H D Revanna & Bhavani Revanna, Karnataka HC 
ಸುದ್ದಿಗಳು

ಸಂತ್ರಸ್ತೆ ಅಪಹರಣ ಪ್ರಕರಣ: ಆರೋಪಿಗಳೆಲ್ಲ ಸಂಬಂಧಿಗಳು ಎಂದ ಪ್ರಾಸಿಕ್ಯೂಷನ್‌; ಜಾಮೀನು ಆದೇಶ ಕಾಯ್ದಿರಿಸಿದ ಹೈಕೋರ್ಟ್‌

Bar & Bench

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣರಿಂದ ಅತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ತೆಯ ಅಪಹರಣದ ಪ್ರಕರಣದಲ್ಲಿನ ಅರ್ಜಿದಾರ ಆರೋಪಿಗಳೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ರಕ್ತ ಸಂಬಂಧಿಗಳಾಗಿದ್ದು, ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರೆಲ್ಲರೂ ರಾಜಕೀಯವಾಗಿ ಒಂದಲ್ಲಾ ಒಂದು ಸ್ಥಾನಮಾನ ಹೊಂದಿದವರೇ ಆಗಿದ್ದಾರೆ ಎಂದು ಪ್ರಾಸಿಕ್ಯೂಷನ್‌ ಸೋಮವಾರ ಹೈಕೋರ್ಟ್‌ ಮುಂದೆ ಪ್ರಬಲ ವಾದ ಮಂಡಿಸಿದೆ.

ಹಾಸನದ ಸತೀಶ್‌ ಬಾಬು ಅಲಿಯಾಸ್‌ ಸತೀಶ್‌ ಬಾಬಣ್ಣ, ಎಚ್‌ ಕೆ ಸುಜಯ್‌, ಎಚ್‌ ಎನ್‌ ಮಧು, ಎಸ್‌ ಟಿ ಕೀರ್ತಿ, ಎಚ್‌ ಡಿ ಮಾಯು ಗೌಡ, ಕೆ ಎ ರಾಜಗೋಪಾಲ್‌ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ಎಚ್‌ ಡಿ ರೇವಣ್ಣ ಜಾಮೀನು ರದ್ದತಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಕಾಯ್ದಿರಿಸಲಾಗಿದೆ. ಶುಕ್ರವಾರ ಅದರ ಜೊತೆಗೆ ಈ ಜಾಮೀನು ಅರ್ಜಿಗಳ ಆದೇಶ ಪ್ರಕಟಿಸಲಾಗುವುದು” ಎಂದು ನ್ಯಾಯಾಲಯ ಹೇಳಿತು.

ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಸಿ ಎಚ್‌ ಜಾಧವ್‌ ಮತ್ತು ಗಣಪತಿ ಭಟ್‌ ವಜ್ರಾಲಿ ಅವರು “ಮೊದಲನೇ ಆರೋಪಿ ಎಚ್‌ ಡಿ ರೇವಣ್ಣ ಮತ್ತು ಎಂಟನೇ ಆರೋಪಿ ಭವಾನಿ ರೇವಣ್ಣಗೆ ಈಗಾಗಲೇ ಜಾಮೀನು ಮಂಜೂರಾಗಿದೆ. ಈ ಎಲ್ಲಾ ಆರೋಪಿಗಳು ರೇವಣ್ಣ-ಭವಾನಿ ಸೂಚನೆಯಂತೆ ನಡೆದುಕೊಂಡಿದ್ದಾರೆ. ಎಲ್ಲರೂ ತನಿಖೆಗೆ ಸಹಕರಿಸಿದ್ದಾರೆ. ಹೀಗಾಗಿ ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಬೇಕು” ಎಂದರು.

ಏಳನೇ ಆರೋಪಿ ಸಂತ್ರಸ್ತೆಯನ್ನು ಬಚ್ಚಿಡಲಾಗಿತ್ತು ಎನ್ನಲಾದ ಫಾರ್ಮ್‌ ಹೌಸ್‌ ಮಾಲೀಕ ರಾಜಗೋಪಾಲ ಪರವಾಗಿ ವಾದಿಸಿದ ವಕೀಲ ವಿ ಎಸ್‌ ಹೆಗಡೆ ಅವರು “ರಾಜಗೋಪಾಲ ಆರು ಬಾರಿ ವಿಚಾರಣೆಗೆ ಹಾಜರಾಗಿದ್ದಾರೆ. ಅವರ ಮೊಬೈಲ್‌ ಫೋನ್‌ ಅನ್ನೂ ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 71 ವರ್ಷದ ರಾಜಗೋಪಾಲ ಅವರಿಗೆ ಕಾಲು ಬದಲಿ (ಆಂಪ್ಯೂಟ್‌) ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಯಾವುದೇ ರೀತಿಯಲ್ಲೂ ರಾಜಗೋಪಾಲಗೆ ಐಪಿಸಿ ಸೆಕ್ಷನ್‌ 364ಎ ಅನ್ವಯಿಸುವುದಿಲ್ಲ. ವಿಚಾರಣೆ ಮುಗಿದಿದ್ದು, ಆರೋಪ ಪಟ್ಟಿಯನ್ನೂ ಪ್ರಾಸಿಕ್ಯೂಷನ್‌ ಸಲ್ಲಿಸಿದೆ. ಹೀಗಾಗಿ, ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದರು.

ವಿಶೇಷ ತನಿಖಾ ದಳದ ಪರವಾಗಿ ವಾದಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ ಅವರು “ಇದೊಂದು ಸಂಘಟಿತ ಅಪರಾಧವಾಗಿದ್ದು, ಹೊಳೆನರಸೀಪುರದಲ್ಲಿ ಎಫ್‌ಐಆರ್‌ ದಾಖಲಾಗಿ, ರಾಜ್ಯ ಸರ್ಕಾರವು ಏಪ್ರಿಲ್‌ 28ರಂದು ವಿಶೇಷ ತನಿಖಾ ದಳ ರಚನೆಯಾಗುತ್ತಿದ್ದಂತೆ ಪ್ರಕರಣದಲ್ಲಿ ಆರೋಪಿಗಳ ಗುಂಪು ಸಕ್ರಿಯವಾಗಿ ಸಂತ್ರಸ್ತೆಯನ್ನು ಅಪಹರಿಸಿದೆ. ಇಡೀ ಅಪರಾಧ ಚಟುವಟಿಕೆಗೆ ಸಂಬಂಧಿಸಿದ ಕರೆ ದಾಖಲೆ, ಹೇಳಿಕೆಗಳನ್ನು ಸಲ್ಲಿಸಲಾಗಿದೆ” ಎಂದರು.

“ಅರ್ಜಿದಾರ/ಆರೋಪಿಗಳೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ರೇವಣ್ಣ-ಭವಾನಿ ದಂಪತಿಯ ಸಂಬಂಧಿಗಳಾಗಿದ್ದಾರೆ. ಎಲ್ಲರೂ ಒಂದೇ ಸಮುದಾಯಕ್ಕೆ ಸೇರಿದ್ದು, ರಾಜಕೀಯ ಪಕ್ಷದ ಪ್ರಮುಖ ಸ್ಥಾನದಲ್ಲಿದ್ದರು. ಸಂತ್ರಸ್ತೆ ಅಪಹರಣದ ಬಗ್ಗೆ ಆಕೆಯ ಪುತ್ರ ದೂರು ನೀಡುತ್ತಿದ್ದಂತೆ ಆಕೆಯಿಂದಲೇ ಅಪಹರಣವಾಗಿಲ್ಲ ಎಂಬ ವಿಡಿಯೋ ಹೇಳಿಕೆಯನ್ನು ಆರೋಪಿಗಳು ಬಿಡುಗಡೆ ಮಾಡಿಸಿದ್ದಾರೆ. ಇದೆಲ್ಲಕ್ಕೂ ಮಿಗಿಲಾಗಿ, ಅಪಹರಣದ ವಿಚಾರ ತಿಳಿಯುತ್ತಿದ್ದಂತೆಯೇ ಎಲ್ಲಾ ಆರೋಪಿಗಳು ಸಂತ್ರಸ್ತೆಯನ್ನು ಮತ್ತೊಂದು ಸ್ಥಳದಲ್ಲಿ ಒತ್ತೆ ಇಡಲು ಯತ್ನಿಸಿದ್ದರು ಎಂಬ ವಿಚಾರ ಕರೆ ದಾಖಲೆಗಳಿಂದ ತಿಳಿದು ಬಂದಿದೆ. ಸಂತ್ರಸ್ತೆಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸಲು ಪ್ರತ್ಯೇಕ ವಾಹನಗಳನ್ನು ಬಳಕೆ ಮಾಡಲಾಗಿದೆ” ಎಂದರು.

“ಹೊಳೆನರಸೀಪುರದಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಎಂಟನೇ ಆರೋಪಿಯು ತನ್ನ ಕಾರಿನ ಡ್ರೈವರ್‌ ಮೂಲಕ ಅಪಹರಣ ಷಡ್ಯಂತ್ರ ರೂಪಿಸಿದ್ದಾರೆ. ಇದುವರೆಗೂ ಕಾರಿನ ಡ್ರೈವರ್‌ ಎಲ್ಲಿದ್ದಾನೆ ಎಂದು ಪತ್ತೆಯಾಗಿಲ್ಲ. ರಾಜಗೋಪಾಲ್‌ ಮೊಬೈಲ್‌ನಿಂದ ಸರಿಸುಮಾರು 40 ಸಾವಿರ ಕರೆ ಮಾಡಲಾಗಿದೆ. ಇದೆಲ್ಲವೂ ಆರೋಪಿಗಳ ನಡುವಿನ ಪಿತೂರಿಯ ಭಾಗವೇ ಆಗಿದೆ” ಎಂದರು.

“ಇದುವರೆಗೂ ರೇವಣ್ಣ, ಭವಾನಿಯ ಮೊಬೈಲ್‌ ಫೋನ್‌ ಜಪ್ತಿ ಆಗಿಲ್ಲ. ಆರೋಪಿಗಳು ತಮ್ಮ ಮೊಬೈಲ್‌ನಲ್ಲಿ ಸಾಕ್ಷಿ ನಾಶಪಡಿಸಿದ್ದಾರೆ. ನಾಲ್ಕನೇ ಆರೋಪಿ ಮಾಯು ಗೌಡ ಎಂಬಾತ ರೌಡಿ ಶೀಟರ್‌ ಆಗಿದ್ದಾನೆ” ಎಂದರು.

“ಪ್ರಜ್ವಲ್‌ ಹಗರಣ ಬೆಳಕಿಗೆ ಬರಲಾರಂಭಿಸುತ್ತಿದ್ದಂತೆ ನಾಲ್ಕು ದಶಕಗಳ ರೇವಣ್ಣ ರಿಪಬ್ಲಿಕ್‌ ಅನ್ನು ಭೇದಿಸುವುದಕ್ಕಾಗಿಯೇ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದೆ. ಇಡೀ ಪ್ರಕರಣದಲ್ಲಿ ಭಾರಿ ಷಡ್ಯಂತ್ರ ನಡೆದಿದೆ. ಹೀಗಾಗಿ, ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ಮಂಜೂರು ಮಾಡಬಾರದು” ಎಂದು ಪ್ರೊ. ರವಿವರ್ಮ ಕುಮಾರ್‌ ಬಲವಾಗಿ ವಾದಿಸಿದರು.

ʼಇಷ್ಟು ಅಚ್ಚುಕಟ್ಟಾಗಿ ಆರೋಪ ಪಟ್ಟಿ ಸಲ್ಲಿಕೆಯಾಗುತ್ತಿರುವುದು ಇದೇ ಮೊದಲುʼ

ಸಂತ್ರಸ್ತೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಚ್ಚುಕಟ್ಟಾಗಿ ಬೈಂಡಿಂಗ್‌ ಮಾಡಿರುವ ಆರೋಪ ಪಟ್ಟಿಯನ್ನು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ನ್ಯಾಯಾಲಯಕ್ಕೆ ಸಲ್ಲಿಸಿದರು. ಇದನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ ನ್ಯಾ. ನಾಗಪ್ರಸನ್ನ ಅವರು “ಇಷ್ಟು ಅಚ್ಚುಕಟ್ಟಾಗಿ ಆರೋಪ ಪಟ್ಟಿ ಸಲ್ಲಿಕೆಯಾಗುತ್ತಿರುವುದು ಇದೇ ಮೊದಲು. ಸೈಬರ್‌ ಅಪರಾಧಗಗಳಲ್ಲೂ ಈ ಮಟ್ಟಿಗೆ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿಲ್ಲ. ಇದೇನು ವಿಶೇಷ ಪ್ರಕರಣವೇ” ಎಂದು ಲಘು ದಾಟಿಯಲ್ಲಿ ಕೇಳಿದರು.

ಅದಕ್ಕೆ ಜಗದೀಶ್‌ ಅವರು “ನಾಲ್ಕು ಸಂಪುಟಗಳಲ್ಲಿ ತನಿಖೆಯ ವಿವರ, ಕರೆ ದಾಖಲೆ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ಪ್ರತಿಯೊಬ್ಬ ಆರೋಪಿಯ ಬಗೆಗಿನ ಆರೋಪ ಸೇರಿದಂತೆ ಸವಿವರ ಆರೋಪ ಪಟ್ಟಿಯಲ್ಲಿದೆ. ಒಟ್ಟು ನಾಲ್ಕು ಸಂಪುಟಗಳಿವೆ” ಎಂದು ಎರಡನ್ನು ನ್ಯಾಯಮೂರ್ತಿಗಳಿಗೆ ಸಲ್ಲಿಸಿದರು.

ವಿಚಾರಣೆಯ ಅಂತಿಮ ಹಂತದಲ್ಲಿ ನ್ಯಾಯಾಲಯವು, ಪ್ರೊ. ಕುಮಾರ್‌ ಅವರು ʼರೇವಣ್ಣ ರಿಪಬ್ಲಿಕ್‌ʼ ಎಂಬ ಪದ ಬಳಕೆ ಮಾಡಿರುವುದು ಚೆನ್ನಾಗಿದೆ - ಆರ್‌ಆರ್‌ ಎಂದು ಮೌಖಿಕವಾಗಿ ಲಘು ದಾಟಿಯಲ್ಲಿ ಮೆಚ್ಚುಗೆ ಸೂಚಿಸಿತು.