Justice M Nagaprasanna and Karnataka HC 
ಸುದ್ದಿಗಳು

ಬಾಕಿ ಪಾವತಿಗೆ ವಿಫಲ: ಖಾಸಗಿ ಯೋಜನೆಗೆ ನೀಡಿದ್ದ ಭೂಮಿ ಹಿಂಪಡೆದ ಕೆಐಎಡಿಬಿ ವಿರುದ್ಧದ ಮನವಿ ವಜಾಗೊಳಿಸಿದ ಹೈಕೋರ್ಟ್‌

ಅರ್ಜಿದಾರ ಸಂಸ್ಥೆ ಬಾಕಿ ಹಣವನ್ನು 30 ದಿನಗಳ ಒಳಗೆ ಪಾವತಿ ಮಾಡಿಲ್ಲ. 30 ತಿಂಗಳಾದರೂ ಪಾವತಿಸಿಲ್ಲ. ಅಷ್ಟೇ ಅಲ್ಲದೇ 60 ತಿಂಗಳಾದರೂ ಪಾವತಿ ಮಾಡಿಲ್ಲ ಎಂದ ನ್ಯಾಯಾಲಯ.

Siddesh M S

ಸಾಫ್ಟ್‌ವೇರ್‌ ಡೆವಲಪ್‌ಮೆಂಟ್‌ ಸೆಂಟರ್‌ ಐಟಿ/ಐಟಿಇಎಸ್‌ ಜೊತೆಗೆ ಪೂರಕ ಸೌಲಭ್ಯ ಕಲ್ಪಿಸಲು ಭೂಮಿ (ಪ್ಲಾಟ್‌) ಹಂಚಿಕೆ ಮಾಡಿಸಿಕೊಂಡು ಐದು ವರ್ಷಗಳಾದರೂ ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಭೂಮಿ ಹಂಚಿಕೆ ರದ್ದುಪಡಿಸಿದ್ದ ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಅಭಿವೃದ್ಧಿ ಮಂಡಳಿ ಆದೇಶ ಪ್ರಶ್ನಿಸಿ ಧ್ರುತಿ ಇನ್ಫ್ರಾ ಪ್ರಾಜೆಕ್ಟ್ಸ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ಗೆ ಈಚೆಗೆ ವಜಾ ಮಾಡಿದೆ.

ತನಗೆ ಹಂಚಿಕೆ ಮಾಡಲಾಗಿದ್ದ ಭೂಮಿಯನ್ನು ಬಾಕಿ ಪಾವತಿ ಮಾಡದ ಕಾರಣಕ್ಕೆ ಬೆಂಗಳೂರಿನ ಪ್ರಣೀತ್‌ ಹೋಲ್ಡಿಂಗ್ಸ್‌ಗೆ ಮಂಜೂರು ಮಾಡಿದ್ದ ಕೆಐಎಡಿಬಿ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿ ಬೆಂಗಳೂರಿನ ಧ್ರುತಿ ಇನ್ಫ್ರಾ ಪ್ರಾಜೆಕ್ಟ್ಸ್‌ ಲಿಮಿಟೆಡ್‌ ಸಂಸ್ಥೆಯು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ತಿರಸ್ಕರಿಸಿದೆ.

“ಭೂಮಿ ಹಂಚಿಕೆ ಮಾಡಿರುವುದನ್ನು ರದ್ದುಪಡಿಸುವುದಕ್ಕೆ ಮುನ್ನ ಯಾವುದೇ ನೋಟಿಸ್‌ ನೀಡಿಲ್ಲ ಎಂದು ಅರ್ಜಿದಾರರ ಪರ ಹಿರಿಯ ವಕೀಲರು ವಾದಿಸಿದ್ದಾರೆ. ಆಕ್ಷೇಪಾರ್ಹವಾದ ಪತ್ರದಲ್ಲೇ 9 ನೋಟಿಸ್‌ ನೀಡಲಾಗಿದೆ ಎಂದು ಉಲ್ಲೇಖಿಸಿದ್ದು, ಅರ್ಜಿದಾರರ ನಡತೆಯ ಕುರಿತು ಒಂದು ಪ್ಯಾರಾವನ್ನು ಮೀಸಲಿಡಲಾಗಿದೆ. 9 ನೋಟಿಸ್‌ ನೀಡಿದರೂ ಅರ್ಜಿದಾರರು ಬಾಕಿ ಹಣವನ್ನು ಪಾವತಿಸಿಲ್ಲ ಎಂದು ಹೇಳಲಾಗಿದೆ. ಸ್ವಾಭಾವಿಕ ನ್ಯಾಯವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಲಾಗದು. ಹೀಗೆ ಮಾಡುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದೆ. ಹಣ ಪಾವತಿಸಿ ಅರ್ಜಿದಾರರು ಹಂಚಿಕೆಯಾಗಿರುವ ಭೂಮಿಯ ಮಾಲೀಕತ್ವ ಪಡೆಯಬೇಕು ಎಂಬ ಷರತ್ತು ವಿಧಿಸಲಾಗಿದ್ದು, ಇಲ್ಲವಾದಲ್ಲಿ ಇಎಂಡಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.

“ಅರ್ಜಿದಾರರು ಬಾಕಿ ಹಣವನ್ನು 30 ದಿನಗಳ ಒಳಗೆ ಪಾವತಿ ಮಾಡಿಲ್ಲ. 30 ತಿಂಗಳಾದರೂ ಪಾವತಿಸಿಲ್ಲ. ಅಷ್ಟೇ ಅಲ್ಲದೇ 60 ತಿಂಗಳಾದರೂ ಪಾವತಿ ಮಾಡಿಲ್ಲ. 2021ರಲ್ಲಿ ಪಡೆದುಕೊಳ್ಳಲಾದ ಕೆಲವು ಡಿಮ್ಯಾಂಡ್‌ ಡ್ರಾಫ್ಟ್‌ಗಳ ಚಿತ್ರವನ್ನು ನ್ಯಾಯಾಲಯಕ್ಕೆ ತೋರ್ಪಡಿಸಲಾಗಿದೆ. ನಿಗದಿತ ಅವಧಿಯಲ್ಲಿ ಹಣ ಪಾವತಿಸದೇ ಸುಸ್ತಿದಾರರಾಗಿರುವ (ಡೀಫಾಲ್ಟರ್‌) ಅರ್ಜಿದಾರರ ಕೋರಿಕೆಯಂತೆ ಮೂರನೇ ವ್ಯಕ್ತಿಯ ಹಕ್ಕಿನಲ್ಲಿ ಹಸ್ತಕ್ಷೇಪ ಮಾಡಲಾಗದು. ಅದಾಗ್ಯೂ, ಅರ್ಜಿದಾರರು ಬೇರೊಂದು ಭೂಮಿಯ ಹಂಚಿಕೆ ಕೋರಬಹುದಾಗಿದ್ದು, ಕಾನೂನಿನ ಅಡಿ ಅದನ್ನು ಕಟ್ಟುನಿಟ್ಟಾಗಿ ಪರಿಗಣಿಸಬೇಕು” ಎಂದು ಪೀಠ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಉದ್ಯಮ ಅಭಿವೃದ್ಧಿಪಡಿಸಲು ಭೂಮಿ ಹಂಚಿಕೆ ಕೋರಿ ಧ್ರುತಿ ಇನ್ಫ್ರಾ ಪ್ರಾಜೆಕ್ಟ್ಸ್‌ ಲಿಮಿಟೆಡ್‌ ರಾಜ್ಯ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಡಿಯಲ್ಲಿ ಬರುವ ಏಕಗವಾಕ್ಷಿ ಅನುಮೋದನಾ ಸಮಿತಿಗೆ ಯೋಜನಾ ವರದಿ ಸಲ್ಲಿಸಿದ್ದು, ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಭೂಮಿ ಮಂಜೂರಾತಿ ಕೋರಿತ್ತು. 2017ರ ಜನವರಿ 20ರಂದು ಅರ್ಜಿ ಸಲ್ಲಿಸಿದ್ದು, ಸಮಿತಿಯು ಹೂಡಿಕೆ ಯೋಜನೆಯ ಭಾಗವಾಗಿ ತೋರಿಸಿದ್ದ ಸಾಫ್ಟ್‌ವೇರ್‌ ಡೆವಲಪ್‌ಮೆಂಟ್‌ ಸೆಂಟರ್‌ಗೆ ತಾತ್ವಿಕ ಅನುಮೋದನೆ ನೀಡಿತ್ತು. ಸಮಿತಿ ಒಪ್ಪಿಗೆಯಂತೆ ಭೂಮಿ ಮಂಜೂರು ಕೋರಿ ಮಂಡಳಿಗೆ ಧ್ರುತಿ ಸಂಸ್ಥೆಯು ಮನವಿ ಸಲ್ಲಿಸಿತ್ತು.

2017ರ ಏಪ್ರಿಲ್‌ 27ರಂದು ಧ್ರುತಿ ಸಂಸ್ಥೆಯು 6,00,50,000 ರೂಪಾಯಿಯನ್ನು ಆನಂತರ ಮೇ 25 ಮತ್ತು 31ರಂದು ಮತ್ತೊಂದಷ್ಟು ಹಣ ಸೇರಿ ಒಟ್ಟು 7,50,50,000 ರೂಪಾಯಿ ಠೇವಣಿ ಇಟ್ಟಿತ್ತು. ಯೋಜನೆಯ ಒಟ್ಟು ವೆಚ್ಚ 25 ಕೋಟಿ ರೂಪಾಯಿಯಾಗಿದ್ದು, ಧ್ರುತಿ ಸಂಸ್ಥೆಯು ಇನ್ನೂ 17.5 ಕೋಟಿ ರೂಪಾಯಿಯನ್ನು ಸರ್ಕಾರಕ್ಕೆ ಪಾವತಿ ಮಾಡಬೇಕಿತ್ತು. 30 ದಿನಗಳ ಒಳಗೆ ಪೂರ್ತಿ ಹಣ ಪಾವತಿಸಿ ಹಂಚಿಕೆಯಾದ ಭೂಮಿಯನ್ನು ವಶಕ್ಕೆ ಪಡೆಯದಿದ್ದರೆ ಇಎಂಡಿ ಮುಟ್ಟುಗೋಲು ಹಾಕಿಕೊಂಡು ಭೂಮಿ ಹಂಚಿಕೆ ರದ್ದುಪಡಿಸಲಾಗುತ್ತದೆ ಎಂಬ ಷರತ್ತನ್ನು ಮಂಡಳಿಯ ಹಂಚಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

ಅರ್ಜಿದಾರರು ಷರತ್ತು ಪಾಲಿಸಿರಲಿಲ್ಲ. ಈ ಸಂಬಂಧ ಹಲವು ನೋಟಿಸ್‌ಗಳನ್ನು ಅರ್ಜಿದಾರರಿಗೆ ಜಾರಿ ಮಾಡಲಾಗಿತ್ತು. 2021ರ ಸೆಪ್ಟೆಂಬರ್‌ 24ರಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರಿಗೆ ಬಡ್ಡಿ ಮನ್ನಾ ಮಾಡಿ, ಬಾಕಿ ಹಣ ಪಡೆದು ಭೂಮಿ ಹಕ್ಕು ನೀಡುವಂತೆ ಅರ್ಜಿದಾರರು ಪತ್ರ ಬರೆದಿದ್ದರು. ಇದೇ ಮನವಿಯನ್ನು 2022ರ ನವೆಂಬರ್‌ 14ರಂದು ಮಂಡಳಿಯ ಮುಂದೆಯೂ ಇಡಲಾಗಿತ್ತು. ಆದರೆ, ಬಾಕಿ ಹಣ ಪಾವತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಡಳಿಯು 2022ರ ಏಪ್ರಿಲ್‌ 30ರಂದು ಅರ್ಜಿದಾರರ ಭೂಮಿ ಹಂಚಿಕೆಯನ್ನು ರದ್ದುಪಡಿಸಿತ್ತು. ಆನಂತರ ಅನುಮೋದನಾ ಸಮಿತಿಯ ಮುಂದೆ ಭೂಮಿ ಹಂಚಿಕೆ ಪ್ರಸ್ತಾವ ಇಟ್ಟಿದ್ದು, 2022ರ ಜುಲೈ 26ರಂದು ಪ್ರಣೀತ್‌ ಹೋಲ್ಡಿಂಗ್ಸ್‌ಗೆ ಆಕ್ಷೇಪಾರ್ಹವಾದ ಭೂಮಿ ಹಂಚಿಕೆಯಾಗಿತ್ತು. ಇದರ ಮಾಲೀಕತ್ವ ಪಡೆದಿದ್ದ ಪ್ರಣೀತ್‌ ಹೋಲ್ಡಿಂಗ್ಸ್‌ ಉದ್ಯಮ ಆರಂಭಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದನ್ನು ಪೀಠ ಪುರಸ್ಕರಿಸಿಲ್ಲ.