CM Siddaramaiah and Gov Thawar Chand Gehlot, Karnataka HC 
ಸುದ್ದಿಗಳು

[ಮುಡಾ ಪ್ರಕರಣ] ಪ್ರಾಸಿಕ್ಯೂಷನ್ ಮಂಜೂರಾತಿ ಪ್ರಶ್ನಿಸಿದ್ದ ಸಿದ್ದರಾಮಯ್ಯ ಅರ್ಜಿ ಕುರಿತ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಕೆಸರೆ ಗ್ರಾಮದ ಆಕ್ಷೇಪಿತ 3.16 ಗುಂಟೆ ಭೂಮಿಯನ್ನು ಮುಡಾ ಡಿನೋಟಿಫೈ ಮಾಡಿದ್ದು, ದೇವನೂರು ಲೇಔಟ್‌ ರೂಪಿಸುವಾಗ ಅದನ್ನು ವಶಕ್ಕೆ ಪಡೆಯಲಾಗಿಲ್ಲ. ಅದರ ಒಡೆತನ ಭೂಮಾಲೀಕರ ಬಳಿಯೇ ಇತ್ತೇ ಹೊರತು ಮುಡಾ ಬಳಿ ಅಲ್ಲ ಎಂದು ರವಿವರ್ಮಕುಮಾರ್ ಮಾಹಿತಿ.

Bar & Bench

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಮುಡಾ 14 ನಿವೇಶನ ಹಂಚಿಕೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗಾಗಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಅಭಿಯೋಜನಾ ಮಂಜೂರಾತಿ ನೀಡಿರುವುದನ್ನು ರದ್ದುಪಡಿಸಲು ಕೋರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್‌ ಗುರುವಾರ ಆದೇಶ ಕಾಯ್ದಿರಿಸಿದೆ. ಅರ್ಜಿ ವಿಲೇವಾರಿಯಾಗುವವರೆಗೆ ಮಧ್ಯಂತರ ಆದೇಶ ಚಾಲ್ತಿಯಲ್ಲಿರಲಿದೆ ಎಂದೂ ಸ್ಪಷ್ಟಪಡಿಸಿದೆ.

ರಾಜ್ಯಪಾಲರ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಅರ್ಜಿದಾರರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಪ್ರತ್ಯುತ್ತರ ಮಂಡಿಸಿದ ಹಿರಿಯ ವಕೀಲ ಡಾ. ಅಭಿಷೇಕ್‌ ಮನು ಸಿಂಘ್ವಿ ಅವರು “ರಾಜ್ಯ ಸಚಿವ ಸಂಪುಟವು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೀಡಿದ್ದ ಶೋಕಾಸ್‌ ನೋಟಿಸ್‌ ಹಿಂಪಡೆಯುವ ಶಿಫಾರಸ್ಸಿನಲ್ಲಿ ಉಲ್ಲೇಖಿಸಿರುವ ಅಂಶಗಳಲ್ಲಿ ಎದ್ದು ಕಾಣುವ ಅತಾರ್ಕಿಕ ಅಂಶಗಳನ್ನು ರಾಜ್ಯಪಾಲರ ಅಭಿಯೋಜನಾ ಮಂಜೂರಾತಿ ಆದೇಶದಲ್ಲಿ ಪಟ್ಟಿ ಮಾಡಿಲ್ಲ. ಬದಲಾಗಿ, ಸಂಪುಟದ ಶಿಫಾರಸ್ಸು ಪಕ್ಷಪಾತಿ ಎಂಬುದನ್ನಷ್ಟೇ ರಾಜ್ಯಪಾಲರು ಹೇಳಿದ್ದಾರೆ. ಆ ಮೂಲಕ ಸ್ವತಂತ್ರವಾಗಿ ವಿವೇಚನೆ ಬಳಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 17ಎ ಅಡಿ ತನಿಖೆಗೆ ಅನುಮತಿಸುವಾಗ ತನಿಖಾಧಿಕಾರಿ ಅಭಿಪ್ರಾಯ ರೂಪಿಸಿರಬೇಕು. ಇದೂ ಹಾಲಿ ಪ್ರಕರಣದಲ್ಲಿ ಅನುಪಾಲನೆಯಾಗಿಲ್ಲ.ಹೀಗಾಗಿ, ರಾಜ್ಯಪಾಲರ ಆದೇಶವನ್ನು ವಜಾ ಮಾಡಬೇಕು” ಎಂದು ಕೋರಿದರು.

ಮುಂದುವರಿದು, “ರಾಜ್ಯಪಾಲರು ತಮ್ಮ ಆದೇಶದಲ್ಲಿ ಆಧರಿಸಿರುವ ಮಧ್ಯಪ್ರದೇಶ ಪೊಲೀಸ್‌ ಸ್ಥಾಪನಾ ತೀರ್ಪಿನ ಪ್ರಕರಣವು ಸಂಪೂರ್ಣವಾಗಿ ಸಿದ್ದರಾಮಯ್ಯ ಪರವಾಗಿದೆ. ಆದರೆ, ಅದನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದಾರೆ. ಇನ್ನು, ದೂರುದಾರರ ಅಬ್ರಹಾಂ ಅವರು ಪ್ರಾಮಾಣಿಕರಲ್ಲ ಅವರಿಗೆ 25 ಲಕ್ಷ ದಂಡ ವಿಧಿಸಲಾಗಿದ್ದು, ಹಲವು ಕ್ರಿಮಿನಲ್‌ ಪ್ರಕರಣ ದಾಖಲಾಗಿವೆ” ಎಂದರು.

ಈ ಮಧ್ಯೆ ಪೀಠವು “ಯಾವ ಸಂಪುಟ ತನ್ನ ನಾಯಕನ (ಸಿದ್ದರಾಮಯ್ಯ) ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡಿರುವುದು ಸರಿ ಎಂದು ಹೇಳುತ್ತದೆ?” ಎಂದರು. ಇದಕ್ಕೆ ಸಿಂಘ್ವಿ ಅವರು “ರಾಜಕೀಯದಲ್ಲಿ ಸಾಕಷ್ಟು ಬಾರಿ ಸಂಪುಟ ತಮ್ಮ ಮುಖ್ಯಮಂತ್ರಿ ವಿರುದ್ಧ ನಡೆದಿದೆ” ಎಂದು ಸಮಜಾಯಿಷಿ ನೀಡಿದರು.

ಸುದೀರ್ಘ ಸುಮಾರು ನಾಲ್ಕು ತಾಸು ವಾದಿಸಿದ ಸಿಂಘ್ವಿ ಅವರು ಅತ್ಯಂತ ಸೂಕ್ಷ್ಮ ವಿಚಾರಗಳನ್ನು ನ್ಯಾಯಾಲಯಕ್ಕೆ ಸವಿಸ್ತಾರವಾಗಿ ವಿವರಿಸಿದರು.

ಸಿಂಘ್ವಿ ವಾದದ ಇತರ ಪ್ರಮುಖ ಅಂಶಗಳು:

- ಸಚಿವ ಸಂಪುಟದ ಸಲಹೆಯಲ್ಲಿ ಅತಾರ್ಕಿಕತೆ ಎದ್ದುಕಾಣುತ್ತದೆ ಎನ್ನುವುದನ್ನು ರಾಜ್ಯಪಾಲರು ವಿವರಿಸಿದ ನಂತರವಷ್ಟೇ ಅವರು ವಿವೇಚನಾಧಿಕಾರ ಬಳಸಬಹುದು. ಸಚಿವ ಸಂಪುಟವು ಮುಖ್ಯಮಂತ್ರಿಯವರೊಂದಿಗೆ ಕೈಜೋಡಿಸಿದೆ ಎನ್ನುವ ಊಹಾತ್ಮಕ ಆಧಾರದಲ್ಲಿ ರಾಜ್ಯಪಾಲರು ಸ್ವತಂತ್ರವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಸಂಪುಟವು ಹೇಗೆ ಪಕ್ಷಪಾತಿ ಎಂದು ತೋರಿಸುವಲ್ಲಿ ರಾಜ್ಯಪಾಲರು ವಿಫಲರಾಗಿದ್ದಾರೆ. ಊಹಾತ್ಮಕ ಆಧಾರದಲ್ಲಿ ಮುಂದುವರಿಯುವುದಾದರೆ ಎಲ್ಲ ಪ್ರಕರಣಗಳಲ್ಲೂ ಇದನ್ನೇ ಅನ್ವಯಿಸಬೇಕಾಗುತ್ತದೆ. ವಿವೇಚನೆಯ ಅಂಶವೇ ಇಲ್ಲವಾಗುತ್ತದೆ. ರಾಜ್ಯಪಾಲರ  ಆರು ಪುಟದ ಆದೇಶವು ಸಂಪುಟದ ಸಲಹೆಯು ಅತಾರ್ಕಿಕ ಎಂದು ಎಲ್ಲಿಯೂ ನಿರೂಪಿಸುವುದಿಲ್ಲ. ರಾಜ್ಯಪಾಲರು ಎರಡು ಕಾಲಂನಲ್ಲಿ, ಮೂರು ಕಾಲಂನಲ್ಲಿ ವಿವರಣೆಗಳನ್ನು ಕೇಳಿದ್ದಾರೆ ಎನ್ನುವುದು ಅವರು ವಿವೇಚನೆಯನ್ನು ಬಳಸಿದ್ದಾರೆ ಎನ್ನುವುದಕ್ಕೆ ಆಧಾರವಾಗುವುದಿಲ್ಲ.  

- ಸಿದ್ದರಾಮಯ್ಯನವರ ಪ್ರಕರಣದಲ್ಲಿ ರಾಜ್ಯಪಾಲರು ತೋರಿರುವ ಆತುರ ಬೇರೆ ಪ್ರಕರಣಗಳಲ್ಲಿ ಕಂಡುಬರುವುದಿಲ್ಲ. ನನ್ನ ಪ್ರಕರಣದಲ್ಲಿ ಅಂದೇ ದೂರನ್ನು ಸ್ವೀಕರಿಸಿ ಅಂದೇ ಕಾರಣ ಕೇಳಿ ಶೋಕಾಸ್‌ ನೋಟಿಸ್ ನೀಡಿರುತ್ತಾರೆ. ದೂರುದಾರರ ದೂರನ್ನೊಂದೇ ಇದಕ್ಕೆ ಆಧರಿಸಿರುತ್ತಾರೆ. ಸ್ವತಂತ್ರವಾದ ವಿಚಾರಣೆ ಕೈಗೊಂಡಿರುವುದಿಲ್ಲ. ಅದರೆ, ಮಾಜಿ ಸಚಿವೆ ಶಶಿಕಲಾ ಜೊಲ್ಲೆಯವರ ಮೊಟ್ಟೆ ಹಗರಣದಲ್ಲಿ ವಿಡಿಯೋ ಸಾಕ್ಷ್ಯಾಧಾರವಿದ್ದರೂ ಅಲ್ಲಿ ಆಪಾದನೀಯ ಅಂಶಗಳಿವೆ ಎಂದು ಅವರು ಮನಗಾಣುವುದಿಲ್ಲ.

- ನನ್ನ ವಿಚಾರದಲ್ಲಿ ಕನ್ನಡದಲ್ಲಿರುವ ದಾಖಲೆಗಳನ್ನು ಅಂದೇ ತರ್ಜುಮೆ ಮಾಡಿಸಿಕೊಂಡು ಮುಂದುವರೆಯುವ ರಾಜ್ಯಪಾಲರು ತಮ್ಮ ಬಳಿ ಎರಡು ವರ್ಷಗಳಿಂದ ಇದ್ದ ಜೊಲ್ಲೆ ಪ್ರಕರಣದಲ್ಲಿ ಕನ್ನಡದಲ್ಲಿನ ದಾಖಲೆಗಳ ತರ್ಜುಮೆಯನ್ನು ಕೋರಿ ವಾಪಾಸು ಕಳುಹಿಸುತ್ತಾರೆ. ರಾಜ್ಯಪಾಲರು ಸಾಧಾರವಾದ ಸೂಕ್ತ ಪ್ರಕ್ರಿಯೆಯನ್ನು ಪಾಲಿಸಿದ್ದಾರೆ ಎನ್ನುವುದೇ ಇಲ್ಲಿ ಪ್ರಶ್ನಾರ್ಹವಾಗಿದೆ.

- ಆಕ್ಷೇಪಿತ ಪ್ರಕರಣ 23 ವರ್ಷಗಳ ಅವಧಿಯಲ್ಲಿ ನಡೆದಿದೆ. ಸಿದ್ದರಾಮಯ್ಯನವರ ಪಾತ್ರವೇ ಇದ್ದಿದ್ದರೆ ಇದಕ್ಕೆ ಇಷ್ಟು ದೀರ್ಘ ಅವಧಿ ಅಗತ್ಯವಿರುತ್ತಿತ್ತೇ? ಅರ್ಜಿದಾರರು ಈ ಅವಧಿಯಲ್ಲಿ ಅಗಿ ಹೋದ ಬೇರಾವುದೇ ಅಧಿಕಾರಿಗಳ ವಿರುದ್ಧ ಆಪಾದನೆ ಮಾಡಿಲ್ಲ. ನನ್ನನ್ನು ಮಾತ್ರವೇ ಪ್ರತ್ಯೇಕಿಸಿ ಆಪಾದನೆ ಮಾಡಿರುವುದರ ಹಿಂದೆ ದುರುದ್ದೇಶವಿದೆ.

- ಸಂಸದೀಯ ವ್ಯವಸ್ಥೆಯಲ್ಲಿ ಚುನಾಯಿತವಾದ, ಪ್ರಜಾಪ್ರಭುತ್ವವಾದಿ ಸರ್ಕಾರಕ್ಕೆ ಸರಿ-ತಪ್ಪುಗಳನ್ನು ಮಾಡುವ ಹಕ್ಕಿರುತ್ತದೆ. ರಾಜ್ಯಪಾಲರು ತಮ್ಮ ವಿವೇಚನೆಯನ್ನು ಬಳಸುವ ಆಯ್ಕೆ ಅತ್ಯಂತ ಸೀಮಿತವಾದುದು. ರಾಜ್ಯಪಾಲರ ಕಾರ್ಯಕಾರಿ ಅಧಿಕಾರದ ಚಲಾವಣೆಗೆ ಕೆಲವೊಂದು ವಿನಾಯತಿ, ಅಪವಾದಗಳಿರಬಹುದಾದರೂ ಅದರ ಚಲಾವಣೆಯು ಸಂಸದೀಯ ವ್ಯವಸ್ಥೆಯೊಂದಿಗೆ ಸಾಮರಸ್ಯ ಹೊಂದಿರಬೇಕು.  

ಆನಂತರ ಸಿದ್ದರಾಮಯ್ಯ ಪರವಾಗಿ ವಾದ ಮುಂದುವರಿಸಿದ ಮತ್ತೊಬ್ಬ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್‌ ಅವರು “ಕೆಸರೆ ಗ್ರಾಮದಲ್ಲಿನ ಆಕ್ಷೇಪಾರ್ಹವಾದ ಸರ್ವೆ ನಂ. 464ರಲ್ಲಿನ 3.16 ಗುಂಟೆ ಭೂಮಿಯನ್ನು ಮುಡಾ ಡಿನೋಟಿಫೈ ಮಾಡಿದ್ದು, ದೇವನೂರು ಲೇಔಟ್‌ ರೂಪಿಸುವಾಗ ಅದನ್ನು ವಶಕ್ಕೆ ಪಡೆಯಲಾಗಿಲ್ಲ. ಸಿದ್ದರಾಮಯ್ಯನವರ ಬಾವಮೈದುನನಿಗೆ ಅದನ್ನು ಮಾರಾಟ ಮಾಡುವಾಗ ಅದರ ಒಡೆತನ ಮೂಲ ಭೂಮಾಲೀಕರ ಬಳಿಯೇ ಇತ್ತೇ ಹೊರತು ಮುಡಾ ಬಳಿ ಅಲ್ಲ. ಆ ವೇಳೆ ಅದು ಕೃಷಿ ಭೂಮಿಯೇ ಆಗಿತ್ತು. ಆಕ್ಷೇಪಾರ್ಹವಾದ ಭೂಮಿಯನ್ನು ಮುಡಾ ತನ್ನ ವಶಕ್ಕೆ ಪಡೆದಿರಲಿಲ್ಲ” ಎಂದು ಪ್ರತಿಪಾದಿಸಿದರು. ಇದಕ್ಕೆ ಪೂರಕವಾಗಿ ರಾಜ್ಯಪತ್ತದ ಪ್ರಕಟಣೆ ಹಾಗೂ ಮುಡಾದ ಲೇಔಟ್‌ನ ನಕಾಶೆಗಳನ್ನು ದಾಖಲೆಯಾಗಿ ಸಲ್ಲಿಸಿದರು.

“1993ರಲ್ಲಿ ಆಕ್ಷೇಪಾರ್ಹವಾದ ಭೂಮಿ ಸೇರಿದಂತೆ ಹಲವು ಜಮೀನುಗಳನ್ನು ವಶಪಡಿಸಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಮುಡಾ ಒಟ್ಟಾರೆಯಾಗಿ ಒಂದು ಕೋಟಿಗೂ ಅಧಿಕ ಪರಿಹಾರ ನೀಡಿತ್ತು. ಇನ್ನು ದೂರುದಾರರು ಕೆಸರೆ ಗ್ರಾಮವೇ ಇಲ್ಲ ಎಂದು ವಾದಿಸಿದ್ದಾರೆ. 2011ರ ಜನಗಣತಿಯ ಪ್ರಕಾರ ಕೆಸರೆ ಗ್ರಾಮ ಇದ್ದು, ಅಲ್ಲಿ ಜನವಸತಿ ಮತ್ತು ಆಸ್ಪತ್ರೆ ಇತ್ಯಾದಿಗಳು ಇದ್ದವು. ಇದಕ್ಕೆ ಸಂಬಂಧಿಸಿದಂತೆ ಜನಗಣತಿಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ” ಎಂದರು.

“ಸಿದ್ದರಾಮಯ್ಯ ಅವರ ಪತ್ನಿ ಬಿ ಎಂ ಪಾರ್ವತಿ ಅವರ ಜಾಮೀನಿಗೆ ಪರ್ಯಾಯವಾಗಿ 14 ನಿವೇಶನ ನೀಡಲಾಗಿದೆ. ದೂರುದಾರರು ಆಪಾದಿಸಿರುವಂತೆ ಅನುಮಾನದ ದಿಕ್ಸೂಚಿ ಅವರತ್ತ ತಿರುಗಿಲ್ಲ. ಮುಡಾ ನಿವೇಶಗಳನ್ನು ಈಗಲೂ ವಾಪಸ್‌ ಪಡೆದು, ಅರ್ಜಿದಾರರ ಪತ್ನಿಗೆ ಆಕ್ಷೇಪಾರ್ಹವಾದ ಭೂಮಿಯನ್ನು ಮರಳಿಸಬಹುದು” ಎಂದರು.

ಮುಂದುವರಿದು, “ಸಿದ್ದರಾಮಯ್ಯನವರ ಸಂಬಂಧಿಗಳು ಕೆಲವರು ಲಾಭ ಪಡೆದಿರಬಹುದು. ಅಧಿಕಾರಿಗಳಿಗೂ ಲಾಭವಾಗಿರಬಹುದು. 14 ಜುಜುಬಿ ನಿವೇಶನಗಳಿಗೆ ಅವರ ಸಾರ್ವಜನಿಕ ಜೀವನಕ್ಕೆ ಕಳಂಕ ಹಚ್ಚಲು ಯತ್ನಿಸಬಹುದೇ? ಇಡೀ ಪ್ರಕ್ರಿಯೆಯಲ್ಲಿ ರಾಜಕೀಯ ದುರುದ್ದೇಶ ಅಡಗಿದೆ” ಎಂದು ಆಕ್ಷೇಪಿಸಿದರು.

ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ, ಮೂರನೇ ಪ್ರತಿವಾದಿ ರಂಗನಾಥ ರೆಡ್ಡಿ, ನಾಲ್ಕನೇ ಪ್ರತಿವಾದಿ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲೆ ಲಕ್ಷ್ಮಿ ಐಯ್ಯಂಗಾರ್‌ ನ್ಯಾಯಾಲಯದ ಸೂಚನೆಯಂತೆ ಚುಟುಕಾಗಿ ತಮ್ಮ ಪ್ರತ್ಯುತ್ತರ ಮಂಡಿಸಿದರು.