Justice Krishna S Dixit and Karnataka HC
Justice Krishna S Dixit and Karnataka HC 
ಸುದ್ದಿಗಳು

[ಮಾರ್ಗಸೂಚಿ] ಎಫ್‌ಐಆರ್ ದಾಖಲಾಗದಿದ್ದರೂ, ಶಿಕ್ಷೆಗೆ ಗುರಿಯಾಗದಿದ್ದರೂ ರೌಡಿ ಶೀಟ್ ತೆರೆಯಬಹುದು: ಹೈಕೋರ್ಟ್‌

Bar & Bench

ಅಪರಾಧ ಚುಟವಟಿಕೆಯಲ್ಲಿ ಸಕ್ರಿಯಾಗಿರುವ ರೌಡಿಗಳ ವಿರುದ್ಧ ರೌಡಿ ಶೀಟ್‌ ತೆರೆಯುವ ವಿಚಾರದಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ಕರ್ನಾಟಕ ಹೈಕೋರ್ಟ್ ಶುಕ್ರವಾರ ಮಾರ್ಗಸೂಚಿಗಳನ್ನು ರಚಿಸಿದೆ.

ಅಪರಾಧ ಪ್ರಕರಣದಲ್ಲಿ ಶಿಕ್ಷೆಯಾಗದಿದ್ದರೂ ಮತ್ತು ಯಾವುದೇ ಅಪರಾಧ ಕೃತ್ಯದಲ್ಲಿ ಆರೋಪಿಯಾಗದಿದ್ದರೂ ಪೊಲೀಸರು ರೌಡಿ ಶೀಟ್‌ ತೆಗೆದಿದ್ದಾರೆ. ಇದು ಮೂಲಭೂತ ಹಕ್ಕಿನ ಚ್ಯುತಿಯಾಗಿದೆ. ಆದ್ದರಿಂದ ತಮ್ಮ ವಿರುದ್ದದ ರೌಡಿ ಶೀಟ್ ಅನ್ನು ರದ್ದುಪಡಿಸಬೇಕು ಎಂದು ಕೋರಿ ಬಿ ಎಸ್ ಪ್ರಕಾಶ್‌ ಹಾಗೂ ರಾಕೇಶ್ ಮಲ್ಲಿ ಸೇರಿದಂತೆ ಒಟ್ಟು 19 ಮಂದಿ ರೌಡಿ ಶೀಟರ್‌ಗಳು ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ನೇತೃತ್ವದ ಪೀಠವು ಪುರಸ್ಕರಿಸಲು ನಿರಾಕರಿಸಿದೆ.

ಒಬ್ಬ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಾಗದಿದ್ದರೂ ಮತ್ತು ನ್ಯಾಯಾಲಯದಿಂದ ಯಾವುದೇ ಶಿಕ್ಷೆಗೆ ಗುರಿಯಾಗದ ಸಂದರ್ಭದಲ್ಲೂ ಅವರ ವಿರುದ್ಧ ರೌಡಿ ಶೀಟ್ ತೆಗೆಯಬಹುದು. ಹತ್ತು ಇಪ್ಪತ್ತು ವರ್ಷಗಳ ಹಿಂದೆಯೇ ಅಪರಾಧ ಪ್ರಕರಣಗಳಿಂದ ಖುಲಾಸೆಯಾಗಿರುವ ಮಾತ್ರಕ್ಕೆ ಅಂತಹ ವ್ಯಕ್ತಿಯನ್ನು ರೌಡಿ ಪಟ್ಟಿಯಿಂದ ಕೈಬಿಡಬೇಕು ಎನ್ನುವುದು ಸರಿಯಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪೊಲೀಸರು ನಿಖರ ಮಾಹಿತಿ ಆಧರಿಸಿಯೇ ರೌಡಿ ಶೀಟ್ ತೆಗೆಯುವ ತೀರ್ಮಾನಕ್ಕೆ ಬಂದಿರುತ್ತಾರೆ. ಅಪರಾಧ ಪ್ರಕರಣದಿಂದ ಖುಲಾಸೆಯಾಗಿದ್ದರೂ ರೌಡಿ ಶೀಟ್ ಆರಂಭಿಸಿದ ತಕ್ಷಣ ಆ ವ್ಯಕ್ತಿಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ. ರೌಡಿಯಾಗಿದ್ದವರು ಮುಂದೆಯೂ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವ ಸಾಧ್ಯತೆಯನ್ನು ತಳ್ಳುಹಾಕುವಂತಿಲ್ಲ. ರೌಡಿಗಳ ಅಪರಾಧ ಕೃತ್ಯಗಳ ಮೇಲೆ ನಿಗಾಯಿಡಲು ಮುಖ್ಯವಾಗಿ ರೌಡಿ ಶೀಟ್ ಆರಂಭಿಸಲಾಗುತ್ತದೆ. ಆದ್ದರಿಂದ, ಇದು ನ್ಯಾಯಸಮ್ಮತವಾದ ನಿರ್ಬಂಧವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಇದೇ ವೇಳೆ ರೌಡಿ ಶೀಟ್ ತೆಗೆಯುವ ಮುನ್ನ ಅನುಸರಿಸಬೇಕಾದ ನಿಯಮಗಳ ಕುರಿತು ಮಾರ್ಗಸೂಚಿ ರೂಪಿಸಿರುವ ಹೈಕೋರ್ಟ್, ರೌಡಿ ಶೀಟ್ ತೆಗೆಯುವ ಮತ್ತು ರೌಡಿಪಟ್ಟಿಯಿಂದ ಹೆಸರು ಕೈಬಿಡುವ ವಿಚಾರಗಳ ಬಗ್ಗೆ ಶಾಸಕಾಂಗ ವಿಸ್ತೃತ ಕಾನೂನು ರಚಿಸಬೇಕು. ವಿಸ್ತೃತ ಕಾನೂನು ರೂಪಿಸುವವರೆಗೆ ಈ ಮಾರ್ಗಸೂಚಿಗಳನ್ನು ಪೊಲೀಸ್ ಇಲಾಖೆ ಪಾಲಿಸಬೇಕು. ಹಾಗೆಯೇ, ನಾಗರಿಕ ಸಮಾಜದಲ್ಲಿ ರೌಡಿ ಚಟುವಟಿಕೆಗಳಿಗೆ ಅವಕಾಶವಿರಬಾರದು. ಅದನ್ನು ನಿಯಂತ್ರಿಸಲು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ.

ಪ್ರಕರಣದಲ್ಲಿ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಪರ ಸರ್ಕಾರಿ ಅಭಿಯೋಜಕ ವಿನೋದ್ ಕುಮಾರ್ ಹಾಗೂ ಅಮಿಕಸ್‌ ಕ್ಯೂರಿಯಾಗಿ ವಕೀಲ ಶ್ರೀಧರ್ ಪ್ರಭು ವಾದ ಮಂಡಿಸಿದ್ದರು.

ಮಾರ್ಗಸೂಚಿಗಳು ಇಂತಿವೆ

  • ಅಪರಾಧ ಪ್ರಕರಣದಿಂದ ಖುಲಾಸೆಯಾದರೂ ಗುಪ್ತಚರ ವರದಿ ಹಾಗೂ ನಿಖರ ಮಾಹಿತಿ ಹೊಂದಿದ್ದರೆ ರೌಡಿ ಶೀಟ್ ತೆರೆಯಬಹುದು

  • ಒಬ್ಬ ವ್ಯಕ್ತಿ ವಿರುದ್ಧ ರೌಡಿ ಶೀಟ್ ತೆರೆಯಬೇಕಾದರೆ ಆ ವ್ಯಕ್ತಿಗೆ ಮುಂಚಿತವಾಗಿ ನೋಟಿಸ್ ನೀಡಿ ಮಾಹಿತಿ ನೀಡಬೇಕು.

  • ರೌಡಿ ಶೀಟ್ ಹಾಕದಂತೆ ಮನವಿ ಸಲ್ಲಿಸಲು ಭಾದಿತ ವ್ಯಕ್ತಿಗೆ ಅವಕಾಶ ನೀಡಬೇಕು.

  • ರೌಡಿ ಶೀಟ್ ಹಾಕುವಾಗ ಸಕಾರಣ ನೀಡಿ ಲಿಖಿತ ಆದೇಶ ನೀಡಬೇಕು.

  • ಜಿಲ್ಲೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ನಗರದಲ್ಲಿ ಸಹಾಯಕ ಪೊಲೀಸ್ ಆಯುಕ್ತರು ರೌಡಿ ಶೀಟ್ ತೆರೆಯಲು ಲಿಖಿತ ಆದೇಶ ಹೊರಡಿಸಬೇಕು.

  • ಎರಡು ವರ್ಷಕ್ಕೊಮ್ಮೆ ರೌಡಿ ಶೀಟ್ ಅನ್ನು ಮರು ಪರಿಶೀಲನೆ ನಡೆಸಿ ಸಮಗ್ರವಾದ ಲಿಖಿತ ಆದೇಶ ಹೊರಡಿಸಬೇಕು

  • ರೌಡಿ ಶೀಟ್ ತೆರೆದ ನಂತರ ಆ ಬಗ್ಗೆ ಯಾವುದೇ ತಕರಾರು ಇದ್ದರೆ ಭಾದಿತ ವ್ಯಕ್ತಿ ಪೊಲೀಸ್ ದೂರು ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಬಹುದು.