KSLU

 
ಸುದ್ದಿಗಳು

ವಯೋಮಿತಿ ಮುಗಿದರೂ ಕೆಎಸ್‌ಎಲ್‌ಯು ಕುಲಪತಿ ಈಶ್ವರ್‌ ಭಟ್‌ ಮುಂದುವರಿಕೆ ಪ್ರಶ್ನಿಸಿದ್ದ ಮನವಿ ತಿರಸ್ಕರಿಸಿದ ಹೈಕೋರ್ಟ್‌

ಅಗತ್ಯವೆನಿಸಿದರೆ ಇದೇ ಕೋರಿಕೆಯನ್ನು ಒಳಗೊಂಡ ಸಾರ್ವಜನಿಕ ಹಿತಾಸಕ್ತಿ ಮನವಿಯ ಮೂಲಕ ಕೊವಾರೆಂಟೊ ಕೋರಲು ಅರ್ಜಿದಾರರಿಗೆ ಸ್ವಾತಂತ್ರ್ಯವಿರುತ್ತದೆ ಎಂದು ಪೀಠವು ಹೇಳಿದೆ.

Bar & Bench

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ (ಕೆಎಸ್‌ಎಲ್‌ಯು) ಕುಲಪತಿ ಪ್ರೊ. ಪಿ ಈಶ್ವರ್‌ ಭಟ್‌ ಅವರನ್ನು ನಿಗದಿತ ವಯೋಮಿತಿ ಮೀರಿದ್ದರೂ ಮುಂದುವರಿಸಲಾಗುತ್ತಿದೆ ಎಂದು ಆಕ್ಷೇಪಿಸಿ ಕಾನೂನು ವಿದ್ಯಾರ್ಥಿಗಳ ಸಂಘ ಸಲ್ಲಿಸಿದ್ದ ಮನವಿಯನ್ನು ಈಚೆಗೆ ಕರ್ನಾಟಕ ಹೈಕೋರ್ಟ್‌ ತಿರಸ್ಕರಿಸಿದೆ (ಕಾನೂನು ವಿದ್ಯಾರ್ಥಿಗಳ ಸಂಘ ವರ್ಸಸ್‌ ಕರ್ನಾಟಕ ರಾಜ್ಯ ಮತ್ತು ಇತರರು).

“ಅರ್ಜಿದಾರ ಸಂಘವು ಕಾನೂನು ವಿದ್ಯಾರ್ಥಿಗಳನ್ನು ಒಳಗೊಂಡಿದ್ದು, ಸಂಘವು ನೋಂದಣಿಯಾಗಿಲ್ಲ. ಒಂದೊಮ್ಮೆ ಸಂಘವು ನೋಂದಣಿಯಾಗಿದ್ದರೂ ಅದರ ಉದ್ದೇಶ ಸದಸ್ಯರ ಹಿತಾಸಕ್ತಿ ರಕ್ಷಿಸುವುದಾಗಿದೆ. ಈಶ್ವರ್‌ ಭಟ್‌ ಅವರನ್ನು ವಿಶ್ವವಿದ್ಯಾಲಯದ ಕುಲಪತಿ ಸ್ಥಾನದಲ್ಲಿ ಮುಂದುವರಿಸುವುದರಿಂದ ಅಥವಾ ನೇಮಕ ಮಾಡುವುದರಿಂದ ಯಾವುದೇ ಒಬ್ಬ ಅಥವಾ ವಿದ್ಯಾರ್ಥಿ ಸಮೂಹದ ಹಿತಾಸಕ್ತಿಗೆ ಧಕ್ಕೆಯಾಗುವುದಿಲ್ಲ” ಎಂದು ನ್ಯಾಯಮೂರ್ತಿ ಆರ್‌ ದೇವದಾಸ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶದಲ್ಲಿ ಹೇಳಿದೆ.

“ಸಾರ್ವಜನಿಕ ಹಿತಾಸಕ್ತಿ ಮನವಿಯ ರೂಪದಲ್ಲಿ ರಿಟ್‌ ಮನವಿಯನ್ನು ಸಲ್ಲಿಸದೇ ಇರುವುದರಿಂದ ಅದು ವಜಾಕ್ಕೆ ಅರ್ಹವಾಗಿದೆ” ಎಂದು ಪೀಠವು ಹೇಳಿದೆ.

ಕಾನೂನು ವಿದ್ಯಾರ್ಥಿಗಳ ಸಂಘವನ್ನು ಪ್ರತಿನಿಧಿಸಿದ್ದ ವಕೀಲ ಬಿ ಆರ್‌ ವಿಠ್ಠಲ್‌ ಅವರು “ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕಾಯಿದೆ 2009ರ ಸೆಕ್ಷನ್‌ 14ರಲ್ಲಿ ಕುಲಪತಿಯ ಸೇವಾವಧಿಯ ಕುರಿತು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ವಿಶ್ವವಿದ್ಯಾಲಯದಲ್ಲಿನ ದಾಖಲೆಗಳ ಪ್ರಕಾರ ಈಶ್ವರ್‌ ಭಟ್‌ ಅವರು 1955ರಲ್ಲಿ ಜನಿಸಿದ್ದು, ಅವರಿಗೆ 2020ರಲ್ಲಿ 65 ವರ್ಷ ತುಂಬಿದೆ. ಇದಕ್ಕಾಗಿ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿನ ದಾಖಲೆಗಳನ್ನು ಆಧರಿಸಲಾಗಿದೆ” ಎಂದಿದ್ದರು.

ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ಎಂ ಸಿ ನಾಗಶ್ರೀ ಅವರು “ಸೇವಾ ನಿಯಮಗಳ ವಿಚಾರದಲ್ಲಿ ಸಾರ್ವಜನಿಕ ಹಿತಾಸಕ್ತಿ ಮನವಿಗಳು ನಿರ್ವಹಣೆಗೆ ಅರ್ಹವಲ್ಲ” ಎಂಬುದಕ್ಕೆ ಸುಪ್ರೀಂ ಕೋರ್ಟ್‌ನ ಹಲವಾರು ತೀರ್ಪುಗಳನ್ನು ಉಲ್ಲೇಖಿಸಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಲಯವು ಮನವಿಯನ್ನು ತಿರಸ್ಕರಿಸಿದ್ದು, ಅಗತ್ಯವೆನಿಸಿದರೆ ಇದೇ ಕೋರಿಕೆಯನ್ನು ಒಳಗೊಂಡ ಸಾರ್ವಜನಿಕ ಹಿತಾಸಕ್ತಿ ಮನವಿಯ ಮೂಲಕ ಕೊವಾರೆಂಟೊ (ಸಾರ್ವಜನಿಕ ಹುದ್ದೆಯನ್ನು ಓರ್ವ ವ್ಯಕ್ತಿಯು ಹೊಂದಲು ಕಾನೂನಾತ್ಮಕ ಹಕ್ಕು ಹೊಂದಿದ್ದಾರೆಯೇ ಎನ್ನುವುದನ್ನು ಪರಿಹರಿಸಲು ಇರುವ ವಿಶೇಷ ಕಾನೂನು ಕ್ರಮ) ಕೋರಲು ಅರ್ಜಿದಾರರಿಗೆ ಸ್ವಾತಂತ್ರ್ಯವನ್ನು ಕಲ್ಪಿಸಿದೆ.

2018ರ ಜೂನ್‌ 13ರಂದು ಈಶ್ವರ್‌ ಭಟ್‌ ಅವರನ್ನು ಕೆಎಸ್‌ಎಲ್‌ಯು ಕುಲಪತಿಯನ್ನಾಗಿ ನೇಮಕ ಮಾಡಲಾಗಿದೆ. 65ರ ನಿವೃತ್ತಿ ವಯೋಮಾನ ದಾಟಿರುವ ಬಗ್ಗೆ ಈಶ್ವರ್‌ ಭಟ್‌ ಅವರಿಗೆ ಸ್ಪಷ್ಟ ಅರಿವಿದ್ದರೂ ಅರ್ಹತೆ ಕಳೆದುಕೊಂಡಿದ್ದರೂ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿತ್ತು.

Law Students Association Versus State of Karnataka.pdf
Preview