Ranya Rao and Karnataka High Court 
ಸುದ್ದಿಗಳು

ಚಿನ್ನ ಕಳ್ಳ ಸಾಗಣೆ ಪ್ರಕರಣ: ರನ್ಯಾ ರಾವ್‌, ತರುಣ್‌ ರಾಜು ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

“ರನ್ಯಾಗೆ ಹೇಗೆ ಪ್ರೊಟೊಕಾಲ್‌ ನೀಡಲಾಗಿದೆ ಎಂದು ಪತ್ತೆಹಚ್ಚಲಾಗಿದೆಯೇ” ಎಂದು ಡಿಆರ್‌ಐಗೆ ಪೀಠ ಪ್ರಶ್ನಿಸಿತು. ಅದಕ್ಕೆ “ಸದ್ಯಕ್ಕೆ ಚಿನ್ನದ ಮೂಲ ಬೆನ್ನತ್ತಲಾಗಿದೆ. ರನ್ಯಾ ಸಾಕು ತಂದೆ ರಾಮಚಂದ್ರ ರಾವ್‌ ಹೇಳಿಕೆ ದಾಖಲಿಸಿಲ್ಲ” ಎಂದ ಡಿಆರ್‌ಐ.

Bar & Bench

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಆರೋಪಿಗಳಾಗಿರುವ ನಟಿ ರನ್ಯಾ ರಾವ್‌ ಅಲಿಯಾಸ್‌ ಹರ್ಷವರ್ಧಿನಿ ರನ್ಯಾ ಮತ್ತು ತರುಣ್‌ ಕುಂಡೂರು ರಾಜು ಅವರ ಜಾಮೀನು ಅರ್ಜಿಗಳ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಕಾಯ್ದಿರಿಸಿದೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿದೆ.

ರನ್ಯಾ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಕಸ್ಟಮ್ಸ್‌ ಕಾಯಿದೆಗೆ ವಿರುದ್ದವಾಗಿ ರನ್ಯಾ ಮನೆಯಲ್ಲಿ ನಡೆಸಿರುವ ಶೋಧ ಮತ್ತು ಜಫ್ತಿಯು ಕಾನೂನುಬಾಹಿರವಾಗಿದೆ. ಕಸ್ಟಮ್ಸ್‌ ಕಾಯಿದೆ ಸೆಕ್ಷನ್‌ 102 ಅನ್ನು ಅನುಪಾಲಿಸಿಲ್ಲ. ಇದನ್ನು ಉಲ್ಲಂಘಿಸಿರುವುದರಿಂದ ಇಡೀ ಜಫ್ತಿ ಪ್ರಕ್ರಿಯೆ ಹೋಗಲಿದೆ. ಆಗ ಎಲ್ಲವೂ ರದ್ಧಾಗಲಿದೆ. ಸೆಕ್ಷನ್‌ 102ರ ಅಡಿ ವ್ಯಕ್ತಿಯನ್ನು ಶೋಧಕ್ಕೆ ಒಳಪಡಿಸಬೇಕಾದರೆ ಅವರನ್ನು ಮೊದಲಿಗೆ ಕಸ್ಟಮ್ಸ್‌ನ ಗೆಜೆಟೆಡ್‌ ಅಧಿಕಾರಿ ಅಥವಾ ಮ್ಯಾಜಿಸ್ಟ್ರೇಟ್‌ ಬಳಿ ಕರೆದೊಯ್ಯಬೇಕು” ಎಂದರು.

“ಮಹಜರ್‌ ನೋಟಿಸ್‌ನಲ್ಲಿ ವ್ಯತ್ಯಾಸಗಳಿವೆ. ರನ್ಯಾ ಮನೆಯಲ್ಲಿ ಶೋಧ ನಡೆಸುವುದಕ್ಕೂ ಮುನ್ನ ಆಕೆಯಿಂದ ಒಪ್ಪಿಗೆ ಪಡೆಯಲಾಗಿದೆ ಎನ್ನಲಾಗಿದೆ. ಎಸ್‌ಐಒ ಶೋಧ ನಡೆಸಿದ್ದು, ಬಂಧನ ಮಾಡಿದ ತಂಡವನ್ನು ಮುನ್ನಡೆಸಿದ್ದ ಅಧಿಕಾರಿಯನ್ನು ಗೆಜೆಟೆಡ್‌ ಅಧಿಕಾರಿ ಎಂದು ತೋರಿಸಲಾಗಿದೆ. ರನ್ಯಾ ಪತಿಗೆ ಕರೆ ಮಾಡಿ ರನ್ಯಾ ಬಂಧಿಸಿರುವ ವಿಚಾರ ತಿಳಿಸಲಾಗಿದೆ. ವಾಸ್ತವದಲ್ಲಿ ಲಿಖಿತವಾಗಿ ಸ್ನೇಹಿತರು ಅಥವಾ ಕುಟುಂಬದವರಿಗೆ ಬಂಧನದ ಮಾಹಿತಿ ನೀಡಬೇಕು. ಇದನ್ನೂ ಪಾಲಿಸಲಾಗಿಲ್ಲ” ಎಂದರು.

ಎರಡನೇ ಆರೋಪಿ ತರುಣ್‌ ರಾಜು ಪ್ರತಿನಿಧಿಸಿದ್ದ ವಕೀಲ ಬಿಪಿನ್‌ ಹೆಗ್ಡೆ ಅವರು “ತರುಣ್‌ ಅವರು ರನ್ಯಾಗೆ ಚಿನ್ನ ತಲುಪಿಸಬೇಕಿಲ್ಲ. ದುಬೈನಲ್ಲಿ ಆಕೆ ಸ್ವಂತವಾಗಿ ಚಿನ್ನ ಖರೀದಿಸಬಹುದು. ಆಕೆಯೊಂದಿಗೆ ಇದ್ದೆ ಎಂಬ ಕಾರಣಕ್ಕೆ ಪ್ರಕರಣದಲ್ಲಿ ರಾಜು ಸಿಲುಕಿಸಲಾಗಿದೆ” ಎಂದರು.

ಆಗ ಪೀಠವು ತರುಣ್‌ಗೆ ಚಿನ್ನ ಖರೀದಿಸಲು ರನ್ಯಾ ಹಣ ನೀಡಿದ್ದಾರೆ ಎಂದು ಕಂದಾಯ ಗುಪ್ತಚರ ಇಲಾಖೆ ಹೇಳಿದೆಯಲ್ಲಾ ಎಂದಿತು. ಇದಕ್ಕೆ ಬಿಪಿನ್‌ ಅವರು “ಡಿಆರ್‌ಐ ಹೇಳಿಕೆಯು ತನಿಖೆಯಲ್ಲಿ ರುಜುವಾತಾಗಬೇಕಿದೆ. ಒಂದೊಮ್ಮೆ ರನ್ಯಾ ಅವರು ಕಸ್ಟಮ್ಸ್‌ ಸುಂಕ ಪಾವತಿಸಿಲ್ಲ ಎಂದರೆ ತರುಣ್‌ ರಾಜುವನ್ನು ಬಂಧಿಸಲಾಗದು. ತರುಣ್‌ ದುಬೈಗೆ ತೆರಳಿ ಅಲ್ಲಿ ರನ್ಯಾಗೆ ಚಿನ್ನ ನೀಡಿದ್ದಾರೆ ಮತ್ತು ರನ್ಯಾ ಕಸ್ಟಮ್ಸ್‌ ಸುಂಕ ಪಾವತಿಸಿಲ್ಲ ಎಂಬ ಆರೋಪ ಮಾಡಲಾಗಿದೆ. ಇದಕ್ಕೆ ಹೇಳಿಕೆ ದಾಖಲಿಸಿರುವುದನ್ನು ಹೊರತುಪಡಿಸಿ ಬೇರೆ ಯಾವುದೇ ಸಾಕ್ಷಿ ಇಲ್ಲ” ಎಂದರು.

ಡಿಅರ್‌ಐ ಪ್ರತಿನಿಧಿಸಿದ್ದ ವಕೀಲ ಮಧು ಎನ್.ರಾವ್‌ ಅವರು “ರನ್ಯಾ ಅವರು ಚಿನ್ನ ಕಳ್ಳ ಸಾಗಣೆ ಮಾಡಿ ಅದನ್ನು ಮೂರನೇ ಆರೋಪಿ ಬೆಂಗಳೂರಿನ ನಿವಾಸಿ ಸಾಹಿಲ್‌ ಜೈನ್‌ಗೆ ತಲುಪಿಸುತ್ತಿದ್ದರು. ಸಾಹಿಲ್‌ ಈ ಹಿಂದೆ ಚಿನ್ನ ಕಳ್ಳ ಸಾಗಣೆ ವ್ಯವಹಾರದಲ್ಲಿದ್ದ. ರಾಜು ಚಿನ್ನ ಖರೀದಿಸಿ ರನ್ಯಾಗೆ ನೀಡಿದ್ದು, ಆಕೆ ಜೈನ್‌ಗೆ ಚಿನ್ನ ತಲುಪಿಸಿರುವುದಕ್ಕೆ ಲಿಂಕ್‌ ಇದೆ. ಎಲ್ಲಾ ಆರೋಪಿಗಳು ಸೇರಿ 100 ಕೆಜಿ ಸಂಗ್ರಹಿಸಿರುವುದಾಗಿ ಘೋಷಿಸಿದ್ದಾರೆ. ಇದರ ತನಿಖೆ ನಡೆಯುತ್ತಿದ್ದು, ಈ ಸಂಬಂಧ ರನ್ಯಾ ಹಾಗೂ ರಾಜು ಅವರ ಹೆಚ್ಚುವರಿ ಹೇಳಿಕೆ ಪಡೆಯಲು ವಿಚಾರಣಾಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ” ಎಂದರು.

“ರಾಜು ಅಮೆರಿಕಾದ ಪ್ರಜೆಯಾಗಿದ್ದು, ದುಬೈನಲ್ಲಿ ಚಿನ್ನ ಖರೀದಿಸಿ, ಜಿನೆವಾ ಅಥವಾ ಥಾಯ್ಲೆಂಡ್‌ಗೆ ಹೋಗುವುದಾಗಿ ಘೋಷಿಸಿ, ಚಿನ್ನವನ್ನು ಬೆಂಗಳೂರಿಗೆ ರವಾನಿಸಲು ರನ್ಯಾಗೆ ತಲುಪಿಸಿದ್ದಾನೆ. ರನ್ಯಾ ಮತ್ತು ರಾಜು ಒಟ್ಟಿಗೆ ದುಬೈಗೆ 31 ಬಾರಿ ಭೇಟಿ ನೀಡಿದ್ದು, 11 ಭೇಟಿ ಬಹಿರಂಗಪಡಿಸಲಾಗಿದೆ. ರನ್ಯಾ ಮತ್ತು ರಾಜು ಒಟ್ಟಿಗೆ ದುಬೈಗೆ ಪ್ರವಾಸ ಮಾಡಿ ಅಂದೇ ಬೆಂಗಳೂರಿಗೆ ವಾಪಸಾಗಿದ್ದಾರೆ. ಜಿನೆವಾಗೆ ಕಾಯ್ದಿರಿಸಿದ್ದ ವಿಮಾನದ ಟಿಕೆಟ್‌ ಅನ್ನು ರದ್ದುಪಡಿಸಲ್ಲ” ಎಂದರು.

ಈ ನಡುವೆ ಪೀಠವು “ರನ್ಯಾಗೆ ಹೇಗೆ ಪ್ರೊಟೊಕಾಲ್‌ ನೀಡಲಾಗಿದೆ ಎಂಬುದನ್ನು ಪತ್ತೆಹಚ್ಚಲಾಗಿದೆಯೇ” ಎಂದಿತು. ಅದಕ್ಕೆ ಮಧು ರಾವ್‌ ಅವರು “ಸದ್ಯಕ್ಕೆ ಚಿನ್ನದ ಮೂಲ ಬೆನ್ನತ್ತಲಾಗಿದೆ. ರನ್ಯಾ ಸಾಕು ತಂದೆ ಐಪಿಎಸ್‌ ಅಧಿಕಾರಿ ರಾಮಚಂದ್ರ ರಾವ್‌ ಅವರ ಹೇಳಿಕೆಯನ್ನು ಇನ್ನೂ ದಾಖಲಿಸಲಾಗಿಲ್ಲ” ಎಂದರು.