಯ ಪುತ್ರರಿಬ್ಬರ ಅರ್ಜಿಯನ್ನು ಈಚೆಗೆ ವಜಾಗೊಳಿಸಿರುವ ಕರ್ನಾಟಕ ಹೈಕೋರ್ಟ್, ಅರ್ಜಿದಾರರಿಗೆ ₹5 ಸಾವಿರ ದಂಡ ವಿಧಿಸಿದೆ.
ಮೈಸೂರಿನ ಎನ್ ಆರ್ ಮೊಹಲ್ಲಾದ ನಿವಾಸಿ ಗೋಪಾಲ್ ಮತ್ತು ಮಹೇಶ್ ಅವರು ಜಿಲ್ಲಾಧಿಕಾರಿಯ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾಗೊಳಿಸಿದೆ.
ದಂಡದ ಮೊತ್ತವನ್ನು ಅರ್ಜಿದಾರರಿಬ್ಬರೂ ಒಟ್ಟಾಗಿ ತಮ್ಮ ವೃದ್ಧ ತಾಯಿಗೆ ಒಂದು ತಿಂಗಳೊಳಗೆ ಪಾವತಿಸಬೇಕು. ತಪ್ಪಿದರೆ, ಹಣ ಪಾವತಿಸುವವರೆಗೂ ಪ್ರತಿದಿನ ₹100 ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಇದೇ ವೇಳೆ “ದುಡಿಯಲು ಸಮರ್ಥನಾದ ವ್ಯಕ್ತಿ ತನ್ನ ಪತ್ನಿಯನ್ನು ನೋಡಿಕೊಳ್ಳಬಹುದಾದರೆ, ಅವಲಂಬಿತ ತಾಯಿಯನ್ನೇಕೆ ನೋಡಿಕೊಳ್ಳಬಾರದು” ಎಂದು ಪ್ರಶ್ನಿಸಿರುವ ನ್ಯಾಯಾಲಯವು “ಯುವ ಪೀಳಿಗೆಯ ಒಂದು ವರ್ಗ ವಯಸ್ಸಾದ ಹಾಗೂ ಅನಾರೋಗ್ಯ ಪೀಡಿತ ಪಾಲಕರನ್ನು ನೋಡಿಕೊಳ್ಳಲು ವಿಫಲವಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದೆ.
ಉಪ ವಿಭಾಗಾಧಿಕಾರಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದವರ ವಿರುದ್ಧವೇ ಜಿಲ್ಲಾಧಿಕಾರಿ ತೀರ್ಪು ನೀಡಿದ್ದು, ಐದು ಸಾವಿರ ರೂಪಾಯಿ ಜೀವನಾಂಶ ಮೊತ್ತವನ್ನು ₹10 ಸಾವಿರಕ್ಕೆ ಹೆಚ್ಚಿಸಿದ್ದಾರೆ. ಅಷ್ಟು ಹಣ ಪಾವತಿಸುವಷ್ಟು ಆದಾಯ ಅರ್ಜಿದಾರರಿಗಿಲ್ಲ. ಸದ್ಯ ಅರ್ಜಿದಾರರ ಸಹೋದರಿಯರ ಮನೆಯಲ್ಲಿರುವ ತಾಯಿ ಅಲ್ಲಿಂದ ಹೊರಬಂದರೆ ಆಕೆಯನ್ನು ನೋಡಿಕೊಳ್ಳಲು ಅರ್ಜಿದಾರರು ಸಿದ್ಧರಿದ್ದಾರೆ. ಹೆಣ್ಣು ಮಕ್ಕಳ ಕುಮ್ಮಕ್ಕಿನಿಂದಲೇ ತಾಯಿ ಜೀವನಾಂಶ ಕೇಳುತ್ತಿದ್ದಾರೆ. ಈ ಎಲ್ಲ ವಿಚಾರಗಳನ್ನು ವಿವರಿಸಿದ್ದರೂ ಜೀವನಾಂಶ ಪಾವತಿಸುವಂತೆ ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆದೇಶಿಸಿದ್ದು, ಆ ಆದೇಶಗಳನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದ್ದರು.
ಸಹೋದರಿಯರ ಕುಮ್ಮಕ್ಕುನಿಂದ ತಾಯಿ ಜೀವನಾಂಶ ಕೋರುತಿದ್ದಾರೆ ಎಂಬ ಅರ್ಜಿದಾರರ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್, ಅರ್ಜಿದಾರರು ತಾವು ಮಾಡಿದ ಆರೋಪಕ್ಕೆ ಯಾವುದೇ ಸಾಕ್ಷ್ಯ ಒದಗಿಸಿಲ್ಲ. ಕುಟುಂಬದ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಯಾವುದೇ ಭಾಗ ಕೋರಿಲ್ಲ. ಗಂಡು ಮಕ್ಕಳು ತ್ಯಜಿಸಿರುವ ತಾಯಿಯನ್ನು ಹೆಣ್ಣು ಮಕ್ಕಳು ನೋಡಿಕೊಂಡಿದ್ದಾರೆ. ಇಲ್ಲದಿದ್ದರೆ ತಾಯಿ ರಸ್ತೆಯ ಮೇಲಿರಬೇಕಿತ್ತು ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೆ, ಹತ್ತು ಸಾವಿರ ರೂಪಾಯಿ ಜೀವನಾಂಶ ನೀಡುವುದು ಜಾಸ್ತಿ ಎಂದು ಅರ್ಜಿದಾರರು ಹೇಳುತ್ತಿದ್ದಾರೆ. ನಾವು ರಕ್ತಕ್ಕಿಂತ ರೊಟ್ಟಿ ದುಬಾರಿಯಾಗಿರುವ ಕಾಲದಲ್ಲಿ ಜೀವಿಸುತ್ತಿದ್ದೇವೆ. ಹಣವು ಖರೀದಿಯ ಶಕ್ತಿಯನ್ನು ಕಳೆದುಕೊಂಡಿದೆ. ದಿನ ದಿನಕ್ಕೆ ಬೆಲೆಗಳು ಏರುತ್ತಿವೆ. ಹೀಗಿರುವಾಗ ಹತ್ತು ಸಾವಿರ ಹಣವನ್ನು ಹೆಚ್ಚು ಎಂಬುದಾಗಿ ಹೇಳಲಾಗದು. ದೇಹ ಮತ್ತು ಆತ್ಮವನ್ನು ಹಿಡಿದಿಡಲು ಅಗತ್ಯಕ್ಕಿಂತ ಹೆಚ್ಚು ಹಣ ಬೇಕಾಗುತ್ತದೆ. ಆದರೆ, ಜೀವನಾಂಶವನ್ನು ಹೆಚ್ಚಳ ಮಾಡುವ ಬಗ್ಗೆ ತಾಯಿಯಿಂದ ಯಾವುದೇ ಮನವಿ ಇಲ್ಲ. ಇದರಿಂದ ಜೀನವಾಂಶ ಹೆಚ್ಚಿಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳುತ್ತಿಲ್ಲ ಎಂದು ತಿಳಿಸಿರುವ ಹೈಕೋರ್ಟ್, ಅರ್ಜಿ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ: 84 ವರ್ಷದ ವೃದ್ಧೆ ತಾಯಿ ವೆಂಕಟಮ್ಮ ಅವರ ಜೀವನ ನಿರ್ವಹಣೆಗಾಗಿ ತಲಾ ಐದು ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಆಕೆಯ ಪುತ್ರರಾದ ಅರ್ಜಿದಾರರಿಗೆ ಮೈಸೂರಿನ ಉಪ ವಿಭಾಗಾಧಿಕಾರಿಯು ‘ಪಾಲಕರ ಪೋಷಣೆ, ಸಂರಕ್ಷಣೆ ಮತ್ತು ಹಿರಿಯ ನಾಗರಿಕ ರಕ್ಷಣಾ ಕಾಯಿದೆ ಅಡಿ’ ಆದೇಶ ಹೊರಡಿಸಿದ್ದರು. ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಜಿಲ್ಲಾಧಿಕಾರಿ ಮುಂದೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ವಜಾಗೊಳಿಸಿದ್ದ ಜಿಲ್ಲಾಧಿಕಾರಿಯು ಜೀವನ ಸಂಧ್ಯಾಕಾಲದಲ್ಲಿರುವ ತಾಯಿಗೆ ಪ್ರತಿ ತಿಂಗಳು ತಲಾ ₹10 ಸಾವಿರ ಜೀವನಾಂಶ ನೀಡುವಂತೆ ನಿರ್ದೇಶಿಸಿದ್ದರು. ಈ ಎರಡೂ ಆದೇಶಗಳನ್ನು ರದ್ದುಪಡಿಸುವಂತೆ ಕೋರಿ ವೆಂಕಟಮ್ಮ ಅವರ ಪುತ್ರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಸಹ ಅರ್ಜಿ ವಜಾಗೊಳಿಸಿ, ಜಿಲ್ಲಾಧಿಕಾರಿಯ ಆದೇಶವನ್ನು ಪುರಸ್ಕರಿಸಿದೆ.