ED & Karnataka HC 
ಸುದ್ದಿಗಳು

ಮುಡಾ ಮಾಜಿ ಆಯುಕ್ತ ನಟೇಶ್‌ ಸಮನ್ಸ್‌ ರದ್ದತಿ ಆದೇಶಕ್ಕೆ ತಡೆ ಕೋರಿದ ಇ ಡಿ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರು‌ 11 ಪ್ರಕರಣಗಳಲ್ಲಿ ಲೋಕಾಯುಕ್ತ ವಿಚಾರಣೆ ಎದುರಿಸುತ್ತಿದ್ದಾರೆ. ಆದರೆ, ಅವರ ವಿರುದ್ಧ ಇ ಡಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆಕ್ಷೇಪಿಸಿದ ಹಿರಿಯ ವಕೀಲ ದುಷ್ಯಂತ್‌ ದವೆ.

Bar & Bench

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಗೆ ಬದಲಿ ನಿವೇಶನ ಹಂಚಿಕೆ ಮಾಡಿದ್ದ ಆರೋಪದ ಸಂಬಂಧ ಮುಡಾದ ಮಾಜಿ ಆಯುಕ್ತ ಡಾ. ಡಿ ಬಿ ನಟೇಶ್‌ಗೆ ಜಾರಿ ಮಾಡಿದ್ದ ಸಮನ್ಸ್‌ ರದ್ದುಪಡಿಸಿದ್ದ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ಕೋರಿದ್ದ ಮಧ್ಯಂತರ ಅರ್ಜಿಯ ಆದೇಶವನ್ನು ವಿಭಾಗೀಯ ಪೀಠ ಗುರುವಾರ ಕಾಯ್ದಿರಿಸಿದೆ.

ಡಾ. ನಟೇಶ್‌ ಪ್ರಕರಣದ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯನ್ನು ಮುಖ್ಯ ನ್ಯಾಯಮೂತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠ ನಡೆಸಿತು.

ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ಗಳಾದ ಎಸ್‌ ವಿ ರಾಜು ಮತ್ತು ಅರವಿಂದ್‌ ಕಾಮತ್‌ ಅವರು “ಏಕಸದಸ್ಯ ಪೀಠದ ಆದೇಶದಿಂದಾಗಿ ತನಿಖೆಯು ಸ್ಥಗಿತವಾಗಿದ್ದು, ಆಕ್ಷೇಪಾರ್ಹವಾದ ಆದೇಶವು ಮುಂದೆ ನಡೆಸಬಹುದಾದ ಎಲ್ಲಾ ಶೋಧ ಕಾರ್ಯಗಳಿಗೆ ಅಡ್ಡಿಯಾಗಲಿದೆ. ಮೇಲ್ನೋಟಕ್ಕೆ ಏಕಸದಸ್ಯ ಪೀಠವು ದೋಷಪೂರಿತ ಎಂದು ಕಂಡುಬಂದರೆ ಅದಕ್ಕೆ ತಡೆಯಾಜ್ಞೆ ನೀಡಬೇಕು” ಎಂದು ವಾದಿಸಿದರು.

ಮುಂದುವರೆದು, "ಏಕಸದಸ್ಯ ಪೀಠವು ನಟೇಶ್‌ ಅವರ ಅರ್ಜಿಯನ್ನು ಪುರಸ್ಕರಿಸುವ ಮೂಲಕ ಅವರ ಮನೆಯಲ್ಲಿ ಇ ಡಿ ನಡೆಸಿರುವ ಶೋಧ ಮತ್ತು ಆನಂತರ ಅಕ್ರಮ ಹಣ ವರ್ಗಾವಣೆ ಕಾಯಿದೆ ಸೆಕ್ಷನ್‌ 17(1)(f)ರ ಅಡಿ ದಾಖಲಿಸಿರುವ ಹೇಳಿಕೆಯು ಕಾನೂನುಬಾಹಿರ ಮತ್ತು ಅಸಿಂಧುವಾಗಲಿದೆ ಎಂದು ಹೇಳಿದೆ. ಅಲ್ಲದೇ, ಸೆಕ್ಷನ್‌ 50ರ ಅಡಿ ನೀಡಿರುವ ನೋಟಿಸ್‌ ಅನ್ನು ವಜಾಗೊಳಿಸಲಾಗಿದೆ” ಎಂದು ಆಕ್ಷೇಪಿಸಿದರು.

ಪ್ರತ್ಯುತ್ತರ ದಾಖಲಿಸುವ ವೇಳೆ ಕಾಮತ್‌ ಅವರು “ಕ್ರಿಮಿನಲ್‌ ಚಟುವಟಿಕೆಯಿಂದ ಮುಖ್ಯಮಂತ್ರಿ ಪತ್ನಿ ಬಿ ಎಂ ಪಾರ್ವತಿ ಅವರು 14 ನಿವೇಶನಗಳನ್ನು ಪಡೆದಿದ್ದಾರೆ. ಕೆಲವು ಪ್ರಭಾವಿಗಳು 14 ನಿವೇಶನಗಳನ್ನು ಹಂಚಿಕೆ ಮಾಡುವಂತೆ ನಟೇಶ್‌ಗೆ ನಿರ್ದೇಶಿಸಿದ್ದಾರೆ. ಎಫ್‌ಐಆರ್‌ ದಾಖಲಾಗಿರುವುದರಿಂದ ನಟೇಶ್‌ಗೆ ಸಮನ್ಸ್‌ ಜಾರಿ ಮಾಡಲಾಗಿದೆ. ಸಮನ್ಸ್‌ ಪ್ರಶ್ನಿಸಿರುವುದನ್ನು ಮೀರಿ ಮೂಲ ಅಪರಾಧ ನಡೆದಿದೆಯೇ ಇಲ್ಲವೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸಲಾಗದು. ಯಾವ ದಾಖಲೆಯನ್ನು ನೀಡಿದ್ದೇನೆ ಎಂಬುದು ನಟೇಶ್‌ಗೆ ತಿಳಿದಿದೆ” ಎಂದರು.

ನಟೇಶ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ದುಷ್ಯಂತ್‌ ದವೆ ಅವರು “ಭೂಮಿ ನೀಡಿರುವವರಿಗೆ ಮುಡಾ ನಿವೇಶನ ಹಂಚಿಕೆ ಮಾಡಿದೆ. ಇಲ್ಲಿ ಅಕ್ರಮ ಹಣ ವರ್ಗಾವಣೆ ಎಲ್ಲಿ ಆಗಿದೆ? ನಿವೇಶನ ನೀಡಿರುವುದು ತಪ್ಪು ನಿರ್ಧಾರವಾಗಿರಬಹುದು. ಆದರೆ, ಕ್ರಿಮಿನಲ್‌ ಚಟುವಟಿಕೆಯಿಂದ ಹಣ ವರ್ಗಾವಣೆಯಾಗಿಲ್ಲ. ಇಲ್ಲಿ ಅಪರಾಧ ಪ್ರಕ್ರಿಯೆಯೇ ಇಲ್ಲ. ಅನುಮತಿ ಪಡೆಯದೇ ಮುಡಾ ವಶಪಡಿಸಿಕೊಂಡಿರುವುದಕ್ಕೆ ಪರಿಹಾರವಾಗಿ ನಿವೇಶನ ಹಂಚಿಕೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ ಎಂ ಪಾರ್ವತಿ ಅವರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಆಯುಕ್ತನಾಗಿ ನಾನು ಮಾಡುವುದು ಏನೂ ಇರಲಿಲ್ಲ. ಮುಡಾದ ಶಾಸನಬದ್ಧ ನೀತಿಯ ಭಾಗವಾಗಿ ನಿವೇಶನ ಹಂಚಿಕೆಯಾಗಿದೆ. ಇದರಲ್ಲಿ ಅಪರಾಧ ಯಾವುದೂ ಇಲ್ಲ” ಎಂದರು.

“ಇಲ್ಲಿ ಸ್ಪಷ್ಟವಾಗಿ ನೋಡಿದರೆ ಅಪರಾಧ ಪ್ರಕ್ರಿಯೆ ಇಲ್ಲ. ಜೆಡಿಎಸ್‌, ಕಾಂಗ್ರೆಸ್‌ ಮತ್ತು ಬಿಜೆಪಿ ಸರ್ಕಾರಗಳು ನಿವೇಶನಗಳನ್ನು ಹಂಚಿಕೆ ಮಾಡಿವೆ. ಅದನ್ನು ಈಗ ಇ ಡಿ ಆ ಲಕ್ಷಾಂತರ ಪ್ರಕರಣಗಳನ್ನು ಹೊರತೆಗೆದು ಇವೆಲ್ಲಾ ಅಪರಾಧ ಪ್ರಕ್ರಿಯೆ ಎಂದು ಹೇಳಿ ಮುಗ್ಧ ಜನರ ಬೆನ್ನತ್ತುತ್ತೇವೆ ಎಂದು ಹೇಳಬಹುದೇ? ಈ ಪ್ರಶ್ನೆ ಈಗ ನ್ಯಾಯಾಲಯದ ಮುಂದಿದೆ” ಎಂದರು.

“ಸರ್ಕಾರದ ಮುಗ್ಧ ಕ್ರಮವನ್ನು ಅಪರಾಧ ಎಂದು ಪರಿಗಣಿಸಲಾಗದು. ಅದು ಇ ಡಿಯ ಅಧಿಕಾರವಲ್ಲ ಮತ್ತು ವಿಜಯ್‌ ಮದಲ್‌ಲಾಲ್‌ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪನ್ನು ಹಾಗೆ ಪರಿಗಣಿಸಬಾರದು. ನ್ಯಾಯಾಲಯವು ಕಾನೂನಿನ ನ್ಯಾಯಾಲಯ ಮಾತ್ರವಲ್ಲ. ಮುಗ್ಧ ಜನರ ಹಕ್ಕುಗಳನ್ನು ರಕ್ಷಿಸುವ ಸಮಾನತೆಯ ನ್ಯಾಯಾಲಯ ಕೂಡಾ (ಕೋರ್ಟ್‌ ಆಫ್‌ ಈಕ್ವಿಟಿ)” ಎಂದರು.

“ನಂಬಲು ಸಕಾರಣಗಳಿದ್ದಾಗ ತನಿಖೆ ಆರಂಭಿಸಬೇಕು. ಸಕಾರಣವಾದ ನಂಬಿಕೆಗಳು ಇಲ್ಲದಿದ್ದಾಗ ಇ ಡಿ ಪ್ರವೇಶ ಮಾಡಲಾಗದು. ಕಾರಣಗಳನ್ನು ತೋರಿಸಲು ಇ ಡಿಗೆ ಏಕಸದಸ್ಯ ಪೀಠ ಆದೇಶಿಸಿತ್ತು. ಇ ಡಿಯು ಮುಚ್ಚಿದ ಲಕೋಟೆಯಲ್ಲಿ ಕಾರಣಗಳನ್ನು ಸಲ್ಲಿಸಿತ್ತು. ಏಕಸದಸ್ಯ ಪೀಠವು ಸಕಾರಣಗಳು ಇಲ್ಲ ಎಂದಿದೆ. ಇದಕ್ಕಿಂತ ಅಧಿಕಾರ ದುರ್ಬಳಕೆಯನ್ನು ನಾನು ಹಿಂದೆಂದೂ ನೋಡಿಲ್ಲ” ಎಂದರು.

“ಸೆಕ್ಷನ್‌ 50ರ ಅಡಿ ನೋಟಿಸ್‌ ನೀಡುತ್ತಿದ್ದಂತೆ ಜಾರಿ ನಿರ್ದೇಶನಾಲಯ ಬರುತ್ತಿದೆ ಎಂಬುದು ಗೊತ್ತಾಗುತ್ತದೆ. ದೇಶಾದ್ಯಂತ ನಡೆಯುತ್ತಿರುವುದು ಇದೇ. ಸರ್ಕಾರಗಳನ್ನು ಉರುಳಿಸಲು ಇದು ದಾರಿಯಾಗಿದೆ. ಇದು ಬಿಜೆಪಿ ಅಧಿಕಾರದಲ್ಲಿರುವ ಒಂದೇ ಒಂದು ರಾಜ್ಯದಲ್ಲಿ ಏಕೆ ಆಗಿಲ್ಲ ಎಂದು ನನಗೆ ನಾನೇ ಕೇಳಿಕೊಳ್ಳುತ್ತಿದ್ದೇನೆ? ಇದು ವಿಪಕ್ಷಗಳಿರುವ ಕರ್ನಾಟಕ, ತಮಿಳುನಾಡುಗಳಲ್ಲಿ ಆಗುತ್ತಿದೆ. ಈ ರಾಜ್ಯಗಳು ಇ ಡಿ ಬೇಗೆ ಅನುಭವಿಸುತ್ತಿವೆ. ಇದನ್ನು ನ್ಯಾಯಾಲಯ ರಕ್ಷಿಸಬೇಕು. ಅಧಿಕಾರ ಚಲಾಯಿಸುವುದರ ಹಿಂದಿನ ಉದ್ದೇಶವನ್ನು ನ್ಯಾಯಾಲಯ ನೋಡಬೇಕಿದೆ” ಎಂದರು.

“ರಾಜ್ಯದ ಮೂರು ರಾಜಕೀಯ ಪಕ್ಷಗಳ 38 ಹಿರಿಯ ರಾಜಕಾರಣಿಗಳ ವಿರುದ್ಧದ ಪ್ರಕರಣಗಳು ಕಳೆದ 30 ವರ್ಷಗಳಿಂದ ಲೋಕಾಯುಕ್ತ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ. ಮಾಜಿ ಮುಖ್ಯಮಂತ್ರಿಯೊಬ್ಬರು‌ 11 ಪ್ರಕರಣಗಳಲ್ಲಿ ಲೋಕಾಯುಕ್ತ ವಿಚಾರಣೆ ಎದುರಿಸುತ್ತಿದ್ದಾರೆ. ಆದರೆ, ಅವರ ವಿರುದ್ಧ ಇ ಡಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ” ಎಂದು ಬಲವಾಗಿ ಆಕ್ಷೇಪಿಸಿದರು.

“ಪಾರ್ವತಿ ಅವರನ್ನು ನಾವು ಇಲ್ಲಿ ಸಮರ್ಥಿಸುತ್ತಿಲ್ಲ. ನಟೇಶ್‌ ಏನು ಮಾಡಿದ್ದಾರೆ? ಶಾಸನಬದ್ಧ ನಿಯಮ, ಕಾನೂನು ಮತ್ತು ಮುಡಾ ನಿರ್ಣಯದ ಪ್ರಕಾರ ನಡೆದಿದ್ದಾರೆ. ಇದಕ್ಕಾಗಿ ನಟೇಶ್‌ಗೆ ಏಕೆ ಶಿಕ್ಷೆ ನೀಡಬೇಕು? ಇ ಡಿಯು ಮನೆಗೆ ಬಂದರೆ ನೆರೆಹೊರೆಯವರು ಹೇಗೆ ನೋಡುತ್ತಾರೆ ಎಂಬುದನ್ನು ನ್ಯಾಯಾಲಯ ಅರಿಯಬೇಕು” ಎಂದರು.

“ನಟೇಶ್‌ ಮನೆಯಲ್ಲಿ ಶೋಧ ನಡೆಸಿದಾಗ ಫೋನ್‌ ಬಿಟ್ಟು ಬೇರೇನೂ ಇ ಡಿಗೆ ದೊರೆತಿಲ್ಲ. ಏಕಸದಸ್ಯ ಪೀಠದ ಆದೇಶಕ್ಕೆ ತಡೆ ಏಕೆ ಬೇಕು ಎಂದರೆ ಮತ್ತೆ 100 ಸಮನ್ಸ್‌ ಜಾರಿ ಮಾಡಲು. ಪಾರ್ವತಿ ಅವರಿಗೆ 14 ನಿವೇಶನ ಹಂಚಿಕೆ ಅಪರಾಧ ಎಂದು ಹೇಳಲಾಗಿದೆ. ಈ ದೇಶದಲ್ಲಿ ಏನು ನಡೆಯುತ್ತಿದೆ? ವಿಜಯ್‌ ಮದನ್‌ಲಾಲ್‌ ಪ್ರಕರಣದಲ್ಲಿನ ಅಧಿಕಾರ ಇದಲ್ಲ. ಇದು ಜನರ ಸ್ವಾತಂತ್ರ್ಯ, ಸಾಂವಿಧಾನಿಕ ಹಕ್ಕುಗಳ ಮೇಲೆ ಗಂಭೀರ ಪರಿಣಾಮ ಉಂಟು ಮಾಡಲಿದೆ. ನಂಬಲು ಸಕಾರಣಗಳು ಇಲ್ಲ ಎಂದು ಏಕಸದಸ್ಯ ಪೀಠ ಹೇಳಿದೆ. ಇ ಡಿ ಹೀಗೆ ಮಾಡುವುದು ಸರಿಯಲ್ಲ” ಎಂದರು.  

“ತನಿಖೆಯ ವಿವರಣೆಯ ಕುರಿತು ನೋಟಿಸ್‌ನಲ್ಲಿ ಉಲ್ಲೇಖವಿರಲಿಲ್ಲ. ಇದಕ್ಕಾಗಿ ಕಡತ ಸಲ್ಲಿಸುವಂತೆ ಇ ಡಿಗೆ ಏಕಸದಸ್ಯ ಪೀಠ ಆದೇಶಿಸಿತ್ತು. ಕಾಯಿದೆ ಅಡಿ ಇ ಡಿ ಅಧಿಕಾರಿಗಳಿಗೆ ಅಸಮಂಜಸ ತನಿಖೆ ನಡೆಸಲು ಅಧಿಕಾರ ನೀಡಿಲ್ಲ. ಅಕ್ರಮ ಹಣ ವರ್ಗಾವಣೆ ತಡೆಯುವುದು ಕಾಯಿದೆಯ ಉದ್ದೇಶ. ಹಣವೇ ಇರಬೇಕು ಎಂದೇನಿಲ್ಲ. ಆದರೆ, 14 ನಿವೇಶನ ನೀಡುವುದು ಅಕ್ರಮ ಹಣ ವರ್ಗಾವಣೆಯೇ?” ಎಂದು ಪ್ರಶ್ನಿಸಿದರು. ಸುದೀರ್ಘವಾದ ಆಲಿಸಿದ ಪೀಠವು ಆದೇಶ ಕಾಯ್ದಿರಿಸಿತು.