ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಪ್ರಭಾರ ಮುಖ್ಯ ಮಾಹಿತಿ ಆಯುಕ್ತರಾಗಿದ್ದು ಈಗ ನಿವೃತ್ತಿ ಹೊಂದಿರುವ ಡಾ. ಎಚ್ ಸಿ ಸತ್ಯನ್ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ನಾಡೋಜ ಪದವಿ ಪ್ರದಾನ ಮಾಡಿರುವುದನ್ನು ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಂಗಳವಾರ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಕಮಿಟಿ ಫಾರ್ ಪಬ್ಲಿಕ್ ಅಕೌಂಟೆಬಿಲಿಟಿ (ರಿ) ಸಂಸ್ಥೆಯ ಅಧ್ಯಕ್ಷ ಎಸ್ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು “ಸತ್ಯನ್ ಅವರ ಮೇಲೆ ಭ್ರಷ್ಟಾಚಾರದ ಆರೋಪ ಇದೆ” ಎಂದರು.
ಇದಕ್ಕೆ ಪೀಠವು “ಭ್ರಷ್ಟಾಚಾರ ಸಾಬೀತಾಗಿದೆಯಾ? ಇಲ್ಲವೆಂದಾದರೆ ಸುಮ್ಮನೆ ಆರೋಪ ಮಾಡಬೇಡಿ. ಇಲ್ಲದಿದ್ದರೆ ದೊಡ್ಡ ಮೊತ್ತದ ದಂಡ ವಿಧಿಸಬೇಕಾದೀತು, ನೀವು (ಅರ್ಜಿದಾರ) ಸಂಕಷ್ಟ ಎದುರಿಸಬೇಕಾದಿತು” ಎಂದು ನ್ಯಾಯಾಲಯ ಎಚ್ಚರಿಸಿತು.
“ಯಾರಿಗೆ ಯಾವ ಪದವಿ ಕೊಡಬೇಕು ಎಂಬ ಬಗ್ಗೆ ನಿರ್ಧರಿಸಲು ವಿಶ್ವವಿದ್ಯಾಲಯ ಸ್ವತಂತ್ರವಾಗಿದೆ. ಇಂತಹ ವಿಷಯದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಬಯಸುವುದಿಲ್ಲ. ಅಷ್ಟಕ್ಕೂ ಈ ಪ್ರಕರಣದಲ್ಲಿ ಅರ್ಜಿದಾರರ ಮೂಲಭೂತ ಹಕ್ಕುಗಳು, ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಆಗುತ್ತಿಲ್ಲ. ಇಂತಹ ಅರ್ಜಿಗಳ ಸಲ್ಲಿಕೆ ನ್ಯಾಯಾಲಯದ ಅಮೂಲ್ಯ ಸಮಯ ಹಾಳು ಮಾಡುವುದು ಬಿಟ್ಟರೆ ಮತ್ತೇನೂ ಇಲ್ಲ” ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.
2026ರ ಫೆಬ್ರವರಿ 24ರಂದು ನಡೆದಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರು ಡಾ. ಎಚ್ ಸಿ ಸತ್ಯನ್ ಅವರಿಗೆ ನಾಡೋಜ ಪ್ರದಾನ ಮಾಡಿದ್ದರು.