ನಟ ದರ್ಶನ್ ಪ್ರಮುಖ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದಡಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ಮುಂದಿನ ತನಿಖೆಯನ್ನು ರದ್ದುಪಡಿಸಬೇಕು ಎಂದು ಕೋರಿ ಇಬ್ಬರು ಆರೋಪಿಗಳು ಸಲ್ಲಿಸಿದ್ದ ಅರ್ಜಿ ಮೇಲಿನ ಆದೇಶವನ್ನು ಕರ್ನಾಟಕ ಹೈಕೋರ್ಟ್ ಬುಧವಾರ ಕಾಯ್ದಿರಿಸಿದೆ.
ತುಮಕೂರಿನ ಅಮರಜ್ಯೋತಿ ನಗರದ ಎಂ ಸುಹಾಸ್ ಹಾಗೂ ಉಪ್ಪಾರಹಳ್ಳಿಯ ಆರ್ ಜಿ ವೇಣು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹಿರಿಯ ವಕೀಲ ಹಷ್ಮತ್ ಪಾಷ ಅವರು “ಸಹಾಯಕ ಪೊಲೀಸ್ ಕಮಿಷನರ್ ವರದಿ ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ಸಾಕ್ಷಿಯು ನೇರವಾಗಿ ದೂರು ದಾಖಲಿಸಿಲ್ಲ. ಸಾಕ್ಷಿಯು ಈಗಾಗಲೇ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾರೆ. ಅದರಲ್ಲಿ ಅವರು ಸುಳ್ಳು ಹೇಳಿಕೆ ನೀಡಿಲ್ಲ. ವಿಚಾರಣಾಧೀನ ನ್ಯಾಯಾಲಯವು ಸಾಕ್ಷಿಗಳಿಗೆ ರಕ್ಷಣೆ ನೀಡಲು ಆದೇಶಿಸಿದೆ. ಪರ್ಯಾಯವಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಅವಕಾಶವಿಲ್ಲ” ಎಂದರು.
ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಆಕರ್ಷ್ ಎಂಬಾತನ ಕರೆಯ ಮೇರೆಗೆ ಸಾಕ್ಷಿ ನುಡಿವ ವ್ಯಕ್ತಿಯು ಕಾರಿನಲ್ಲಿ ಕುಳಿತಿದ್ದು, ಈ ಸಂದರ್ಭದಲ್ಲಿ ಕೊಲೆ ಆರೋಪಿಗಳು ಯಾರೂ ಎಂಬುದು ಗೊತ್ತಿಲ್ಲ ಎಂದು ಹೇಳಬೇಕು. ಡಿವಿಆರ್‌ನಿಂದ ವಿಡಿಯೊ ಕ್ಲಿಪ್‌ಗಳನ್ನು ಪೊಲೀಸರೇ ಕಾಪಿ ಮಾಡಿಕೊಂಡಿದ್ದು. ಸಹಿ ಹಾಕಿಸಿಕೊಂಡಿದ್ದಾರೆ ಎಂದು ಹೇಳಬೇಕು ಎಂದು ಆರೋಪಿಗಳು ಹೇಳಿದ್ದಾರೆ” ಎಂದರು.
ಈ ಹಂತದಲ್ಲಿ ಪೀಠವು “ಬೆದರಿಕೆ ಇಲ್ಲದೇ ಹೇಳಿಕೆಯಾದರೆ ಅದು ಅಪರಾಧವಾಗುವುದಿಲ್ಲ” ಎಂದು ಮೌಖಿಕವಾಗಿ ಹೇಳಿ, ಆದೇಶ ಕಾಯ್ದಿರಿಸಿತು.
ಅರ್ಜಿದಾರರ ವಿರುದ್ಧ ಕಾಮಾಕ್ಷಿ ಪಾಳ್ಯ ಠಾಣೆ ಪೊಲೀಸರು ಭಾರತೀಯ ನ್ಯಾಯ ಸಂಹಿತಾ–2023ರ (ಬಿಎನ್‌ಎಸ್) ಸೆಕ್ಷನ್‌ಗಳಾದ 232, 61(1) ಮತ್ತು 238ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಈ ಕುರಿತಂತೆ ಬೆಂಗಳೂರಿನ 50ನೇ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನ್ಯಾಯಿಕ ಪ್ರಕ್ರಿಯೆಗೆ ಮುಂದಾಗಿದೆ.